ನವದೆಹಲಿ: ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ತಂಡ ಮುಂಬೈ ಇಂಡಿಯನ್ಸ್ (Mumbai Indins) ಮತ್ತು ಫ್ರಾಂಚೈಸಿ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ವಿಟರ್ನಲ್ಲಿ ಅನ್ಫಾಲೋ ಮಾಡುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಎರಡು ವರ್ಷಗಳ ನಂತರ ಹಾರ್ದಿಕ್ ಪಾಂಡ್ಯ ಮುಂಬೈ ತಂಡಕ್ಕೆ ಮರಳುವುದು ಪ್ರಕಟಗೊಂಡ ಬಳಿಕ ಮತ್ತು ಅವರನ್ನೇ ನಾಯಕರನ್ನಾಗಿ ನೇಮಿಸಿದ ನಂತರ ಮುಂಬೈ ಇಂಡಿಯನ್ಸ್ ಶಿಬಿರದ ಬಗ್ಗೆ ಅವರು ಹತಾಶೆಗೊಂಡಿರುವ ಲಕ್ಷಣ ಇದು ಎನ್ನಲಾಗಿದೆ.
ಈ ಘೋಷಣೆಯ ನಂತರ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಭಿಮಾನಿಗಳು ಮತ್ತು ಮಾಜಿ ಆಟಗಾರರಿಂದ ಟೀಕೆಗಳ ಸುರಿಮಳೆಯನ್ನು ಎದುರಿಸಿತು. ಸಾಮಾಜಿಕ ಮಾಧ್ಯಮದಲ್ಲಿ ತಂಡವನ್ನು ಅನ್ಫಾಲೋ ಮಾಡುವ ಬುಮ್ರಾ ಅವರ ನಿರ್ಧಾರವು ನಾಯಕತ್ವ ಬದಲಾವಣೆಯ ಬಗ್ಗೆ ಅವರ ಅಸಮಾಧಾನ ಮತ್ತು ರೋಹಿತ್ ಶರ್ಮಾ ಮತ್ತು ಅವರಂತಹ ಹಿರಿಯ ಆಟಗಾರರನ್ನು ಫ್ರಾಂಚೈಸಿ ನಿರ್ಲಕ್ಷಿಸಿದ್ದಕ್ಕೆ ಪ್ರತಿಫಲ ಎಂದು ಹೇಳಲಾಗಿದೆ.
ಮುಂಬೈ ಇಂಡಿಯನ್ಸ್ಗೆ ಹಾರ್ದಿಕ್ ಪಾಂಡ್ಯ ಅವರ ಪ್ರಯಾಣವು ತಿರುವುಗಳನ್ನು ಕಂಡಿತ್ತು. ಐಪಿಎಲ್ 2022 ರ ಮೆಗಾ ಹರಾಜಿಗೆ ಮುಂಚಿತವಾಗಿ ಮುಂಬೈ ಉಳಿಸಿಕೊಳ್ಳದ ಕಾರಣ ಗುಜರಾತ್ ತಂಡ ಸೇರಿಕೊಂಡರು. ಬಳಿಕ ಮೊದಲ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದಾರೆ. ಇದೀಗ ಪಾಂಡ್ಯ ತಮ್ಮ ಮಾಜಿ ತಂಡಕ್ಕೆ ಮರಳಿದರು.
ಇದನ್ನೂ ಓದಿ : Ishan Kishan : ಇಶಾನ್ ಕಿಶನ್ ಅಶಿಸ್ತಿಗೆ ಧೋನಿ ಸಲಹೆ ಕಾರಣವೇ?
ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17.5 ಕೋಟಿ ರೂ.ಗೆ ಖರೀದಿಸಿದ ಹಿನ್ನೆಲೆಯಲ್ಲಿ ಪಾಂಡ್ಯಗೆ ದಾರಿ ಮಾಡಿಕೊಟ್ಟಿತು.
ಕೌತುಕ ಹೆಚ್ಚಳ
ಮಾರ್ಚ್ 22ರಿಂದ ಐಪಿಎಲ್ ಆರಂಭವಾಗಲಿದ್ದು, 2024ರ ಐಪಿಎಲ್ ಟೂರ್ನಿಯ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ. ಆದಾಗ್ಯೂ, ಬುಮ್ರಾ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಯು ಮುಂಬರುವ ಋತುವಿನಲ್ಲಿ ಕುತೂಹಲ ಹೆಚ್ಚಿಸಲಿದೆ. ಇದು ಮುಂಬೈ ಇಂಡಿಯನ್ಸ್ ಶಿಬಿರದೊಳಗಿನ ಅಸಮಾಧಾನವನ್ನು ಎತ್ತಿ ಹಿಡಿದಿದೆ ಎನ್ನಲಾಗಿದೆ.
ಮುಂಬೈ ಇಂಡಿಯನ್ಸ್ ತಂಡವನ್ನು ಅನ್ಫಾಲೋ ಮಾಡುವ ಬುಮ್ರಾ ನಿರ್ಧಾರದ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಬುಮ್ರಾ ಈ ಹಿಂದೆ ನವೆಂಬರ್ 2023 ರಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಅನ್ಫಾಲೋ ಮಾಡಿದ್ದರು. ಭಿನ್ನಾಭಿಪ್ರಾಯದ ವದಂತಿಗಳು ಹೊರಬರಲು ಪ್ರಾರಂಭಿಸಿದ ನಂತರ ಮುಂಬೈ ಇಂಡಿಯನ್ಸ್ ತಂಡವನ್ನು ಮತ್ತೆ ಫಾಲೋ ಮಾಡಿದ್ದರು.
ಬುಮ್ರಾ ಅವರ ಇತ್ತೀಚಿನ ಕ್ರಮಗಳ ಹೊರತಾಗಿಯೂ, ಮುಂಬೈ ಇಂಡಿಯನ್ಸ್ ಅಧಿಕೃತ ಟ್ವಿಟರ್ ಖಾತೆ ಇನ್ನೂ ಬುಮ್ರಾ ಅವರನ್ನು ಪಾಲೊ ಮಾಡುತ್ತಿದೆ.