ಚೆನ್ನೈ: ಸಮರ್ಥ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಐಪಿಎಲ್ 2024ರ ಆವೃತ್ತಿಯ (IPL 2024) ಟ್ರೋಫಿ ಗೆದ್ದಿದೆ. ಫೈನಲ್ ಪಂದ್ಯದಲ್ಲಿ (IPL 2024 Final) ಎದುರಾಳಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ಗಳ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಹಿಂದೆ 2012 ಹಾಗೂ 2104ರಲ್ಲಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಈ ತಂಡ ಚಾಂಪಿಯನ್ ಆಗಿತ್ತು. ಇದೀಗ ಅವರದ್ದೇ ಕೋಚಿಂಗ್ನಲ್ಲಿ ತಂಡ ಟ್ರೋಫಿ ಗೆದ್ದಿರುವುದು ವಿಶೇಷ ಎನಿಸಿದೆ. ಕೆಕೆಆರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಬಳಿಕ (ಐದು ಬಾರಿ ಚಾಂಪಿಯನ್ ಪಟ್ಟ) ಐಪಿಎಲ್ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ ಕೆಕೆಆರ್.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ತಂಡ 18.3 ಓವರ್ಗಳಲ್ಲಿ 114 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಕೆಕೆಆರ್ ತಂಡ 10.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ. 114 ರನ್ ಬಾರಿಸಿ ಸುಲಭ ಗೆಲವು ತನ್ನದಾಗಿಸಿಕೊಂಡಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (52) ರನ್ ಬಾರಿಸಿ ಗೆಲುವಿಗೆ ಕೊಡುಗೆ ಕೊಟ್ಟರು.ಆರಂಭಿಕ ಬ್ಯಾಟರ್ ರಹ್ಮನುಲ್ಲಾ ಗುರ್ಬಜ್ 39 ರನ್ ಬಾರಿಸಿದರು. ಈ ಕೆಳಗೆ ಚಾಂಪಿಯನ್ ತಂಡ ಹಾಗೂ ಪ್ಲೇಆಫ್ಗೇರಿದ ಇತರ ತಂಡಗಳು ಗೆದ್ದ ಬಹುಮಾನ ಮೊತ್ತದ ವಿವರ ನೀಡಲಾಗಿದೆ.
46.5 ಕೋಟಿ ಬಹುಮಾನದ ಮೊತ್ತ
ಐಪಿಎಲ್ 2024ರ ಒಟ್ಟು ಬಹುಮಾನದ ಮೊತ್ತ 46.5 ಕೋಟಿ ರೂಪಾಯಿ. ಮಾರ್ಚ್ 22ರಿಂದ ಆರಂಭವಾದ ಐಪಿಎಲ್ ಮೆಗಾ ಟೂರ್ನಿ, 65 ದಿನಗಳ ಕಾಲ ನಂತರ ಅಂದರೆ ಮೇ 26ರ ಭಾನುವಾರಕ್ಕೆ ಅಂತ್ಯವಾಗಿದೆ. ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಆದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 20 ಕೋಟಿ ಸಿಗಲಿದೆ. ಅಂತೆಯೇ ಫೈನಲ್‌ನಲ್ಲಿ ಸೋತು 2ನೇ ಸ್ಥಾನ ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡ 13 ಕೋಟಿ ರೂಪಾಯಿ ಜೇಬಿಗಿಳಿಸಿದೆ.
3ನೇ ಸ್ಥಾನ ಪಡೆದ ರಾಜಸ್ಥಾನ್ ರಾಯಲ್ಸ್ ತಂಡ 7 ಕೋಟಿ ರೂಪಾಯಿ ದೊರಕಿದೆ. ಇನ್ನು 4ನೇ ಸ್ಥಾನ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.50 ಕೋಟಿ ಪಡೆದಿದೆ.
ಐಪಿಎಲ್ನ ಸಾಧಕ ತಂಡಗಳು
ಮುಂಬೈ ಇಂಡಿಯನ್ಸ್ ಐದು ಬಾರಿ ಚಾಂಪಿಯನ್ (2013, 2015, 2017, 2019, 2020)
ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಚಾಂಪಿಯನ್ (2010, 2011, 2018, 2021.2023)
ಕೋಲ್ಕತ್ತಾ ನೈಟ್ ರೈಡರ್ಸ್ 3 ಬಾರಿ ಚಾಂಪಿಯನ್ (2012, 2014, 2024)
ರಾಜಸ್ಥಾನ ರಾಯಲ್ಸ್ ಒಂದು ಬಾರಿ ಚಾಂಪಿಯನ್ (2008)
ಡೆಕ್ಕನ್ ಚಾರ್ಜರ್ಸ್ ಒಂದು ಬಾರಿ ಚಾಂಪಿಯನ್ (2009)
ಸನ್ರೈಸರ್ಸ್ ಹೈದರಾಬಾದ್ ಒಂದು ಬಾರಿ ಚಾಂಪಿಯನ್ (2016)
ಗುಜರಾತ್ ಟೈಟಾನ್ಸ್ ಒಂದು ಬಾರಿ ಚಾಂಪಿಯನ್ (2022)
ಇದನ್ನೂ ಓದಿ: Kavya Maran : ಹೈದರಾಬಾದ್ ತಂಡ ಸೋಲುತ್ತಿದ್ದಂತೆ ಕಣ್ಣೀರು ಹಾಕಿದ ಮಾಲಕಿ ಕಾವ್ಯಾಮಾರನ್
ಇನ್ನೂ ಪ್ರಶಸ್ತಿ ಗೆಲ್ಲದ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು (3 ಬಾರಿ ರನ್ನರ್ಅಪ್)
ಪಂಜಾಬ್ ಕಿಂಗ್ಸ್ (1 ಬಾರಿ ರನ್ನರ್ಅಪ್)
ಡೆಲ್ಲಿ ಕ್ಯಾಪಿಟಲ್ಸ್ (1 ಬಾರಿ ರನ್ನರ್ಅಪ್)
ಲಕ್ನೋ ಸೂಪರ್ ಜೈಂಟ್ಸ್ (ಎಲಿಮಿನೇಟರ್ ಹಂತ)