Site icon Vistara News

Karnataka Rain : ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; ಹೈರಾಣಾದ ವಾಹನ ಸವಾರರು

Karnataka weather Forecast

ಬೆಂಗಳೂರು: ಗುರುವಾರ ಮಧ್ಯಾಹ್ನದ ಹೊತ್ತಿಗೆ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ದಿಢೀರ್‌ ಶುರುವಾದ ಮಳೆಯಿಂದಾಗಿ ಬೈಕ್‌ ಸವಾರರು, ಸಾರ್ವಜನಿಕರು ಪರದಾಡಿದರು. ಮೆಜೆಸ್ಟಿಕ್‌, ಚಿಕ್ಕಪೇಟೆ, ಉಪ್ಪಾರ್‌ಪೇಟೆ, ಶಿವಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ರಾಜಾಜಿನಗರ, ರೇಸ್ ಕೋರ್ಸ್, ಮಹಾರಾಣಿ ಕಾಲೇಜು, ಸಿಐಡಿ ಆಫೀಸ್ ಸೇರಿದಂತೆ ಪ್ಯಾಲೇಸ್ ರಸ್ತೆಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇನ್ನೆರಡು ದಿನಗಳು ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Karnataka Rain

ರಾಜಧಾನಿ ಬೆಂಗಳೂರಲ್ಲಿ‌ ಬೆಳಗಿನ ಸಮಯ ಮೋಡ ಕವಿದ ವಾತಾವರಣ ಇತ್ತು, ನಂತರ ಬಿಸಿಲು ಆವರಿಸಿತ್ತು. ನೋಡನೋಡುತ್ತಿದ್ದಂತೆ ಮಧ್ಯಾಹ್ನ ಆಗುತ್ತಿದ್ದಂತೆ ಕಗ್ಗತ್ತಲು ಆವರಿಸಿ, ಮಧ್ಯಾಹ್ನ 2ರ ಸುಮಾರಿಗೆ ಶುರುವಾದ ಮಳೆಯು (Rain News) ಅರ್ಧ ಗಂಟೆಗೂ ಹೆಚ್ಚು ಸಮಯ (Bengaluru Rain) ಅಬ್ಬರಿಸಿದೆ. ಮಳೆ ಹಿನ್ನೆಲೆ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನರು ಹೈರಾಣಾದರು.

Karnataka Rain

ವೈಟ್ ಫೀಲ್ಡ್ ಸುತ್ತ ಮುತ್ತ ಭಾರಿ ಮಳೆಯಿಂದಾಗಿ ರಸ್ತೆಯಲ್ಲಿಯೇ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ವರ್ತೂರು, ತುಬರಹಳ್ಳಿ ಕಡೆ ನಿಧಾನಗತಿಯ ಸಂಚಾರ ಇದ್ದು, ಭಾರೀ ಮಳೆಗೆ ಸಿಲುಕಿ ವಾಹನ ಸವಾರರು ಪರದಾಡಿದರು.

ತಿಪಟೂರಿನಲ್ಲಿ ಭಾರಿ ಮಳೆ, ಜನ-ಜೀವನ ಅಸ್ತವ್ಯಸ್ತ

ತುಮಕೂರಿನ ತಿಪಟೂರಿನಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ತಿಪಟೂರು ನಗರದ ಗಾಂಧಿನಗರ ಹಾಗೂ ಅರಸು ನಗರ ಕಾಲೋನಿಗಳ ಮನೆಗಳಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗಿತ್ತು. ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ನಗರಸಭೆ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದರು. ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲ, ಹೀಗಾಗಿ ಮನೆಗಳಿಗೆ ನೀರು ನುಗ್ಗಿದೆ ಎಂದು ಆಕ್ರೋಶ ಹೊರಹಾಕಿದರು.

ಧರೆಗುರುಳಿದ ಬೃಹತ್ ಮರ

ಬೆಂಗಳೂರಿನ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ಬೃಹತ್ ಮರವೊಂದು ಧರೆಗುರುಳಿದೆ. ಆಲದಮರ ಬಸ್‌ ನಿಲ್ದಾಣದ ಮೇಲೆಯೇ ಬೃಹತ್ ಮರ ಬಿದ್ದಿದ್ದು,ಸ್ವಲ್ಪದರಲ್ಲೇ ಹಲವರು ಪಾರಾಗಿದ್ದಾರೆ. ನಿತ್ಯ ಬಸ್ ನಿಲ್ದಾಣದಲ್ಲಿ ಹತ್ತಾರು ಜನ ಪ್ರಯಾಣಿಕರು ನಿಲುತ್ತಿದ್ದರು. ಮರ ಬೀಳುವ ಶಬ್ಧ ಕೇಳಿ ಜನರು ಓಡಿಹೋದ ಕಾರಣ ಎಲ್ಲರೂ ಬಜಾವ್ ಆಗಿದ್ದಾರೆ. ಅದೃಷ್ಟವಶಾತ್‌ ಮರ ಬೀಳುವ ಸಮಯದಲ್ಲಿ ಯಾವುದೇ ವಾಹನಗಳು ಸಂಚಾರಿಸುತ್ತಿರಲಿಲ್ಲ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.

Exit mobile version