ನವದೆಹಲಿ: ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ (Sanjana Ganesan) ಅವರು ತಮ್ಮನ್ನು ಟೀಕಿಸಲು ಪ್ರಯತ್ನಿಸಿದ ಟ್ರೋಲಿಗನೊಬ್ಬನಿಗೆ ಸೂಕ್ತ ಉತ್ತರ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ನಲ್ಲಿ ತನ್ನನ್ನು ಟ್ರೋಲ್ ಮಾಡಿದವರಿಗೆ ಚೆನ್ನಾಗಿ ಪಾಠ ಹೇಳಿದ್ದಾರೆ. ಹೆಣ್ಣಿನ ದೇಹದ ಬಗ್ಗೆ ಮಾತನಾಡದಂತೆ ತಾಕೀತು ಮಾಡಿದ್ದಾರೆ.
ಜಸ್ಪ್ರೀತ್ ಬುಮ್ರಾ ತಮ್ಮ ಪತ್ನಿ ಸಂಜನಾ ಗಣೇಶನ್ ಅವರೊಂದಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದರು, ಈ ಚಿತ್ರಕ್ಕೆ ಬಗೆಬಗೆಯ ಕಾಮೆಂಟ್ಗಳು ಬಂದಿದ್ದವು. ಅದರಲ್ಲಿ ಕೆಲವರು ಕೆಟ್ಟ ಕಾಮೆಂಟ್ಗಳನ್ನು ಮಾಡಿದ್ದಾರೆ. ಕೆಲವರು ಬಾಡಿ ಶೇಮಿಂಗ್ ಮಾಡಿದ್ದಾರೆ. ಸಂಜನಾ ಅವರು ದಪ್ಪಗಾಗಿದ್ದಾರೆ ಎಂದೆಲ್ಲ ಹೇಳಿದ್ದರು.
ಸಾಮಾಜಿಕ ಮಾಧ್ಯಮ ಬಳಕೆದಾರರು ಸಂಜನಾ ಗಣೇಶನ್ ಅವರ ದೇಹದ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ, “ಭಾಭಿ ಮೋಟಿ ಲಗ್ ರಿ ಹೈ” (ಅತ್ತಿಗೆ ದಪ್ಪವಾಗಿ ಕಾಣುತ್ತಿದ್ದಾರೆ) ಎಂದು ಬರೆದುಕೊಂಡಿದ್ದಾರೆ. ಟ್ರೋಲ್ ಗೆ ಸಂಜನಾ ಗಣೇಶನ್ ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರ ದೇಹದ ಬಗ್ಗೆ ಕಾಮೆಂಟ್ ಮಾಡದಂತೆ ಪಾಠ ಹೇಳಿದ್ದಾರೆ.
ಶಾಲೆಯಲ್ಲಿ ಕಲಿತ ವಿಜ್ಞಾನ ಪಠ್ಯಪುಸ್ತಕದಲ್ಲಿನ ವಿಷಯ ನಿಮಗೆ ನೆನಪಿರುವುದಿಲ್ಲ. ಸ್ತ್ರೀಯರ ದೇಹದ ಆಕಾರಗಳ ಬಗ್ಗೆ ಕಾಮೆಂಟ್ ಮಾಡುತ್ತಿದ್ದೀರಿ ಎಂದು ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಈ ರೀತಿ ಕಾಮೆಂಟ್ ಮಾಡದಂತೆ ಸೂಚನೆ ನೀಡಿದ್ದಾರೆ.
2021ರಲ್ಲಿ ವಿವಾಹವಾಗಿದ್ದ ಬುಮ್ರಾ- ಸಂಜನಾ
ಸಂಜನಾ ಮತ್ತು ಬುಮ್ರಾ ಮಾರ್ಚ್ 15, 2021 ರಂದು ಗೋವಾದಲ್ಲಿ ವಿವಾಹವಾಗಿದ್ದರು. ದಂಪತಿ ಸೆಪ್ಟೆಂಬರ್ 4, 2023 ರಂದು ಪುತ್ರ ಅಂಗದ್ನನ್ನು ಸ್ವಾಗತಿಸಿದ್ದರು. ಕ್ರೀಡಾ ನಿರೂಪಕಿಯಾಗಿರುವ ಸಂಜನಾ ಗರ್ಭಾವಸ್ಥೆಯಲ್ಲಿ ಗಳಿಸಿದ ತೂಕ ಕಡಿಮೆ ಮಾಡಲು ಇನ್ನೂ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸ್ವಲ್ಪ ದಪ್ಪ ಕಾಣುತ್ತಿದ್ದಾರೆ. ಹೀಗಾಗಿ ಅವರನ್ನು ಟ್ರೋಲ್ ಮಾಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲರ್ – ಡೇಲ್ ಸ್ಟೇನ್
ಜಸ್ಪ್ರೀತ್ ಬುಮ್ರಾ ಪ್ರಸ್ತುತ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಬಲಗೈ ವೇಗಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ತವರು ತಂಡವು ಸರಣಿಯನ್ನು 1-1 ರಿಂದ ಸಮಬಲಗೊಳಿಸಲು ಸಹಾಯ ಮಾಡಿದ್ದರು.
30 ವರ್ಷದ ವೇಗಿ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದ ಎರಡು ಇನ್ನಿಂಗ್ಸ್ಗಳಲ್ಲಿ ಒಂಬತ್ತು ವಿಕೆಟ್ಗಳನ್ನು ಪಡೆದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಸರಣಿಯ ಆರಂಭಿಕ ಪಂದ್ಯವನ್ನು ಸೋತ ನಂತರದ ಪಂದ್ಯವನ್ನು 106 ರನ್ಗಳಿಂದ ಗೆದ್ದಿತ್ತು.
ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಅಸಾಧಾರಣ ಪ್ರದರ್ಶನಕ್ಕಾಗಿ ಜಸ್ಪ್ರೀತ್ ಬುಮ್ರಾ ಅವರನ್ನು ಶ್ಲಾಘಿಸಿದ್ದಾರೆ. ಸವಾಲಿನ ಪಿಚ್ಗಳಲ್ಲಿ ಬುಮ್ರಾ ಅವರ ಬಹುಮುಖ ಪ್ರತಿಭೆ ಮತ್ತು ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಸ್ಟೇನ್ ಕೊಂಡಾಡಿದರು.