Site icon Vistara News

IPL 2024 : ಐಪಿಎಲ್​ನಿಂದ ಹೊರಗುಳಿದ ಆಟಗಾರರು, ಬದಲಿ ಆಟಗಾರರ ಪಟ್ಟಿ ಇಲ್ಲಿದೆ

IPL 2024

ಬೆಂಗಳೂರು: ಐಪಿಎಲ್ 2024ರ (IPL 2024) ಆವೃತ್ತಿಯು ಮಾರ್ಚ್ 22 ರಂದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಹತ್ತು ತಂಡಗಳು ಪ್ರಶಸ್ತಿಗಾಗಿ ಮತ್ತೆ ಸ್ಪರ್ಧೆಗೆ ಇಳಿಯಲಿದ್ದು, ಗಾಯಗಳ ಸರಮಾಲೆ ಎಲ್ಲ ಫ್ರಾಂಚೈಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗೆ ಗಾಯ ಹಾಗೂ ಇನ್ನಿತರ ಕಾರಣಕ್ಕೆ ಐಪಿಎಲ್​​ನ 17 ನೇ ಆವೃತ್ತಿಯಿಂದ ಹೊರಗುಳಿದ ಆಟಗಾರರ ವಿವರ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್

ಡೆವೊನ್ ಕಾನ್ವೇ: ನ್ಯೂಜಿಲೆಂಡ್ ಮತ್ತು ಸಿಎಸ್​​ಕೆ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಗಿರುವ ಹೆಬ್ಬೆರಳಿನ ಗಾಯದಿಂದಾಗಿ ಐಪಿಎಲ್ 2024 ರ ಮೊದಲಾರ್ಧದಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್​ನಲ್ಲಿ ಕಾನ್ವೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 2023ರಲ್ಲಿ ಸಿಎಸ್​ಕೆ ಪರ 16 ಪಂದ್ಯಗಳಿಂದ 672 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅಂದಾಜು ಎಂಟು ವಾರಗಳ ಚೇತರಿಕೆ ಅವಧಿಯೊಂದಿಗೆ ಕಾನ್ವೆ ಅವರ ಅನುಪಸ್ಥಿತಿಯಿಂದಾಗಿ ಸಿಎಸ್​ಕೆ ತನ್ನ ಅಗ್ರ ಕ್ರಮಾಂಕದ ಸಂಯೋಜನೆಯನ್ನು ಮಾಡಲು ಹೆಣಗಾಡಬೇಕಾಗಿದೆ.

ಮಥೀಶಾ ಪಥಿರಾನಾ: ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಟಿ 20 ಐ ಸರಣಿಯ ಸಮಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದ ಪಥಿರಾನಾ ಶ್ರೀಲಂಕಾ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಿಂದ ಹೊರಗುಳಿದಿದ್ದಾರೆ. ಪಥಿರಾನಾ ಗ್ರೇಡ್ 1 ಸ್ನಾಯುಸೆಳೆತದಿಂದ ಬಳಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಹೇಳಿದೆ. 21ರ ಹರೆಯದ ಆಟಗಾರ ಕನಿಷ್ಠ ನಾಲ್ಕು ವಾರಗಳ ಕಾಲ ಆಟದಿಂದ ಹೊರಗುಳಿಯುವ ಸಾಧ್ಯತೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್

ಹ್ಯಾರಿ ಬ್ರೂಕ್: ಇಂಗ್ಲೆಂಡ್​ನ ಸ್ಟಾರ್ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್ ಡಿಸೆಂಬರ್ 2023 ರಿಂದ ಆಟದಿಂದ ಹೊರಗುಳಿದಿದ್ದಾರೆ ಮತ್ತು ಐದು ಟೆಸ್ಟ್ ಪಂದ್ಯಗಳಿಗಾಗಿ ತಮ್ಮ ತಂಡದ ಇತ್ತೀಚಿನ ಭಾರತ ಪ್ರವಾಸ ತಪ್ಪಿಸಿಕೊಂಡಿದ್ದಾರೆ. ತನ್ನ ಅಜ್ಜಿಯ ನಿಧನದ ನಂತರ ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಕ್ರಿಕೆಟ್​ನಿಂದ ಬಿಡುವು ತೆಗೆದುಕೊಂಡಿದ್ದೇನೆ ಎಂದು 25 ವರ್ಷದ ಆಟಗಾರ ಹೇಳಿದ್ದಾರೆ. ಬ್ರೂಕ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ 13.25 ಕೋಟಿ ರೂ.ಗೆ ಖರೀದಿಸಿತು. ಆದರೆ 11 ಪಂದ್ಯಗಳಲ್ಲಿ 190 ರನ್ ಗಳಿಸಿ ಸಂಪೂರ್ಣ ವೈಫಲ್ಯ ಕಂಡರು. ಎಸ್​ಆರ್​ಎಚ್ ಬಿಡುಗಡೆ ಮಾಡಿದ ಬಳಿಕ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 4 ಕೋಟಿ ರೂಪಾಯಿಗೆ ಹರಾಜಾದರು. ಆದರೀಗ ಆಡುವುದಿಲ್ಲ ಎಂದು ಹೇಳಿದ್ದಾರೆ.

ಲುಂಗಿ ಎನ್​ಗಿಡಿ: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್​ಗಿಡಿ ಆರಂಭಿಕ ಪಂದ್ಯಕ್ಕೆ ಒಂದು ವಾರ ಬಾಕಿ ಇರುವಾಗ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಭಾರತ ವಿರುದ್ಧದ ಟಿ 20 ಐ ಸರಣಿಯ ಸಮಯದಲ್ಲಿ ಎಡ ಪಾದದ ಉಳುಕಿನಿಂದ ಬಳಲುತ್ತಿದ್ದ ಎನ್​ಗಿಡಿ ಜನವರಿಯಿಂದ ಆಡಿಲ್ಲ. ಎನ್​ಗಿಡಿ ಅವರನ್ನು 2022 ರಲ್ಲಿ ಡೆಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಎನ್​ಗಿಡಿ ಬದಲಿಗೆ ಆಸ್ಟ್ರೇಲಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ಜೇಕ್ ಫ್ರೇಸರ್-ಮೆಗ್​ಕು ರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಕೋಲ್ಕತಾ ನೈಟ್ ರೈಡರ್ಸ್

ಜೇಸನ್ ರಾಯ್​: ಇಂಗ್ಲೆಂಡ್ ಬ್ಯಾಟರ್​ ಜೇಸನ್ ರಾಯ್ ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ 2024 ರ ಋತುವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ಹೊರಕ್ಕೆ ಉಳಿದಿದ್ದಾರೆ. ರಾಯ್ 2023 ರಲ್ಲಿ ನೈಟ್ ರೈಡರ್ಸ್ ಪರ ಎಂಟು ಪಂದ್ಯಗಳನ್ನು ಆಡಿದ್ದು, 151.60 ಸ್ಟ್ರೈಕ್ ರೇಟ್ನಲ್ಲಿ 285 ರನ್ ಗಳಿಸಿದ್ದಾರೆ. ರಾಯ್ ಈ ಹಿಂದೆ 2020 ಮತ್ತು 2022 ರಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು. ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಅವರನ್ನು ಕೆಕೆಆರ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸಾಲ್ಟ್ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು ಅವರು ತಮ್ಮ ಮೂಲ ಬೆಲೆ ೧.೫ ಕೋಟಿ ರೂ.ಗಳಲ್ಲಿ ನೈಟ್ ರೈಡರ್ಸ್ ಸೇರಲಿದ್ದಾರೆ.

ಇದನ್ನೂ ಓದಿ : IPL 2024 : ಐಪಿಎಲ್​ ಇತಿಹಾಸದ ಬೃಹತ್​ ಜೊತೆಯಾಟದ ದಾಖಲೆಗಳ ವಿವರ ಇಲ್ಲಿದೆ

ಗಸ್ ಅಟ್ಕಿನ್ಸನ್: ಕೆಲಸದ ಹೊರೆ ನಿರ್ವಹಣೆಯ ಕಾರಣದಿಂದಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗಸ್​ ಅವರಿಗೆ ನಿರಾಕ್ಷೇಪಣಾ ಪತ್ರ ಕೊಟ್ಟಿರಲಿಲ್ಲ. ಹೀಗಾಗಿ ತಮ್ಮ ಚೊಚ್ಚಲ ಐಪಿಎಲ್ ಋತುವಿನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. 12 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅಟ್ಕಿನ್ಸನ್ ಅವರನ್ನು 2024ರ ಐಪಿಎಲ್ ಹರಾಜಿನಲ್ಲಿ ಕೆಕೆಆರ್ 1 ಕೋಟಿ ರೂ.ಗೆ ಖರೀದಿಸಿತ್ತು. ಅವರ ಬದಲಿಗೆ ದುಷ್ಮಂತ ಚಮೀರಾ ಅವರನ್ನು ಕೆಕೆಆರ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹರಾಜಿನಲ್ಲಿ ಮಾರಾಟವಾಗದ ಶ್ರೀಲಂಕಾದ ವೇಗಿ 50 ಲಕ್ಷ ರೂ.ಗಳ ಮೀಸಲು ಬೆಲೆಯಲ್ಲಿ ಕೆಕೆಆರ್​ಗೆ ಸೇರಲಿದ್ದಾರೆ.

ಮುಂಬೈ ಇಂಡಿಯನ್ಸ್

ಸೂರ್ಯ ಕುಮಾರ್ ಯಾದವ್​ : ಐಪಿಎಲ್ 2024 ರ ಆರಂಭಿಕ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ಅವರ ಲಭ್ಯತೆ ಇನ್ನೂ ಖಚಿತವಾಗಿಲ್ಲ. ಸ್ಪೋರ್ಟ್ಸ್ ಹರ್ನಿಯಾದಿಂದ ಬಳಲುತ್ತಿದ್ದ ಸೂರ್ಯಕುಮಾರ್ 2023 ರ ಡಿಸೆಂಬರ್​ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಈ ಋತುವಿನಲ್ಲಿ ಅವರು ಮರಳುವ ಸಾಧ್ಯತೆಯಿದ್ದರೂ, ಸೂರ್ಯಕುಮಾರ್ ಪಂದ್ಯಾವಳಿಯ ಆರಂಭಿಕ ಪಂದ್ಯಗಳಿಂದ ವಂಚಿತರಾಗಬಹುದು.

ರಾಜಸ್ಥಾನ್ ರಾಯಲ್ಸ್

ಪ್ರಸಿದ್ಧ್ ಕೃಷ್ಣ: ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಗಾಯದ ಸಮಸ್ಯೆಯಿಂದಾಗಿ ಸತತ ಎರಡನೇ ವರ್ಷ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಫೆಬ್ರವರಿಯಲ್ಲಿ ಎಡ ಪ್ರಾಕ್ಸಿಮಲ್ ಕ್ವಾಡ್ರಿಸೆಪ್ಸ್ ಸ್ನಾಯುವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೃಷ್ಣ ಅವರಿಗೆ ರಾಜಸ್ಥಾನ್ ರಾಯಲ್ಸ್​​ನಲ್ಲಿ ಮತ್ತೊಂದು ಅಭಿಯಾನ ಮಾಡಲು ಸಾಧ್ಯವಾಗುವುದಿಲ್ಲ. 2022ರಲ್ಲಿ ರಾಯಲ್ ಪರ ಆಡಿದ್ದ ಕೃಷ್ಣ 17 ಪಂದ್ಯಗಳಲ್ಲಿ 19 ವಿಕೆಟ್ ಕಬಳಿಸಿದ್ದರು. ಐಪಿಎಲ್ 2024 ಕ್ಕೆ ಪ್ರಸಿದ್ಧ್ ಅವರ ಬದಲಿ ಆಟಗಾರನನ್ನು ರಾಜಸ್ಥಾನ ಇನ್ನೂ ಹೆಸರಿಸಿಲ್ಲ.

ಗುಜರಾತ್ ಟೈಟಾನ್ಸ್

ಮೊಹಮ್ಮದ್ ಶಮಿ: ಸ್ಟಾರ್ ವೇಗಿ ಮೊಹಮ್ಮದ್ ಶಮಿ 2023 ರ ನವೆಂಬರ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಕಪ್​ ಫೈನಲ್​​ನಲ್ಲಿ ಭಾರತ ಸೋತ ನಂತರ ಯಾವುದೇ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಪಂದ್ಯಾವಳಿಯಲ್ಲಿ ಆಡಿದ ಶಮಿ ಹಿಮ್ಮಡಿ ಗಾಯದಿಂದ ಬಳಲುತ್ತಿದ್ದರು. ಶಮಿ ಕಳೆದ ತಿಂಗಳು ಲಂಡನ್​​ನಲ್ಲಿ ಬಲ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಐಪಿಎಲ್​ನಲ್ಲಿ ಟೈಟಾನ್ಸ್ ತಂಡ ಫೈನಲ್ ತಲುಪಿದಾಗ ಶಮಿ 28 ವಿಕೆಟ್​ಗಳೊಂದಿಗೆ ಬೌಲರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಗುಜರಾತ್ ತನ್ನ ಪ್ರಮುಖ ವೇಗದ ಬೌಲರ್​ಗೆ ಬದಲಿ ಆಟಗಾರನನ್ನು ಇನ್ನೂ ಹೆಸರಿಸಿಲ್ಲ.

ಲಕ್ನೋ ಸೂಪರ್ ಜೈಂಟ್ಸ್

ಮಾರ್ಕ್​ವುಡ್​​ : ಕೆಲಸದ ಹೊರೆ ನಿರ್ವಹಣೆಗಾಗಿ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಅವರನ್ನು ಐಪಿಎಲ್ 2024 ಋತುವಿನಿಂದ ಹೊರಗಿಡಲು ಅಲ್ಲಿನ ಕ್ರಿಕೆಟ್​ ಸಂಸ್ಥೆ ನಿರ್ಧರಿಸಿದೆ. ಭಾರತದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವುಡ್ ಇಂಗ್ಲೆಂಡ್​ನ ಪ್ರಮುಖ ವೇಗಿಗಳಲ್ಲಿ ಒಬ್ಬರಾಗಿದ್ದರು. ವುಡ್ ಕಳೆದ ಋತುವಿನಲ್ಲಿ ಲಕ್ನೋ ಪರ ನಾಲ್ಕು ಪಂದ್ಯಗಳನ್ನು ಆಡಿದ್ದರು, 11 ವಿಕೆಟ್​ಗಳನ್ನು ಪಡೆದಿದ್ದರು. ವುಡ್ ಅವರನ್ನು 2022 ರಲ್ಲಿ ಸೂಪರ್ ಜೈಂಟ್ಸ್ 7.5 ಕೋಟಿ ರೂ.ಗೆ ಖರೀದಿಸಿತ್ತು.ವುಡ್ ಬದಲಿಗೆ ವೆಸ್ಟ್ ಇಂಡೀಸ್ ವೇಗಿ ಶಮರ್ ಜೋಸೆಫ್ ಅವರನ್ನು ಲಕ್ನೋ ಘೋಷಿಸಿದ್ದು, 3 ಕೋಟಿ ರೂ.ಗೆ ಫ್ರಾಂಚೈಸಿಗೆ ಸೇರ್ಪಡೆಯಾಗಿದೆ.

Exit mobile version