Site icon Vistara News

K S Bhagavan: ರಾಮ ದಶರಥನ ಮಗನೇ ಅಲ್ಲ, ಪುರೋಹಿತನಿಗೆ ಹುಟ್ಟಿದವನು: ಪ್ರೊ. ಭಗವಾನ್ ವಿವಾದಿತ ಹೇಳಿಕೆ

K S Bhagavan

ದಾವಣಗೆರೆ:‌ ಶ್ರೀರಾಮ ಹಾಗೂ ಹಿಂದು ಧರ್ಮದ ಬಗ್ಗೆ ಸದಾ ವಿವಾದಾತ್ಮಕ ಹೇಳಿಕೆಗಳು ನೀಡುವ ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್ (K S Bhagavan) ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಶ್ರೀರಾಮನ ಹುಟ್ಟಿನ ಬಗ್ಗೆ ಮಾತನಾಡಿರುವ ಸಾಹಿತಿ ಭಗವಾನ್‌, ಶ್ರೀ ರಾಮ ದಶರಥನ ಮಗನೇ ಅಲ್ಲ, ಪುರೋಹಿತನಿಗೆ ಹುಟ್ಟಿದವನು ಎಂದು ಹೇಳಿದ್ದಾರೆ.

ಹರಿಹರದ ಪ್ರೊ. ಕೃಷ್ಣಪ್ಪ ಭವನದಲ್ಲಿ ನಡೆದ ಡಾ. ಅಂಬೇಡ್ಕರ್, ಕೃಷ್ಣಪ್ಪ‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಶ್ರೀ ರಾಮ ದಶರಥನಿಗೆ ಹುಟ್ಟೇ ಇಲ್ಲ, ಪುರೋಹಿತರಿಗೆ ಹುಟ್ಟಿದವನು. ಇದು ವಾಲ್ಮೀಕಿ ರಾಮಾಯಣದಲ್ಲೇ ಇದೆ, ಓದಿ. ರಾಮ ರಾಜ್ಯಭಾರ ಮಾಡೇ ಇಲ್ಲ, ರಾಮನ ತಮ್ಮ ಭರತ ರಾಜ್ಯಭಾರ ಮಾಡಿದ್ದ. ರಾಮ ಬೆಳಗ್ಗೆ ಪುರೋಹಿತರ ಜೊತೆ ಸೇರಿ ಪೂಜೆ ಮಾಡುತ್ತಿದ್ದ. ಮಧ್ಯಾಹ್ನವಾದರೆ ಸಾಕು ಹುಡುಗಿಯರ ಜತೆ ಸೇರಿ ಹೆಂಡ ಕುಡಿಯುತ್ತಿದ್ದ. ರಾಮ ಮಧು ಮೇರೆ ಎಂಬ ಹೆಂಡ ಕುಡಿಯುತ್ತಿದ್ದ ಎಂದು ಹೇಳಿದ್ದಾರೆ.

ಇನ್ನು ಮಹಾಭಾರತ ವಿಷಯಕ್ಕೆ ಬಂದರೆ, ಶಾಪಗ್ರಸ್ಥ ರಾಜ ಪಾಂಡು, ಐವರು ಪಾಂಡವರ ತಂದೆ ಎಂದು ಹೇಳಲಾಗುತ್ತಿದ್ದರೂ ಪಾಂಡವರು ಹುಟ್ಟಿದ್ದು ಮಾತ್ರ ದೇವತೆಗಳಿಂದ ಎಂದು ಮಹಾಭಾರತದಲ್ಲೇ ಇದೆ’ ಎಂದು ತಿಳಿಸಿದ್ದಾರೆ.

ಪುರಾಣಗಳನ್ನು ಅಭ್ಯಾಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಪುರಾಣಗಳು ಹಾಗೂ ಮನುಸ್ಮೃತಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲ ಜಾತಿ, ಜನಾಂಗದವರನ್ನು ಶೂದ್ರರೆಂದು ಕರೆದಿವೆ. ಶೂದ್ರರೆಲ್ಲಾ ಬ್ರಾಹ್ಮಣರ ಸೇವಕರು ಎಂಬುದನ್ನು ಸಾರಿ ಹೇಳಿದೆ. ಮನುಷ್ಯರನ್ನು ಮನುಷ್ಯರಂತೆ ಕಾಣದ ಇಂತಹ ಪುರಾಣ, ಮನುಸ್ಮೃತಿಯಿಂದ ದೇಶದ ಬಹುಸಂಖ್ಯಾತರಿಗೆ ಏನೂ ಪ್ರಯೋಜನವಿಲ್ಲ, ಆದರೆ ಕೆಲವರು ಪುರಾಣ, ಮನುಸ್ಮೃತಿಯನ್ನು ತಲೆ ಮೇಲೆ ಹೊತ್ತು ಅದರ ಪ್ರಕಾರ ಆಡಳಿತ ನಡೆಸುತ್ತೇವೆಂದು ಕುಣಿಯುತ್ತಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

ಈ ಹಿಂದೆ ಭಗವಾನ್‌ ಅವರು, ಅಯೋಧ್ಯೆಯ ಅರಸನಾಗಿದ್ದ ಶ್ರೀರಾಮನು ಮದ್ಯ ಸೇವಿಸುತ್ತಿದ್ದ. ಆತ ಪತ್ನಿಯನ್ನು ಕಾಡಿಗೆ ಅಟ್ಟಿದ್ದ. ಹೀಗಾಗಿ ಆತನ ದೇವರೇ ಅಲ್ಲ ಎಂದು ಹೇಳಿದ್ದರು. ಇತ್ತೀಚೆಗೆ ಒಕ್ಕಲಿಗರು ಸಂಸ್ಕೃತಿ ಹೀನರು ಅಥವಾ ಅವರು ಹೀನ ಸಂಸ್ಕೃತಿಯುಳ್ಳವರು. ಈ ಮಾತು ನಾನು ಹೇಳಿದ್ದಲ್ಲ, ಕುವೆಂಪು ಅವರೇ ಹೇಳಿರೋದು ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು. ಭಗವಾನ್‌ ವಿವಾದಿತ ಹೇಳಿಕೆಗಳ ವಿರುದ್ಧ ಈ ಹಿಂದೆ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದವು.

Exit mobile version