ರಾಜ್ಕೋಟ್: ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3 ನೇ ಟೆಸ್ಟ್ ಪಂದ್ಯದಲ್ಲಿ (IND vsENG) ಯಶಸ್ವಿ ಜೈಸ್ವಾಲ್ ತಮ್ಮ ಮೂರನೇ ಟೆಸ್ಟ್ ಶತಕ ಪೂರೈಸಿದ್ದಾರೆ. ಜೈಸ್ವಾಲ್ (Yashasvi Jaiswal) 122 ಎಸೆತಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ರೋಚಕ ಮೂರಂಕಿ ಮೊತ್ತವನ್ನು ಪೂರ್ಣಗೊಳಿಸಿದರು. ಈ ಮೂಲಕ 3ನೇ ಇನ್ನಿಂಗ್ಸ್ನಲ್ಲಿ ಪ್ರವಾಸಿ ಆಂಗ್ಲರ ಬಳಗದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. ಇದೇ ವೇಳೆ ಜೈಸ್ವಾಲ್ ಹೊಸ ದಾಖಲೆಯನ್ನು ಮಾಡಿದರು. ಅದೂ ವಿರಾಟ್ ಕೊಹ್ಲಿ (Virat Kohli) ಬಳಿಕ ಈ ಸಾಧನೆ ಮಾಡಿದ ಆಟಗಾರ ಎಂಬ ಖ್ಯಾತಿ ಪಡೆದುಕೊಂಡರು.
ಜೈಸ್ವಾಲ್ ಶತಕದ ಬಳಿಕ ಇಂಗ್ಲೆಂಡ್ ವಿರುದ್ಧದ ಹಾಲಿ ಸರಣಿಯಲ್ಲಿ 400 ರನ್ಗಳ ಗಡಿ ದಾಟಿದರು. ಅಲ್ಲದೆ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಂತರ 400ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ಕ್ಲಾಸಿಕ್ ಟೆಸ್ಟ್ ಶೈಲಿಯಲ್ಲಿ ಎಚ್ಚರಿಕೆಯಿಂದ ಇನಿಂಗ್ಸ್ ಆರಂಭಿಸಿದರು. ಅವರ ಆರಂಭಿಕ ಪಾಲುದಾರ ಮತ್ತು ನಾಯಕ ರೋಹಿತ್ ಶರ್ಮಾ ಅಬ್ಬರಿಸಲು ಯತ್ನಿಸಿ ಔಟಾದರು. ಆದರೆ ಜೈಸ್ವಾಲ್ ತಮ್ಮ ಮೊದಲ 39 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದರು. ಆದರೆ, ಚಹಾ ವಿರಾಮಕ್ಕೆ ಮೊದಲು ರೋಹಿತ್ ಔಟ್ ಆದ ನಂತರ 22 ವರ್ಷದ ಆಟಗಾರ ವೇಗವನ್ನು ಬದಲಾಯಿಸಿದರು. ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸಿದರು
ವೈಜಾಗ್ನಲ್ಲಿ ನಡೆದ 2 ನೇ ಟೆಸ್ಟ್ನಲ್ಲಿ ತಮ್ಮ ವಿಕೆಟ್ ಪಡೆದ ಇಂಗ್ಲೆಂಡ್ನ ಅತ್ಯಂತ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ಬೆಂಡೆತ್ತಿದರು. ಪಿಚ್ ಬ್ಯಾಟರ್ಗಳಿಗೆ ಅನುಕೂಲಕರವಾಗಿದ್ದರಿಂದ ಜೈಸ್ವಾಲ್ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ರೋಹಿತ್ ನಿರ್ಗಮನದಿಂದ ಉತ್ತೇಜಿತರಾಗಿದ್ದ ಇಂಗ್ಲೆಂಡ್ ಶಿಬಿರವು ಜೈಸ್ವಾಲ್ ಅವರ ಅದ್ಭುತ ಆಟಕ್ಕೆ ಬೆಚ್ಚಿತು.
ಭಾರತಕ್ಕೆ 322 ರನ್ ಮುನ್ನಡೆ
ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashavi Jaiswal) ಅವರ ಅಮೋಘ ಶತಕ (114*) ಮತ್ತು ಶುಭ್ಮನ್ ಗಿಲ್ (Shubman Gill) ಬಾರಿಸಿದ ಅರ್ಧಶತಕದ (65) ನೆರವಿನಿಂದ ಮಿಂಚಿದ ಭಾರತ ತಂಡ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ನಿಧಾನವಾಗಿ ಮೇಲುಗೈ ಸಾಧಿಸುತ್ತಿದೆ. ಶನಿವಾರ ನಡೆದ ಮೂರನೇ ದಿನದಾ ಅಂತ್ಯಕ್ಕೆ ಭಾರತ ದ್ವಿತೀಯ ಇನಿಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 196 ರನ್ ಬಾರಿಸಿದ್ದು, ಒಟ್ಟಾರೆಯಾಗಿ 322 ರನ್ಗಳ ಮುನ್ನಡೆ ಪಡೆದುಕೊಂಡಿದೆ. 126 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮವಾಗಿ ಬ್ಯಾಟ್ ಮಾಡಿ ಪ್ರಾಬಲ್ಯ ಸಾಧಿಸಿದೆ.
ಇದನ್ನೂ ಓದಿ : Ravindra Jadeja : ತವರು ನೆಲದಲ್ಲಿ ಹೊಸ ಮೈಲ್ಲುಗಲ್ಲು ಸ್ಥಾಪಿಸಿದ ರವೀಂದ್ರ ಜಡೇಜಾ
ಮೂರನೇ ದಿನದ ಆರಂಭದಲ್ಲಿ 2 ವಿಕೆಟ್ ನಷ್ಟಕ್ಕೆ 207 ರನ್ಗಳಿಂದ ಆಟ ಆರಂಭಿಸಿದ್ದ ಇಂಗ್ಲೆಂಡ್ ಬಳಿಕ ಕುಸಿತ ಕಂಡಿತು. ಬಜ್ಬಾಲ್ ತಂತ್ರ ಕೈಕೊಡುವ ಮೂಲಕ 319 ರನ್ಗಳಿಗೆ ಆಲ್ಔಟ್ ಆಯಿತು. 133 ರನ್ ಗಳಿಸಿ ಕ್ರೀಸ್ನಲ್ಲಿದ್ದ ಬೆನ್ ಡಕೆಟ್ (153) ಕೂಡ ಹೆಚ್ಚು ಹೊತ್ತು ಆಡಲಿಲ್ಲ. ಜೋ ರೂಟ್ 18 ರನ್, ಬೇರ್ಸ್ಟೋವ್0, ಬೆನ್ಫೋಕ್ಸ್ 13, ಬೆನ್ಸ್ಟೋಕ್ಸ್ 43, ರೆಹಾನ್ ಅಹ್ಮದ್ 6, ಟಾಮ್ ಹಾರ್ಟ್ಲೆ 9 ರನ್ ಗಳಿಸಿ ಔಟಾದರು.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 445 ರನ್ ಗಳಿಸಿತ್ತು. ಹೀಗಾಗಿ 126 ರನ್ಗಳ ಮನ್ನಡೆ ಪಡೆಯಿತು. ಅಲ್ಲದೆ, ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಆದಾಗ್ಯೂ ಪ್ರಥಮ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ, ದ್ವಿತೀಯ ಇನ್ನಿಂಗ್ಸ್ನಲ್ಲಿ 19 ರನ್ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು.
ರೋಹಿತ್ ಪೆವಿಲಿಯನ್ಗೆ ಮರಳುತ್ತಿದ್ದಂತೆ ಜತೆಯಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅಬ್ಬರ ಪ್ರದರ್ಶನ ನೀಡಿದರು. 195 ಎಸೆತಗಳಲ್ಲಿ 155 ರನ್ಗಳ ಜತೆಯಾಟವಾಡಿದರು. ಪ್ರಥಮ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ 10, ಗಿಲ್ ಶೂನ್ಯಕ್ಕೆ ಔಟಾಗಿದ್ದರು. ಆದರೆ, ಎರಡನೇ ಇನಿಂಗ್ಸ್ನಲ್ಲಿ ಪ್ರತಿಕಾರ ತೀರಿಸಿದರು.