ಬೆಂಗಳೂರು : 2002ರ ಗೋಧ್ರಾ ಗಲಭೆ ಬಳಿಕ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಪದಚ್ಯುತಗೊಳಿಸಲು ಸಿದ್ಧರಾಗಿದ್ದರು. ಆದರೆ ವೇಳೆ ಕೇಂದ್ರ ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿ ಅವರು ಅದನ್ನು ತಡೆದಿದ್ದರು. ಸಂಪುಟಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರಿಂದ ವಾಜಪೇಯಿ ನಿರ್ಧಾರವನ್ನು ಪಡೆದಿದ್ದರು. ಹೀಗಾಗಿ ಗುಜರಾತ್ ಗಲಭೆಯ ಪರಿಣಾಮವಾಗಿ ಸಿಎಂ ಸ್ಥಾನ ಕಳೆದುಕೊಳ್ಳಬೇಕಾಗಿದ್ದ ಮೋದಿಯನ್ನು ಕಾಪಾಡಿದ್ದೇ ಎಲ್. ಕೆ ಅಡ್ವಾಣಿ ಎಂಬುದು ಇತಿಹಾಸ.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ ಕೆ ಅಡ್ವಾಣಿ ಅವರಿ ದೇಶದ ಪರಮೋಚ್ಛ ಗೌರವವಾಗಿರುವ ಭಾರತರತ್ನವನ್ನು (Bharat Ratna For LK Advani)ಘೋಷಿಸಿದ್ದಾರೆ. ಈ ಮೂಲಕ ಅವರ ತಮ್ಮ ಗುರುವಿಗೆ ಅರ್ಹ ಗೌರವ ಸಲ್ಲಿಸಿದ್ದಾರೆ ಎಂದೇ ಹೇಳಬಹುದು. ಜ. 22ರಂದು ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಮಾಡಿದ ಬಳಿಕದಿಂದ ಮುತ್ಸದ್ಧಿ ಅಡ್ವಾಣಿಗೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪಗಳನ್ನು ಎದುರಿಸಿದ್ದರು. ಭಾರತ ರತ್ನ ಘೋಷಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ಪ್ರಧಾನಿ ಮೋದಿ. ಅಲ್ಲದೆ, ತಮ್ಮ ರಾಜಕೀಯ ಜಾಣ್ಮೆಯನ್ನು ಮತ್ತೊಂದು ಬಾರಿ ಮೆರೆದಿದ್ದಾರೆ.
ಲಾಲ್ ಕೃಷ್ಣ ಅಡ್ವಾಣಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಕೈಗೊಂಡಿದ್ದ ರಥ ಯಾತ್ರೆ ಬಿಜೆಪಿಯ ಬೆಳವಣಿಗೆಗೆ ದೊಡ್ಡ ಮಟ್ಟಿಗೆ ಕೊಡುಗೆ ನೀಡಿದೆ ಎಂಬುದರಲ್ಲಿ ಸುಳ್ಳಲ್ಲ. ಅದೇ ರೀತಿ ಪ್ರಧಾನಿ ಮೋದಿ ಅವರು ಗುಜರಾತ್ ರಾಜ್ಯವನ್ನು ತಮ್ಮ ರಾಜಕೀಯ ಶಕ್ತಿ ಕೇಂದ್ರವಾಗಿ ಪರಿವರ್ತಿಸಿದ್ದರು. ಗೋಧ್ರಾ ಗಲಭೆ ನಿರ್ವಹಣೆ ಸೇರಿದಂತೆ ತಮ್ಮ ಆಡಳಿತ ವೈಖರಿ ಮೂಲಕ ಮನೆಮಾತಾಗಿ ಪ್ರಧಾನಿ ಹುದ್ದೆಗೇರಿದ್ದರು. ಇದೀಗ ದೇಶ ಕಂಡ ಇದುವರೆಗಿನ ಅತ್ಯಂತ ಸಮರ್ಥ ಪ್ರಧಾನಿ ಎಂಬ ಹೆಗ್ಗಳಿಕೆಯನ್ನೂ ಗಳಿಸಿಕೊಂಡಿದ್ದಾರೆ. ಹೀಗಾಗಿ ಆಡ್ವಾಣಿ ಮತ್ತು ಮೋದಿ ಬಿಜೆಪಿಯ ಅಂತರಂಗದ ದೊಡ್ಡ ಶಕ್ತಿಯಾಗಿದ್ದಾರೆ. ಗುರು- ಶಿಷ್ಯರು ಇದೀಗ ತಮಗೆ ಸಲ್ಲಬೇಕಾದ ಗೌರವಗಳನ್ನು ಪಡೆದುಕೊಂಡಿದ್ದಾರೆ.
2019ರಲ್ಲಿ ಬಿಜೆಪಿಯ ಮಾಜಿ ನಾಯಕ ಯಶ್ವಂತ್ ಸಿನ್ಹಾ ಅವರು. ಗುಜರಾತ್ ನಲ್ಲಿ ನಡೆದ ಕೋಮು ಗಲಭೆಯ ನಂತರ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಅಟಲ್ ಬಿಹಾರಿ ವಾಜಪೇಯಿ ನಿರ್ಧರಿಸಿದ್ದರು ಎಂಬುವ ವಿಷಯವನ್ನು ಪುನರುಚ್ಚರಿಸಿದ್ದರು.
ಇದನ್ನೂ ಓದಿ : LK Advani: ಬಿಜೆಪಿಯ ಗುರು ಶಿಷ್ಯರಾದ ಆಡ್ವಾಣಿ- ಮೋದಿ ನಡುವಿನ ಬಾಂಧವ್ಯದ ಕ್ಷಣಗಳು ಇಲ್ಲಿವೆ ನೋಡಿ
2002ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೋದಿ ಗುಜರಾತ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದರೆ ಗುಜರಾತ್ ಸರ್ಕಾರವನ್ನು ವಜಾಗೊಳಿಸಲಾಗುವುದು ಎಂದು ಅಟಲ್ ಜಿ ಹೇಳಿದ್ದರು. ಆದರೆ, ಅಡ್ವಾಣಿ ಅವರು ಇದನ್ನು ವಿರೋಧಿಸಿದ್ದರು. ಮೋದಿ ಜಿ ಅವರನ್ನು ವಜಾಗೊಳಿಸಿದರೆ ಅವರು ಸರ್ಕಾರದಿಂದ ರಾಜೀನಾಮೆ ಪಡೆಯುತ್ತೇನೆ ಎಂದು ಹೇಳಿದ್ದರು. ಆಗ ವಾಜಪೇಯಿ ಅವರು ತಮ್ಮ ನಿರ್ಧಾರವನ್ನು ತಡೆಹಿಡಿದಿದ್ದರು.
ಎಲ್.ಕೆ. ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ
ನವದೆಹಲಿ: ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಫೆಬ್ರುವರಿ 3ರಂದು) ಬೆಳಗ್ಗೆ ಘೋಷಿಸಿದ್ದಾರೆ. “ಶ್ರೀ ಎಲ್.ಕೆ. ಅಡ್ವಾಣಿ ಜಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದ್ದೇನೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
“ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕೀಯ ತಜ್ಞರಲ್ಲಿ ಒಬ್ಬರಾದ ಲಾಲ್ ಕೃಷ್ಣ ಅಡ್ವಾಣಿ ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಪಕ್ಷದ ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ದೇಶದ ಉಪ ಪ್ರಧಾನಿಯಾಗಿ ರಾಷ್ಟ್ರದ ಸೇವೆ ಮಾಡುವವರೆಗಿನ ಅವರ ಜೀವನ ಆದರ್ಶಮಯ. ಅವರು ನಮ್ಮ ಗೃಹ ಸಚಿವರಾಗಿ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವರಾಗಿ ಹೆಸರು ಗಳಿಸಿಕೊಂಡವರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಅನುಕರಣೀಯ ಹಾಗೂ ಬೌದ್ಧಿಕ ಒಳನೋಟಗಳಿಂದ ತುಂಬಿವೆ” ಎಂದು ಅವರು ಹೇಳಿದರು.
ಅಡ್ವಾಣಿ ಅವರ ಸಾರ್ವಜನಿಕ ಜೀವನದಲ್ಲಿ ದಶಕಗಳ ಸೇವೆಯು ಪಾರದರ್ಶಕತೆ ಮತ್ತು ಸಮಗ್ರತೆಗೆ ಅಚಲ ಬದ್ಧತೆಯಿಂದ ಗುರುತಿಸಲ್ಪಟ್ಟಿದೆ. ರಾಜಕೀಯ ನೈತಿಕತೆಯಲ್ಲಿ ಅನುಕರಣೀಯ ಮಾನದಂಡವನ್ನು ಅವರು ಹೊಂದಿದ್ದರು. ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ಅಸಾಮಾನ್ಯ ಪ್ರಯತ್ನಗಳನ್ನು ಮಾಡಿದ್ದಾರೆ. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ನನಗೆ ಬಹಳ ಭಾವನಾತ್ಮಕ ಕ್ಷಣವಾಗಿದೆ. ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರಿಂದ ಕಲಿಯಲು ನನಗೆ ಅಸಂಖ್ಯಾತ ಅವಕಾಶಗಳು ಸಿಕ್ಕಿದ್ದು ನನ್ನ ಸುಯೋಗ ಎಂದು ನಾನು ಯಾವಾಗಲೂ ಪರಿಗಣಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.