Site icon Vistara News

IPL 2024 : ಐಪಿಎಲ್​ ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್​ ಬಾರಿಸಿದ ಐವರು ಬ್ಯಾಟರ್​ಗಳು ಇವರು

Quinton de Kock

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ (IPL 2024) ಆರಂಭಕ್ಕೆ ಇನ್ನು ಒಂದು ವಾರವಷ್ಟೇ ಉಳಿದಿದೆ. ಈ ಬಾರಿಯೂ ಟಿ20 ಕ್ರಿಕೆಟ್​ನ (T20 Cricket) ಅಬ್ಬರ ಪ್ರದರ್ಶನವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಐಪಿಎಲ್​ ಇದುವರೆಗಿನ 16 ಆವೃತ್ತಿಗಳಲ್ಲಿ ಹಲವು ಬ್ಯಾಟರ್​ಗಳು (IPL Batter) ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ತಮ್ಮ ಶುಭದಿನದಂದು ಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್​ ಇನಿಂಗ್ಸ್​ಗಳನ್ನು ಸ್ಮರಣೀಯ ಮಾಡಿದ್ದಾರೆ. ಈ ರೀತಿಯಾಗಿ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ ಬಾರಿಸಿದ ಐವರು ಆಟಗಾರರ ವಿವರ ಇಲ್ಲಿದೆ.

ಕ್ರಿಸ್​ಗೇಲ್​ 175 ರನ್​

‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ ಐಪಿಎಲ್​ ಲೀಗ್​ನ ಇನ್ನಿಂಗ್ಸ್​ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಅವರು ಪುಣೆ ವಾರಿಯರ್ಸ್ ವಿರುದ್ಧ 66 ಎಸೆತಗಳಲ್ಲಿ 175 ರನ್ ಬಾರಿಸಿದ್ದರು. ಸ್ಫೋಟಕ ಇನ್ನಿಂಗ್ಸ್​​ನಲ್ಲಿ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಪುಣೆ ವಿರುದ್ಧ ಆರ್​ಸಿಬಿ 130 ರನ್​ಗಳ ಗೆಲುವು ದಾಖಲಿಸಿತ್ತು. ಇದು ಕೂಡ ಐಪಿಎಲ್​ ಇತಿಹಾಸದ ಬೃಹತ್ ಅಂತರದ ಗೆಲುವುಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.

ಬ್ರೆಂಡನ್ ಮೆಕಲಮ್​ 158 ರನ್​

ಐಪಿಎಲ್ ಉದ್ಘಾಟನಾ ಆವೃತ್ತಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ನ ಬ್ರೆಂಡನ್ ಮೆಕಲಮ್ 73 ಎಸೆತಗಳಲ್ಲಿ 158 ರನ್ ಗಳಿಸುವ ಮೂಲಕ ವೇದಿಕೆಗೆ ಕಳೆ ತಂದಿದ್ದದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾಗ ಅವರು ಈ ಶತಕದ ಸಾಧನೆ ಮಾಡಿದ್ದರು. ಕಿವೀಸ್​ನ ಮಾಜಿ ನಾಯಕ ತಮ್ಮ ಅಜೇಯ ಇನ್ನಿಂಗ್ಸ್​​ನಲ್ಲಿ 10 ಬೌಂಡರಿಗಳು ಮತ್ತು 13 ಸಿಕ್ಸರ್​​ ಬಾರಿಸಿದ್ದರು ಅವರು ವೈಯಕ್ತಿಕ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಕ್ವಿಂಟನ್ ಡಿ ಕಾಕ್​ 140* ರನ್​

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ 2022ರ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ, ಕ್ವಿಂಟನ್ ಡಿ ಕಾಕ್ 70 ಎಸೆತಗಳಲ್ಲಿ 140* ರನ್ ಗಳಿಸಿದ್ದರು. 51 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದ ಕೆಎಲ್ ರಾಹುಲ್ ಅವರೊಂದಿಗೆ ಕ್ವಿಂಟನ್​ ಅಜೇಯ 210 ರನ್​ಗಳ ಜೊತೆಯಾಟ ನೀಡಿದ್ದರು. ದಕ್ಷಿಣ ಆಫ್ರಿಕಾದ ದಕ್ಷಿಣ ಆಫ್ರಿಕಾದ ಆಟಗಾರ ತಮ್ಮ ಇನ್ನಿಂಗ್ಸ್​ನಲ್ಲಿ 10 ಬೌಂಡರಿಗಳು ಮತ್ತು ಅಷ್ಟೇ ಸಿಕ್ಸರ್​ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಎಲ್​ಎಸ್​ಜಿ ಒಂದೇ ಒಂದು ವಿಕೆಟ್​ ಕಳೆದುಕೊಳ್ಳದೇ 10 ವಿಕೆಟ್​ಗಳ ಸುಲಭ ಜಯ ದಾಖಲಿಸಿತ್ತು.

ಎಬಿಡಿ ವಿಲಿಯರ್ಸ್​​ 133 ರನ್​

2015ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ 59 ಎಸೆತಗಳಲ್ಲಿ 133 ರನ್ ಬಾರಿಸಿದ್ದರು. 50 ಎಸೆತಗಳಲ್ಲಿ 82 ರನ್ ಗಳಿಸಿದ ವಿರಾಟ್ ಕೊಹ್ಲಿ ಅವರೊಂದಿಗೆ 215 ರನ್​ಗಳ ಜೊತೆಯಾಟ ಹಂಚಿಕೊಂಡಿದ್ದರು. ಸ್ಟೈಲಿಶ್ ಬ್ಯಾಟರ್​ ಇನ್ನಿಂಗ್ಸ್​​ನಲ್ಲಿ 19 ಫೋರ್​ ಮತ್ತು 4 ಸಿಕ್ಸರ್​ ಬಾರಿಸಿದ್ದರು. ಪಂದ್ಯವನ್ನು 39 ರನ್​ಗಳಿಂದ ಗೆಲ್ಲಲು ತಂಡಕ್ಕೆ ಸಹಾಯ ಮಾಡಿದ್ದರು.

ಕೆ. ಎಲ್​ ರಾಹುಲ್​ 132 ರನ್​

ಯುಎಇಯಲ್ಲಿ ಆಡಿದ ಐಪಿಎಲ್ 2020 ರಲ್ಲಿ, ಪಂಜಾಬ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಬೆಂಗಳೂರು ವಿರುದ್ಧ ಇನಿಂಗ್ಸ್​​ನಲ್ಲಿ 132 ರನ್ ಬಾರಿಸಿದ್ದರು. ಅವರೀಗ ವೈಯಕ್ತಿಕ ಗರಿಷ್ಠ ಸ್ಕೋರ್​ ಬಾರಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ಹೊಂದಿದ್ದಾರೆ. ಅಂದ ಹಾಗೆ ಗರಿಷ್ಠ ಸ್ಕೋರ್ ಬಾರಿಸಿದ ಐವರ ಪಟ್ಟಿಯಲ್ಲಿ ರಾಹುಲ್​ ಏಕೈಕ ಭಾರತೀಯ. 69 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್ ಬಾರಿಸಿದ್ದರು ರಾಹುಲ್. ಪಂಜಾಬ್ 3 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತ್ತು. ಬೆಂಗಳೂರು ತಂಡ 109 ರನ್ ಗಳಿಗೆ ಆಲೌಟ್ ಆಗಿ 97 ರನ್ ಸೋಲಿಗೆ ಒಳಗಾಗಿತ್ತು.

ಅತ್ಯಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿನ ಅಗ್ರ ಐವರು ಬ್ಯಾಟರ್​ಗಳು

Exit mobile version