Site icon Vistara News

Irfan Pathan : 8 ವರ್ಷದ ಬಳಿಕ ಮೊದಲ ಸಲ ಬುರ್ಖಾ ತೆಗೆದ ಕ್ರಿಕೆಟರ್ ಇರ್ಫಾನ್ ಪಠಾಣ್ ಪತ್ನಿ!

Irfan pathan

ನವದೆಹಲಿ: ಭಾರತ ತಂಡದ ಮಾಜಿ ಆಟಗಾರ ಹಾಗೂ ಕಾಮೆಂಟೇಟರ್​ ಇರ್ಫಾನ್ ಪಠಾಣ್​ (Irfan Pathan) ಅವರ ಪತ್ನಿ ಸಫಾ ಬೇಗ್ (Safa Baig) ಇದುವರೆಗೆ ತಮ್ಮ ಮುಖವನ್ನು ಸಾರ್ವಜನಿಕವಾಗಿ ತೋರಿಸಿರಲಿಲ್ಲ. ಅವರು ಪ್ರತಿ ಚಿತ್ರದಲ್ಲೂ ಬುರ್ಖಾ ಧರಿಸಿಕೊಂಡಿರುತ್ತಿದ್ದರು. ಇದೀಗ ಮೊದಲ ಬಾರಿಗೆ ಪತಿಯೊಂದಿಗೆ ಬುರ್ಖಾ (burkha) ಹಾಗೂ ಫರ್ದಾ (Fardha) ರಹಿತ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೊಂದು ಕಾರಣವಿದೆ. ಅವರ ಎಂಟನೇ ವರ್ಷದ ಆ್ಯನಿವರ್ಸರಿ (wedding Anniversary). ಈ ಸಂದರ್ಭದಲ್ಲಿ ಜತೆಯಾಗಿ ಫೋಟೊ ತೆಗೆದುಕೊಂಡು ತಮ್ಮ ಸೋಶಿಯಲ್​ ಮೀಡಿಯಾ ಹ್ಯಾಂಡಲ್​ಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಇರ್ಫಾನ್ ಪಠಾಣ್ ವಿಶೇಷ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಮನಸ್ಸು ಉಲ್ಲಾಸ ಮಾಡುವವರು, ಹಾಸ್ಯ ಮಾತಿನವರು, ತೊಂದರೆ ನೀಡುವವರು ಮತ್ತು ನನ್ನ ಮಕ್ಕಳ ನಿರಂತರ ಒಡನಾಡಿ, ನನ್ನ ಸ್ನೇಹಿತೆ ಮತ್ತು ಆತ್ಮ. ಈ ಸುಂದರ ಪ್ರಯಾಣದಲ್ಲಿ, ನನ್ನ ಹೆಂಡತಿಯಾಗಿ ಅಪಾರವಾಗಿ ಪ್ರೀತಿಸುತ್ತೇನೆ. ಎಂದು ಪಠಾಣ್ ತಮ್ಮ ಪತ್ನಿಯೊಂದಿಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ಪಠಾಣ್ ಈ ಹಿಂದೆ ತನ್ನ ಹೆಂಡತಿಯೊಂದಿಗಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಾಗ ಅವಳ ಮುಖವನ್ನು ಮರೆಮಾಚಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು. ದೊಡ್ಡ ದೊಡ್ಡ ಮಾತನ್ನಾಡುವವರು ಪತ್ನಿಯ ಮುಖ ತೋರಿಸುತ್ತಿಲ್ಲ ಎಂದು ಬರೆದಿದ್ದರು. ಮೂಲಭೂತವಾದಿ ಎಂದೆಲ್ಲ ಬೈಗುಳಗಳನ್ನು ಕೇಳಿದ್ದರು. ಇದೀಗ ಆ ವರ್ಗದ ಟೀಕೆಯಿಂದ ಮುಕ್ತರಾಗಬಹುದು. ಆದರೆ, ಮುಖ ತೋರಿಸಿದ್ದನ್ನು ಆಕ್ಷೇಪಿಸುವ ವರ್ಗವು ಇದೀಗ ಪಠಾಣ್​ ಅವರನ್ನು ಕಾಡಲಿದೆ!

ಇರ್ಫಾನ್ 2016 ರಲ್ಲಿ ಸಫಾ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಇಮ್ರಾನ್ ಮತ್ತು ಸುಲೈಮಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪಾಕಿಸ್ತಾನ ವಿರುದ್ಧದ 2007 ರ ಟಿ 20 ವಿಶ್ವಕಪ್ ಫೈನಲ್​ನಲ್ಲಿ ವೀರೋಚಿತ ಪ್ರದರ್ಶನ ನೀಡಿದ ಆಲ್​ರೌಂಡರ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ನಂತರ, ಪಠಾಣ್ ಟಿವಿ ವಿಶ್ಲೇಷಕ ಕರ್ತವ್ಯಗಳನ್ನು ಮಾಡುತ್ತಿದ್ದಾರೆ. ಕ್ರಿಕೆಟ್ ತಜ್ಞರಾಗಿ ಆಟದ ವಿಶ್ಲೇಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ : Irfan Pathan : ಪಾಕ್​ ಸೋಲಿಸಿದ ಆಫ್ಘನ್​ ಆಟಗಾರರಿಗೆ ಔತಣ ಕೂಟ ಏರ್ಪಡಿಸಿದ ಇರ್ಫಾನ್ ಪಠಾಣ್​​!

ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್ ವಿರುದ್ಧ 28 ರನ್​ಗಳ ಸೋಲಿನ ನಂತರ ವಿಶಾಖಪಟ್ಟಣಂನಲ್ಲಿ ನಡೆಯಲಿರುವ 2 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಪುನರಾಗಮನ ಮಾಡಲಿದೆ ಎಂದು ಪಠಾಣ್ ವಿಶ್ವಾಸ ವ್ಯಕ್ತಪಡಿಸಿದ್ದರು.

“ಭಾರತದ ಸೋಲನ್ನು ನೋಡಿ ನನಗೆ ಆಘಾತವಾಯಿತು. ನಾನು ಕೋಲ್ಕತ್ತಾಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ ಮತ್ತು ಭಾರತಕ್ಕೆ 200 ರನ್ ಗಳ ಅಗತ್ಯವಿತ್ತು. ನಾನು ಇಳಿಯುವ ಹೊತ್ತಿಗೆ ಭಾರತ ಪಂದ್ಯವನ್ನು ಕಳೆದುಕೊಂಡಿತ್ತು. ನನಗೆ ಆಘಾತವಾಯಿತು ಆದರೆ ನಾವು ಪುನರಾಗಮನ ಮಾಡುತ್ತೇವೆ ಎಂದು ನಾನು ನಂಬುತ್ತೇನೆ. ಏಷ್ಯನ್ ಲೆಜೆಂಡ್ಸ್ ಲೀಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇರ್ಫಾನ್ ಪಠಾಣ್ ಹೇಳಿದ್ದಾರೆ.

“ನಾವು ಸೋತಿದ್ದೇವೆ, ಆದರೆ ನಮ್ಮ ಬೌಲರ್​ಗಳು ಉತ್ತಮವಾಗಿಲ್ಲ ಎಂದು ಇದರ ಅರ್ಥವಲ್ಲ. ನಮ್ಮ ಬೌಲರ್​ಗಳು ಸಾಬೀತುಪಡಿಸಲಿದ್ದಾರೆ. ನೀವು ಪಂದ್ಯವನ್ನು ಕಳೆದುಕೊಳ್ಳಬಹುದು. ಕೆಲವೊಮ್ಮೆ ಸೋಲುವುದು ಒಳ್ಳೆಯದು. ನೀವು ಸೋತಾಗ ನೀವು ಬಹಳಷ್ಟು ವಿಷಯಗಳನ್ನು ಕಲಿಯುತ್ತೀರಿ. ಭಾರತ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ. ಸರಣಿ ಆರಂಭಕ್ಕೂ ಮುನ್ನ ಭಾರತ ತಂಡ ಬಲಿಷ್ಠವಾಗಿದೆ ಎಂದು ಹೇಳಿದ್ದೆ. ಈಗಲೂ ನನಗೆ ವಿಶ್ವಾಸವಿದೆ,” ಎಂದು ಪಠಾಣ್ ಸುದ್ದಿಗಾರರಿಗೆ ತಿಳಿಸಿದ್ದರು.

Exit mobile version