ಬೆಂಗಳೂರು: ವರುಣಾರ್ಭಟಕ್ಕೆ ರಾಜ್ಯದ ಹಲವೆಡೆ ನದಿಗಳು ಉಕ್ಕಿ ಹರಿದು ನೆರೆ ಸೃಷ್ಟಿಯಾಗಿದೆ. ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆ ಸೇರಿ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದ (Karnataka Rain) ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ನೀರಿನ ರಭಸಕ್ಕೆ ಹಲವೆಡೆ ಸೇತುವೆಗಳು ಕುಸಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಡ್ರೋನ್ ಕಣ್ಣಲ್ಲಿ ಅಘನಾಶಿನಿ ನದಿ ಪ್ರವಾಹ ಸೆರೆ
ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಕಳೆದೊಂದು ವಾರದಿಂದ ವರುಣ ಅಬ್ಬರಿಸುತ್ತಿದ್ದಾನೆ. ವರುಣಾರ್ಭಟಕ್ಕೆ ನದಿಗಳು ಉಕ್ಕಿ ಹರಿದು ಹಲವೆಡೆ ನೆರೆ ಸೃಷ್ಟಿಯಾಗಿದ್ದು, ಡ್ರೋನ್ ಕಣ್ಣಲ್ಲಿ ಅಘನಾಶಿನಿ ನದಿ ಪ್ರವಾಹ ಸೆರೆಯಾಗಿದೆ. ಕುಮಟಾ ತಾಲೂಕಿನ ಹಲವು ಗ್ರಾಮಗಳಲ್ಲಿ ಅಘನಾಶಿನಿ ನೆರೆ ಸೃಷ್ಟಿಸಿದ್ದು, ಹವ್ಯಾಸಿ ಛಾಯಾಚಿತ್ರಗಾರ ಗೋಪಿ ಜಾಲಿ ಡ್ರೋನ್ ಕ್ಯಾಮೆರಾದಲ್ಲಿ ನೆರೆ ಸ್ಥಿತಿಯನ್ನು ಸೆರೆಹಿಡಿದಿದ್ದಾರೆ.
ಸಕಲೇಶಪುರ ಬಳಿ ಹೆದ್ದಾರಿಯ ತಡೆಗೋಡೆ ಕುಸಿತ
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಬಳಿ ಹೆದ್ದಾರಿಯ ತಡೆಗೋಡೆ ಕುಸಿದಿದೆ. ಸುಮಾರು 500 ಮೀಟರ್ ಉದ್ದಕ್ಕೂ ರಸ್ತೆಗೆ ಹೊಂದಿಕೊಂಡಿದ್ದ ತಡೆ ಗೋಡೆ ಕುಸಿಯುತ್ತಿದೆ. ಮಳೆ ಹೆಚ್ಚಾದರೆ ಚತುಷ್ಪಥ ರಸ್ತೆಯ ಒಂದು ಭಾಗದ ಕಾಂಕ್ರಿಟ್ ರಸ್ತೆಯೇ ಕೊಚ್ಚಿ ಹೋಗೋ ಆತಂಕ ಇದೆ. ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿತ ಆರೋಪ ಕೇಳಿಬಂದಿದೆ. ನೆನ್ನೆ ಕೂಡ ತಾಲೂಕಿನ ಗುಲಗಳಲೆ ಬಳಿ ಕುಸಿದಿದ್ದ ರಾಷ್ಟ್ರೀಯ ಹೆದ್ದಾರಿ ಕುಸಿದಿತ್ತು.
ದೊಡ್ಡತಪ್ಲು ಬಳಿ ಗುಡ್ಡ ಕುಸಿತ
ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಗುಡ್ಡ ಕುಸಿದಿದ್ದರಿಂದ ಸುಮಾರು ಒಂದುಗಂಟೆಗೂ ಅಧಿಕ ಸಮಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ. ರಸ್ತೆಗೆ ಕುಸಿದು ಮಣ್ಣು ತೆರವು ಬಳಿಕ ವಾಹನ ಸಂಚಾರ ಮತ್ತೆ ಆರಂಭವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ಹೋಗೋ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಹಾನುಬಾಳ್ ಮೂಲಕ ತೆರಳಲು ಸೂಚಿಸಿಲಾಗಿದೆ.
ಶೃಂಗೇರಿಯಲ್ಲಿ ನಿಲ್ಲದ ತುಂಗಾ ನದಿ ಆರ್ಭಟ
ಚಿಕ್ಕಮಗಳೂರು: ಜಿಲ್ಲೆಯ ಕೆರೆಕಟ್ಟೆ, ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಶೃಂಗೇರಿಯಲ್ಲಿ ತುಂಗಾ ನದಿ ಆರ್ಭಟಿಸುತ್ತಿದೆ. ನದಿ ಅಬ್ಬರಕ್ಕೆ ಭಾರತಿ ತೀರ್ಥ ರಸ್ತೆ ಜಲಾವೃತವಾಗಿದ್ದು, ಪಟ್ಟಣದ ಗಾಂಧಿ ಮೈದಾನವು ಸಂಪೂರ್ಣ ಮುಳುಗಡೆಯಾಗಿದೆ. ನದಿ ಪಾತ್ರದ ಅಂಗಡಿ ಮುಂಗಟ್ಟು, ಮನೆಗಳು ಜಲಾವೃತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರ ನಿಷೇಧ ಮಾಡಲಾಗಿದೆ.
ಭಾರಿ ಮಳೆಗೆ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿದಿದೆ. ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲೂ ಗುಡ್ಡ ಕುಸಿತಿದ್ದು, ಐದರಿಂದ ಆರು ಕಡೆ ಗುಡ್ಡದ ಮಣ್ಣು ಕುಸಿದಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ ಪ್ರವಾಸಿ ತಾಣಗಳಾಗಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರ ವಾಹನಗಳಿಗೆ ನಿಷೇಧ ವಿಧಿಸಲಾಗಿದೆ.
ಮುರಿದು ಬಿದ್ದ ಕಬ್ಬಿಣದ ಸೇತುವೆ
ಭಾರೀ ಮಳೆ ಹಿನ್ನೆಲೆ ಶೃಂಗೇರಿ ತಾಲೂಕಿನ ಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಮ್ಮಾರು ಗ್ರಾಮದ ತೂಗು ಸೇತುವೆ ಕುಸಿದಿದೆ. ನೋಡ ನೋಡುತ್ತಿದ್ದಂತೆ ಜನರ ಕಣ್ಣೆದುರೇ ಕಬ್ಬಿಣದ ಸೇತುವೆ ಮುರಿದು ಬಿದ್ದಿದೆ.
ಸುಮಾರು ಐದಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹೊಳೆಹದ್ದು ಸೇತುವೆ ಇದಾಗಿದ್ದು, ಗ್ರಾಮದಿಂದ ಹೊರ ಬರಲಾಗದೆ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಹೊನ್ನಾಳಿ, ಹರಿಹರದಲ್ಲಿ ನದಿ ಪಾತ್ರದ ಪ್ರದೇಶಗಳು ಮುಳುಗಡೆ
ದಾವಣಗೆರೆ: ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದ ದಾವಣಗೆರೆ ಜಿಲ್ಲೆಯ ಸಮೀಪ ತುಂಗಭದ್ರಾ ನದಿ ಮೈತುಂಬಿ ಹರಿಯುತ್ತಿದೆ. ತುಂಗಾ ನದಿಯಿಂದ 75 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ಹೊನ್ನಾಳಿ, ಹರಿಹರ ಸೇರಿದಂತೆ ನದಿ ಪಾತ್ರದ ಪ್ರದೇಶಗಳು ಮುಳುಗಡೆಯಾಗಿವೆ.
ಶ್ರೀ ಕ್ಷೇತ್ರ ಉಕ್ಕಡಗಾತ್ರಿ ದೇವಸ್ಥಾನದ ಮುಂಭಾಗಕ್ಕೆ ತುಂಗಭದ್ರಾ ನದಿ ನೀರು ಬಂದಿದ್ದು, ಸ್ನಾನ ಘಟ್ಟ, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಳುಗಡೆಯಾಗಿವೆ. ಉಕ್ಕಡಗಾತ್ರಿಗೆ ಪ್ರವೇಶ ಮಾಡುವ ಒಂದು ರಸ್ತೆ ಮುಳುಗಡೆಯಾಗಿದೆ. ಸೇತುವೆ ಮಾಡಿಸಿ ಎಂದು ದಶಕಗಳಿಂದ ಹೋರಾಟ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಪ್ರತಿ ಬಾರಿ ನದಿಯಲ್ಲಿ ನೀರು ಹೆಚ್ಚಾದಾಗ ಎರಡು ರಸ್ತೆಗಳು ಬಂದ್ ಆಗಿ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ. ಹೊನ್ನಾಳಿ, ಹರಿಹರ ಸೇರಿದಂತೆ ಹಲವು ಕಡೆಗಳಲ್ಲಿ ಕೂಡ ವಸತಿ ಪ್ರದೇಶಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ. ನದಿಯಲ್ಲಿ ಹೊರ ಹರಿವು ಕಡಿಮೆಯಾಗದಿದ್ದರೆ ಜನರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಮಡಿಕೇರಿ ಸಮೀಪ ಬಿರುಕು ಬಿಟ್ಟ ಗುಡ್ಡ
ಕೊಡಗು: ಮಡಿಕೇರಿ ಸಮೀಪದ ಮದೆನಾಡು ಸಮೀಪ ರಾಷ್ಟ್ರೀಯ 275ರಲ್ಲಿ ಗುಡ್ಡ ಕುಸಿಯುವ ಆತಂಕ ಉಂಟಾಗಿದೆ. ರಸ್ತೆ ಬದಿ ಇರೋ ಗುಡ್ಡದಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಯಾವ ಕ್ಷಣದಲ್ಲಾದರೂ ಗುಡ್ಡ ಕುಸಿದು ಬೀಳುವ ಸಾಧ್ಯತೆ ಇದೆ. ಮಂಜು ಮುಸುಕಿದ ವಾತಾವರಣದಿಂದ ವಾಹನ ಸವಾರರಿಗೆ ದಾರಿ ಸರಿಯಾಗಿ ಕಾಣುತ್ತಿಲ್ಲ. ಬಿರುಕು ಬಿಟ್ಟ ಸ್ಥಳಕ್ಕೆ ಮತ್ತಷ್ಟು ನೀರು ನುಗ್ಗಿದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ.
ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್
ಉಡುಪಿ: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಶ್ಚಿಮ ಘಟ್ಟ, ಹೆಬ್ರಿ, ಕಾರ್ಕಳ, ಆಗುಂಬೆಯಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನು ಸೀತಾ ನದಿಯ ಸುತ್ತಮುತ್ತಲ ಗ್ರಾಮ, ತೋಟಗದ್ದೆಗಳು ಜಲಾವೃತವಾದ ದೃಶ್ಯವನ್ನು ಡ್ರೋನ್ ಕ್ಯಾಮೆರಾದಿಂದ ಛಾಯಾಗ್ರಹಕ ಸಿದ್ಧಾರ್ಥ ನೀಲಾವರ ಸೆರೆಹಿಡಿದಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆ
ಮೈಸೂರು: ಕಬಿನಿ ಜಲಾಶಯದಿಂದ 36 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ. ಕಬಿನಿ ಡ್ಯಾಂನಿಂದ ಕಪಿಲಾ ನದಿಗೆ ನೀರು ಬಿಡುಗಡೆ ಮಾಡಿದ್ದರಿಂದ
ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ. ಇನ್ನು ಮನೆಗಳಿಗೆ ನೀರು ನುಗ್ಗುತ್ತಿರುವ ಹಿನ್ನೆಲೆಯಲ್ಲಿ ನದಿ ಪಕ್ಕದ ನಿವಾಸಿಗಳು ಮನೆ ಖಾಲಿ ಮಾಡುತ್ತಿದ್ದು, ಪ್ರವಾಹದ ಭೀತಿ ಎದುರಿದುತ್ತಿದ್ದಾರೆ.
ಇದನ್ನೂ ಓದಿ | Ankola landslide Case: ಅಂಕೋಲಾ ಗುಡ್ಡ ಕುಸಿತ ಪ್ರಕರಣ; ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಮೈದುಂಬಿ ಧುಮ್ಮಿಕ್ಕುತ್ತಿರುವ ಹೊಗೇನಕಲ್ ಜಲಪಾತ
ಚಾಮರಾಜನಗರ: ಕೆ.ಆರ್.ಎಸ್. ಹಾಗೂ ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಕಾವೇರಿ ರೌದ್ರ ನರ್ತನ ಮಾಡುತ್ತಿದ್ದು, ಇದರಿಂದ ಕರ್ನಾಟಕ- ತಮಿಳುನಾಡು ಗಡಿಯಲ್ಲಿರುವ ಹೊಗೇನಕಲ್ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ.