Site icon Vistara News

Kalki 2898 AD: ಕಲ್ಕಿ ಚಿತ್ರದ ʼಬುಜ್ಜಿʼ ಪಾತ್ರ ರಿವೀಲ್; ಅದ್ಧೂರಿ ಕಾರ್ಯಕ್ರಮದ LIVE ವಿಡಿಯೊ ಇಲ್ಲಿದೆ

Kalki 2898 AD

ಹೈದರಾಬಾದ್: ಪ್ಯಾನ್‍ ಇಂಡಿಯಾ ಸೂಪರ್‌ ಸ್ಟಾರ್‌ ಪ್ರಭಾಸ್‍ (Actor Prabhas) ಅಭಿನಯದ ‘ಕಲ್ಕಿ 2898 AD’ (Kalki 2898 AD) ಚಿತ್ರವು ಜೂನ್ 27ರಂದು ತೆರೆಗೆ ಬರಲು ಸಜ್ಜಾಗಿದೆ. ಹೀಗಾಗಿ ಸಿನಿಮಾದಲ್ಲಿನ ಪ್ರಮುಖ ನಟರ ಪಾತ್ರಗಳನ್ನು ಪರಿಚಯಿಸುತ್ತಿರುವ ಚಿತ್ರತಂಡ ಬುಧವಾರ, ಚಿತ್ರದ ಐದನೇ ಸೂಪರ್‌ ಸ್ಟಾರ್ ಬುಜ್ಜಿಯನ್ನು ಅನಾವರಣಗೊಳಿಸಿದೆ. ಇದಕ್ಕಾಗಿ ನಗರದ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಲ್ಕಿ ಚಿತ್ರದಲ್ಲಿನ ಐದನೇ ಸೂಪರ್‌ ಸ್ಟಾರ್ ಬುಜ್ಜಿಯನ್ನು ರಿವೀಲ್‌ ಮಾಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೈರವನ (ಪ್ರಭಾಸ್)‌ ಜತೆ ಬುಜ್ಜಿಯನ್ನು ನೋಡಲು ವಿವಿಧೆಡೆಯಿಂದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ʼಬುಜ್ಜಿʼ ಎಂಬ ಸೂಪರ್‌ ಕಾರನ್ನು ಅನಾವರಣ ಮಾಡಲಾಗಿದೆ. ʼಬುಜ್ಜಿʼ ಎಂಬುವುದು ರೋಬೋಟಿಕ್‌ ಕಾರು ಆಗಿದ್ದು, ಕಲ್ಕಿ ಚಿತ್ರದಲ್ಲಿ ಭೈರವನಿಗೆ (ಪ್ರಭಾಸ್‌) ಆಪ್ತಮಿತ್ರ ಆಗಿದೆ.

ಚಿತ್ರದಲ್ಲಿ ಈ ಬುಜ್ಜಿಗೆ ʼಮಹಾನಟಿʼ ಚಿತ್ರದ ಖ್ಯಾತಿಯ ನಟಿ ಕೀರ್ತಿ ಸುರೇಶ್‌ ವಾಯ್ಸ್‌ ನೀಡಿದ್ದಾರೆ. ಪ್ರೇಕ್ಷಕರ ಚಪ್ಪಾಳೆ, ಕೂಗಾಟದ ನಡುವೆ ರೋಬೋಟಿಕ್‌ ಮಾದರಿಯ ಕಾರಿನಲ್ಲಿ ನಟ ಪ್ರಭಾಸ್‌ ಎಂಟ್ರಿ ನೀಡಿದರು. ನಂತರ ಬುಜ್ಜಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದರು.

ಚಿತ್ರದಲ್ಲಿ ಐದನೇ ಸೂಪರ್‌ ಸ್ಟಾರ್‌ ಯಾರು? ಎಂಬ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಆತನ ಹೆಸರು ಬುಜ್ಜಿ ಮತ್ತು ಈತ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯ ಎಂಬುವುದಾಗಿ ಮಾತ್ರ ಚಿತ್ರತಂಡ ಮಾಹಿತಿ ನೀಡಿತ್ತು. ಇತ್ತೀಚೆಗೆ ಬಿಡುಗಡೆ ಮಾಡಿದ್ದ ‘From Skratch: Building A Superstar’ ಹೆಸರಿನ ಈ ವಿಡಿಯೊದಲ್ಲಿ ಬುಜ್ಜಿಯ ಕುರಿತು ಪರಿಚಯ ಮಾಡಿಕೊಡಲಾಗಿತ್ತು. 2020ರ ಜೂನ್‍ನಲ್ಲಿ ಅಂಥದ್ದೊಂದು ಪಾತ್ರದ ಸೃಷ್ಠಿ ಹೇಗಾಯಿತು ಎಂದು ಪ್ರಾರಂಭವಾಗುವುದರಿಂದ, ಅಂತಿಮವಾಗಿ ಅದು ಹೇಗೆ ರೂಪುಗೊಂಡಿತು ಎಂಬುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿತ್ತು. ಇದೀಗ ಬುಜ್ಜಿಯ ಪಾತ್ರ ಅನಾವರಣ ಮಾಡಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‌ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಇದನ್ನೂ ಓದಿ | Kalki 2898 AD: ʼಕಲ್ಕಿʼ ಚಿತ್ರಕ್ಕಾಗಿ ಕನ್ನಡದಲ್ಲಿ ಡಬ್‌ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

Exit mobile version