Site icon Vistara News

IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

IPL 2024

ಹೈದರಾಬಾದ್​​: ಇಲ್ಲಿ ಗುರುವಾರ ನಿಗದಿಯಾಗಿದ್ದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ (Sunrisers Hyderabad) ತಂಡ ಬೆವರು ಸುರಿಸದೇ 2024ನೇ ಆವೃತ್ತಿಯ (IPL 2024) ಐಪಿಎಲ್​ನ ಪ್ಲೇಆಫ್​​ಗೆ ಪ್ರವೇಶಿಸಿತು. ಕೋಲ್ಕತಾ ಮತ್ತು ರಾಜಸ್ಥಾನದ ನಂತರ ಐಪಿಎಲ್ 2024 ರ ಪ್ಲೇಆಫ್​​ಗೆ ಅರ್ಹತೆ ಪಡೆದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಎಸ್​ಆರ್​ಎಚ್​ ಪಾತ್ರವಾಯಿತು. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ (ಮೇ 16) ಗುಜರಾತ್ ವಿರುದ್ಧ ಸೆಣಸಬೇಕಾಗಿತ್ತು. ಆದರೆ ಪಂದ್ಯ ಟಾಸ್​ ಕೂಡ ಕಾಣದೆ ಮಳೆಯಿಂದಾಗಿ ರದ್ದಾಯಿತು. ಹೀಗಾಗಿ 2016ರ ಚಾಂಪಿಯನ್ಸ್ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಿಕೊಂಡಿತು.

2020ರ ಬಳಿಕ ಇದೇ ಮೊದಲ ಬಾರಿಗೆ ಸನ್ರೈಸರ್ಸ್ ಪ್ಲೇ ಆಫ್ ಹಂತ ತಲುಪಿದೆ. ಮಾಜಿ ಚಾಂಪಿಯನ್​ಗಳು ​2021, 2022 ಮತ್ತು 2023 ರಲ್ಲಿ ಕ್ರಮವಾಗಿ 8, 8 ಮತ್ತು 10 ನೇ ಸ್ಥಾನಗಳನ್ನು ಪಡೆದುಕೊಂಡಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್​ ​ಷಿಪ್​​ ಮತ್ತು ಏಕದಿನ ವಿಶ್ವಕಪ್ ಗೆಲುವಿನ ನಂತರ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿರುವ ನಾಯಕ ಪ್ಯಾಟ್ ಕಮಿನ್ಸ್, ಐಪಿಎಲ್ 2024 ರಲ್ಲಿ ನಿರ್ಭೀತ ಬ್ರಾಂಡ್ ಕ್ರಿಕೆಟ್ ಆಡುತ್ತಿದ್ದಾರೆ.

ಪಂದ್ಯಕ್ಕೆ ಮುಂಚಿತವಾಗಿ ನಿರಂತರವಾಗಿ ಮಳೆ ಸುರಿಯಿತು. 10 ಗಂಟೆ ದಾಟಿದರೂ ಪಿಚ್​ನಿಂದ ಟಾರ್ಪಾಲ್​ ತೆಗೆಯಲು ಸಾಧ್ಯವಾಗಲಿಲ್ಲ. ನಾಯಕರಾದ ಪ್ಯಾಟ್ ಕಮಿನ್ಸ್ ಮತ್ತು ಶುಬ್ಮನ್ ಗಿಲ್ ಪಿಚ್ ಅನ್ನು ಅನೇಕ ಬಾರಿ ಪರಿಶೀಲನೆ ನಡೆಸಿದರು. ಆದರೆ ಅವರು ತಮ್ಮ ತರಬೇತಿ ಕಿಟ್​​ ಧರಿಸಿದರೇ ಹೊರತು ಮ್ಯಾಚ್​ ಕಿಟ್​ ಧರಿಸಲಿಲ್ಲ. . ಮಳೆಯ ಹೊರತಾಗಿಯೂ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ತವರು ತಂಡವನ್ನು ಹುರಿದುಂಬಿಸಲು ದೊಡ್ಡ ಪ್ರಮಾಣದ ಪ್ರೇಕ್ಷಕರು ಇದ್ದರು. ಎಸ್ಆರ್​ಎಚ್​ ಪ್ಲೇಆಫ್​ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳಿಗಾಗಿ ಲಘು ಪ್ರದರ್ಶನ ಮತ್ತು ಸಂಗೀತ ಆಯೋಜಿಸಲಾಗಿತ್ತು.

ಇದನ್ನೂ ಓದಿ: IPL 2024 : ವಾಂಖೆಡೆ ಸ್ಟೇಡಿಯಮ್​ನಲ್ಲಿ ಗುದ್ದಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರು; ಇಲ್ಲಿದೆ ವಿಡಿಯೊ

ಹೈದರಾಬಾದ್​​ನ ನಡೆದ ಪಂದ್ಯದಲ್ಲಿ ಒಂದು ಅಂಕ ಗಳಿಸುವ ಮೂಲಕ ಸನ್​ರೈಸರ್ಸ್​ ಹೈದರಾಬಾದ್​​ 13 ಪಂದ್ಯಗಳಿಂದ 15 ಅಂಕಗಳನ್ನು ಗಳಿಸಿದೆ. ಮೇ 19ರಂದು ಪಂಜಾಬ್ ವಿರುದ್ಧ ತವರಿನಲ್ಲಿ ಸೆಣಸಲಿರುವ ಪ್ಯಾಟ್ ಕಮಿನ್ಸ್ ಪಡೆಗೆ ಅಗ್ರ ಎರಡು ಸ್ಥಾನಗಳನ್ನು ಗಳಿಸುವ ಅವಕಾಶವಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಕೆಆರ್ ವಿರುದ್ಧ ಕ್ವಾಲಿಫೈಯರ್ 1ರಲ್ಲಿ ಆಡುವ ಅವಕಾಶ ಸಿಗಲಿದೆ. . ಎಸ್​ಆರ್​​ಎಚ್​​ ಅರ್ಹತೆಯು ದೆಹಲಿ ಮತ್ತು ಲಕ್ನೋದ ಪ್ಲೇಆಫ್ ಭರವಸೆಗಳನ್ನು ಕೊನೆಗೊಳಿಸಿತು. ಶನಿವಾರ ಬೆಂಗಳೂರಿನಲ್ಲಿ ಆರ್​​ಸಿಬಿ ಮತ್ತು ಸಿಎಸ್​ಕೆ ನಡುವಿನ ಬಹುನಿರೀಕ್ಷಿತ ಪಂದ್ಯದ ಕಿಚ್ಚನ್ನು ಹೆಚ್ಚಿಸಿತು.

ಗುಜರಾತ್ ಗೆ ನಿರಾಶಾದಾಯಕ ಅಭಿಯಾನ

ಮಳೆಯಿಂದಾಗಿ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಿದ ನಂತರ ಗುಜರಾತ್ ತನ್ನ ಋತುವನ್ನು ಕೊನೆಯ ನಾಲ್ಕರಲ್ಲಿ ಕೊನೆಗೊಳಿಸಬೇಕಾಯಿತು. ಅಹ್ಮದಾಬಾದ್​ನಲ್ಲಿ ಕೆಕೆಆರ್ ವಿರುದ್ಧ ಜಿಟಿಯ ಕೊನೆಯ ತವರು ಪಂದ್ಯವೂ ಕೆಟ್ಟ ಹವಾಮಾನದಿಂದಾಗಿ ರದ್ದಾಗಿತ್ತು. 2022 ರಲ್ಲಿ ಪ್ರಶಸ್ತಿ ಗೆದ್ದ ಮತ್ತು 2022 ರಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಗುಜರಾತ್​ಗೆ ಇದು ನಿರಾಶಾದಾಯಕ ಅಭಿಯಾನ. ಏಕೆಂದರೆ ಹೊಸ ನಾಯಕ ಶುಭ್ಮನ್ ಗಿಲ್ ಅವರ ಅಡಿಯಲ್ಲಿ ತಂಡವು ಪ್ರತಿಭೆಯ ಕಿಡಿಗಳನ್ನು ಹೊಂದಿದ್ದರೂ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿತು.

ಸನ್ರೈಸರ್ಸ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಎರಡನೇ ಸ್ಥಾನಕ್ಕೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ. ನಾಲ್ಕು ಪಂದ್ಯಗಳ ಸೋಲಿನ ಹಾದಿಯಲ್ಲಿರುವ ರಾಜಸ್ಥಾನ್ ಭಾನುವಾರ ಗುವಾಹಟಿಯಲ್ಲಿ ಕೆಕೆಆರ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಕಳೆದುಕೊಳ್ಳಲಿ ಎಂದು ಅವರು ಪ್ರಾರ್ಥಿಸಬೇಕಾಗಿದೆ. ರಾಜಸ್ಥಾನ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದರೆ, ಆ ತಂಡ ಎರಡನೇ ಸ್ಥಾನ ಪಡೆಯುತ್ತದೆ.

Exit mobile version