ಹಾಲಿವುಡ್ ಸ್ಟಾರ್ ಜಾನ್ ಡೆಪ್ (Johnny Depp) ಮತ್ತು ಅವರ ಮಾಜಿ ಪತ್ನಿ ಆಂಬರ್ ಹರ್ಡ್ (Amber Herd) ನಡುವೆ ನಡೆದ ಮಾನನಷ್ಟ ಮೊಕದ್ದಮೆಯ ಕಾನೂನು ಸಮರದ ಅಂತಿ ತೀರ್ಪು ಹೊರಬಿದ್ದ ನಂತರ ಇದ್ದಕ್ಕಿದ್ದಂತೆ ಪ್ರಚಾರಕ್ಕೆ ಬಂದವರು ಅವರ ಈ ವಿಜಯಕ್ಕೆ ಕಾರಣರಾಧ ವಕೀಲೆ ಕ್ಯಾಮಿಲ್ಲೆ ವಾಸ್ಕ್ವೆಜ್ (camille vasquez). ಕ್ಯಾಲಿಫೋರ್ನಿಯಾದ ಈ ಯುವ ವಕೀಲೆ ಇದೀಗ ವಿಶ್ವದ ಮಿಲಿಯಗಟ್ಟಲೆ ಜನರನ್ನು ತನ್ನೆಡೆಗೆ ಸೆಳೆದಿದ್ದು ಸದ್ಯದ ಕ್ರೇಜ್ ಆಗಿದ್ದಾರೆ!
೩೭ರ ಹರೆಯದ ಈಕೆ ಇದ್ದಕ್ಕಿದ್ದಂತೆ ಡೆಪ್ ಪ್ರಕರಣದ ಇಡೀ ವಿಶ್ವವನ್ನೇ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ. ಸಿನಿಮಾ ರಂಗದವರ ಈ ಪ್ರಕರಣ ಯಾವ ಸಿನಿಮಾಗೂ ಕಮ್ಮಿಯಿಲ್ಲದಂತೆ ಪ್ರಚಾರ ಗಿಟ್ಟಿಸಿದ್ದೂ ಅಲ್ಲದೆ, ಕ್ಯಾಮಿಲ್ಲೆ ರಾತ್ರಿ ಬೆಳಗಾಗುವುದರೊಳಗೆ ಮನೆ ಮಾತಾಗಿ ಈ ಇಡೀ ಸಿನಿಮಾದ ನಾಯಕಿಯಂತೆ ಮಿಂಚಿದ್ದಾರೆ!
ಸದ್ಯಕ್ಕೀಗ ಇಂಟರ್ನೆಟ್ನಲ್ಲಿ ಎಲ್ಲೆಡೆ ಕ್ಯಾಮಿಲ್ಲೆಯದೇ ಮಾತು, ಚರ್ಚೆ. ಆಕೆಯ ಪ್ರತಿವಾದವನ್ನು ವೀಕ್ಷಿಸಿದ ಮಿಲಿಯಗಟ್ಟಲೆ ಮಂದಿ ಆಕೆಯ ಚಾರ್ಮ್ಗೆ, ವೃತ್ತಿಪರತೆಗೆ, ಆತ್ಮವಿಶ್ವಾಸಕ್ಕೆ ಫಿದಾ ಆಗಿದ್ದಾರೆ. ಆಕೆಯ ಹರಿತ ಮಾತುಗಳ ಶೈಲಿ ಕೋಟ್ಯಂತರ ಮಂದಿಯ ಹೃದಯ ಗೆದ್ದಿದ್ದು, ಈ ಇಡೀ ಪ್ರಕರಣ ಇಂಟರ್ನೆಟ್ ಜಗತ್ತಿನಲ್ಲೊಂದು ಹೊಸ ಸ್ಟಾರ್ ಅನ್ನು ಬೆಳಕಿಗೆ ತಂದಿದೆ. ಆಕೆಯ ಹೆಸರಿನ ಟಿ ಶರ್ಟ್ಗಳು, ಹ್ಯಾಶ್ಟ್ಯಾಗ್ಗಳು, ಹೊಗಳುವ ಮಿಲಿಯಗಟ್ಟಲೆ ಪೋಸ್ಟ್ಗಳು ಈಗಲೂ ಹರಿದಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲದಂತೆ ಧೂಳೆಬ್ಬಿಸಿದೆ. ಕ್ಯಾಮಿಲ್ಲೆಯ ವಯಸ್ಸೇನು, ಆಕೆಗೆ ಮದುವೆಯಾಗಿದೆಯಾ ಇಲ್ಲವಾ, ಆಕೆಯ ಬಾಯ್ಫ್ರೆಂಡ್ ಯಾರು, ಕ್ಯಾಮಿಲ್ಲೆ ಒಂದು ವಕಾಲತಿಗೆ ಪಡೆಯುವ ಫೀಸು ಎಷ್ಟು ಎಂದೆಲ್ಲಾ ಅಭಿಮಾನಿಗಳು ಗೂಗಲ್ನಲ್ಲಿ ಸರ್ಚ್ ಮಾಡುತ್ತಲೇ ಇರುತ್ತಾರೆ.
ಕ್ಯಾಮಿಲ್ಲೆ ಆಂಬರ್ ಹರ್ಡ್ ಅವರನ್ನು ಪ್ರಶ್ನೆಗೆ ಒಳಪಡಿಸುವ ೨ ನಿಮಿಷದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯಗಟ್ಟಲೆ ವೀಕ್ಷಣೆ ಕಂಡಿದೆ. ದಿನ ಬೆಳಗಾಗುವುದರೊಳಗೆ ಖಾಸಗಿ ಜೀವನದಲ್ಲಿದ್ದ ವಕೀಲೆಯೊಬ್ಬರು ಸ್ಟಾರ್ ಆಗುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಜಯದ ಹಿನ್ನೆಲೆಯಲ್ಲಿ ಅಮೆರಿಕದ ಹೆಸರಾಂತ ಕಾನೂನೂ ಸಂಸ್ಥೆ ಬ್ರೌನ್ ರುಡ್ನಿಕ್ ತನ್ನ ಪಾಲುದಾರೆಯಾಗಿ ಪದೋನ್ನತಿಯನ್ನು ನೀಡಿದೆ.
ಇದನ್ನೂ ಓದಿ: Explainer: Johnny Depp Amber Heard- ಹಾಲಿವುಡ್ನ ಮುದ್ದಾದ ಜೋಡಿ ಅತಿದೊಡ್ಡ ವೈರಿಗಳಾದ ಕತೆ
ಬಹಳಷ್ಟು ಮಂದಿ, ತಾವು ಮೊದಲಿನಿಂದಲೂ ಜಾನಿ ಡೆಪ್ ಅವರ ಅಭಿಮಾನಿಗಳಾಗಿದ್ದೆವು. ಆದರೆ ಈಗ ಅದಕ್ಕಿಂತಲೂ ಹೆಚ್ಚು ಕ್ಯಾಮಿಲ್ಲೆಯ ಅಭಿಮಾನಿಗಳಾಗಿ ಬಿಟ್ಟಿದ್ದೇವೆ ಎಂದು ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣ ಗೆದ್ದುಕೊಳ್ಳುವ ಮೂಲಕ ಭಾವಪರವಶರಾದ ಕ್ಯಾಮಿಲ್ಲೆ ಹಾಗೂ ಡೆಪ್ ಕೆಮಿಸ್ಟ್ರಿಯನ್ನು ನೋಡಿದ ಅಭಿಮಾನಿಗಳು, ತಾವು ಡೆಪ್ ಜೊತೆ ಡೇಟಿಂಗ್ ಮಾಡುತ್ತಿದೀರಾ ಎಂದೂ ಪ್ರಶ್ನೆ ಹಾಕಿದ್ದಾರೆ. ಇನ್ನೂ ಕೆಲವರು ಡೆಪ್- ಆಂಬರ್ ಜೋಡಿಯ ಖ್ಯಾತಿಯ ಅಕ್ವಾಮ್ಯಾನ್ನ ಸೀಕ್ವೆಲ್ನಲ್ಲಿ ಆಂಬರ್ ಜಾಗಕ್ಕೆ ಕ್ಯಾಮಿಲ್ಲೆ ಅವರನ್ನು ತನ್ನಿ ಎಂದೂ ಒತ್ತಾಯಿಸಿದ್ದಾರೆ.
ಕ್ಯಾಮಿಲ್ಲೆ ಅವರು ಸೌತ್ ವೆಸ್ಟರ್ನ್ ಕಾನೂನು ಶಾಲೆಯ ೨೦೧೦ನೇ ಸಾಲಿನ ವಿದ್ಯಾರ್ಥಿನಿಯಾಗಿದ್ದು ೨೦೦೬ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ವಿವಿಯಿಂದ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಷ್ಟಿತ ಲ್ಯಾಟಿನ್ ಗೌರವವಾದ ವ್ಯಾಗ್ನಾ ಕಮ್ ಲಾಡ್ದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದರು. ೨೦೧೮ರಿಂದ ಬ್ರೌನ್ ರುಡ್ನಿಕ್ ಕಾನೂನು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಾನನಷ್ಟ ಪ್ರಕರಣ, ವ್ಯಾಪಾರ ಸಂಬಂಧ ವಿವಾದ, ಉದ್ಯೋಗ ದಾವೆ ಸೇರಿದಂತೆ ಹಲವು ವಿಷಯಗಳಲ್ಲಿ ೧೦ ವರ್ಷಕ್ಕೂ ಹೆಚ್ಚು ಪರಿಣತಿ ಪಡೆದಿದ್ದಾರೆ.
ಜಾನಿ ಡೆಪ್ ಹಾಗೂ ಆಂಬರ್ ಹರ್ಡ್ ೨೦೧೫ರಲ್ಲಿ ಮದುವೆಯಾಗಿದ್ದರು. ಹಾಲಿವುಡ್ ತಾರೆಯರಾದ ಇವರ ದಾಂಪತ್ಯ ಹೆಚ್ಚು ಕಾಲ ನಿಲ್ಲಲಿಲ್ಲ. ೨೦೧೭ರಲ್ಲಿ ಮುರಿದು ಬಿದ್ದ ಇವರ ಸಂಬಂಧ ಆಂಬರ್ ಪತ್ರಿಕೆಯೊಂದರಲ್ಲಿ ಲೇಖನ ಬರೆಯುವ ಮೂಲಕ, ಡೆಪ್ ಅವರು ಮಧ್ಯಪಾನ ಹಾಗೂ ಮಾದಕ ವಸ್ತುಗಳ ನಶೆಯಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದರು ಎಂದು ಆರೋಪಿಸಿದ್ದರು. ಇದರಿಂದ ಸಾರ್ವಜನಿಕ ಜೀವನದಲ್ಲಿರುವ ತನಗೆ ಮಾನಹಾನಿಯಾಗಿದೆ ಎಂದು ಡೆಪ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರತಿಯಾಗಿ ಆಂಬರ್ ಕೂಡಾ ಪ್ರಕರಣ ದಾಖಲಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಮಹಿಳೆಯರ ಪರವಾಗಿಯೇ ತೀರ್ಪು ಬರುವ ಹೆಚ್ಚು ಪ್ರಕರಣಗಳ ಪೈಕಿ, ಭಿನ್ನವಾಗಿ ನಿಂತ ಪ್ರಕರಣವಾಗಿ ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ಇದನ್ನೂ ಓದಿ: Johnny Depp Vs Amber Heard: ಹೆಂಡತಿ ಬರೆದ ಲೇಖನದಿಂದ ಅಪಮಾನ, ಜಾನಿಡೆಪ್ಗೆ ₹116 ಕೋಟಿ ಪರಿಹಾರ ಧನ