Site icon Vistara News

Celebrity Cricket League : ಬಿಗ್​ಬಾಸ್​ ಮುಗಿಸಿ ಕ್ರಿಕೆಟ್​ ಆಡಲು ಹೊರಟ ಕಿಚ್ಚ ಸುದೀಪ್​

Celebrity Cricket league

ಮುಂಬೈ : ಭಾರತದ ಜನಪ್ರಿಯ ಒಟಿಟಿ ವೇದಿಕೆಯಗಿರುವ ಜಿಯೊಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (ಸಿಸಿಎಲ್‌) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ಇದರ ಭಾಗವಾಗಿ, ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ಹತ್ತನೇ ಸೀಸನ್‌ ಅನ್ನು ಜಿಯೊಸಿನಿಮಾ ಎಕ್ಸ್‌ಕ್ಲ್ಯೂಸಿವ್ ಆಗಿ ನೇರಪ್ರಸಾರ ಮಾಡಲಿದೆ. ನಾಲ್ಕು ವಾರಾಂತ್ಯಗಳಲ್ಲಿ ನಡೆಯಲಿರುವ ಸಿಸಿಎಲ್‌ 10ನೇ ಸೀಸನ್‌ನಲ್ಲಿ 20 ರೋಚಕ ಪಂದ್ಯಗಳು ನಡೆಯಲಿವೆ. ಕ್ರಿಕೆಟ್‌ ಅಭಿಮಾನಿಗಳಷ್ಟೇ ಅಲ್ಲದೆ, ಸಿನಿಮಾಪ್ರೇಮಿಗಳೂ ಕುತೂಹಲದಿಂದ ವೀಕ್ಷಿಸುವ ಈ ಕ್ರಿಕೆಟ್‌ ಲೀಗ್‌ ಅನ್ನು ವ್ಯಾಪಕ ಪ್ರೇಕ್ಷವರ್ಗಕ್ಕೆ ನೇರವಾಗಿ ತಲುಪಿಸಲು ಜಿಯೊಸಿನಿಮಾ ಮುಂದಾಗಿದೆ. ಅಂದ ಹಾಗೆ ಇತ್ತಿಚೆಗಷ್ಟೇ ಬಿಗ್​ಬಾಸ್​ ಕನ್ನಡ 10ನೇ ಆವೃತ್ತಿ ಮುಗಿಸಿದರು ಕಿಚ್ಚ ಸುದೀಪ್ ಅವರು ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ ಮೂಲಕ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಪ್ರಾರಂಭವಾಗಿದ್ದು 2011ರಲ್ಲಿ. ನಂತರದ ದಿನಗಳಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿರುವ ಸಿಸಿಎಲ್, ಇಂದು ಭಾರತದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಕರನ್ನು ಹೊಂದಿರುವ ಕ್ರೀಡಾ-ಮನರಂಜನೆಯ ಕೂಟವಾಗಿ ಆಗಿ ಹೊರಹೊಮ್ಮಿದೆ. ಟಿವಿ ಮತ್ತು ಡಿಜಿಟಲ್‌ ಮಾಧ್ಯಮದ ಮೂಲಕ ಪ್ರಸಾರವಾಗಿದ್ದ ಕಳೆದ ವರ್ಷದ ಸಿಸಿಎಲ್‌ ಅನ್ನು, ದೇಶದಾದ್ಯಂತ 250 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದರು.

ಯಾವ್ಯಾವ ತಂಡಗಳು?

ಭಾರತದ ಎಂಟು ಪ್ರಮುಖ ಚಿತ್ರರಂಗವನ್ನು ಪ್ರತಿನಿಧಿಸುವ ತಂಡಗಳು ಈ ಬಾರಿಯ ಸಿಸಿಎಲ್‌ನಲ್ಲಿ ಭಾಗವಹಿಸುತ್ತಿವೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ ಮತ್ತು ಪಂಜಾಬ್‌ ತಂಡಗಳು ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನಲ್ಲಿ ಭಾಗವಹಿಸುತ್ತಿವೆ. ಸಿಸಿಎಲ್‌ ಸೀಸನ್‌ 10ನಲ್ಲಿ ಬೇರೆ ಬೇರೆ ಚಿತ್ರರಂಗಗಳ ಇನ್ನೂರಕ್ಕೂ ಅಧಿಕ ಜನಪ್ರಿಯ ತಾರೆಗಳು, ಗಣ್ಯರು ಜೊತೆಯಾಗಲಿದ್ದಾರೆ.

ಯಾವ ತಂಡಕ್ಕೆ ಯಾರು ನಾಯಕರು?:

ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ಮುಂಬೈ ಹೀರೋಸ್ ತಂಡಕ್ಕೆ ಸಲ್ಮಾನ್‌ ಖಾನ್‌ ಬ್ರಾಂಡ್ ಅಂಬಾಸಿಡರ್‍ ಆಗಿದ್ದಾರೆ. ರಿತೇಶ್‌ ದೇಶಮುಖ್ ಈ ತಂಡದ ನಾಯಕ. ಸೋಹೈಲ್ ಖಾನ್, ಮುಂಬೈ ಹೀರೊಸ್ ತಂಡದ ಮಾಲೀಕರಾಗಿದ್ದಾರೆ. ‘ತೆಲುಗು ವಾರಿಯರ್ಸ್‌’ ತಂಡಕ್ಕೆ ವೆಂಕಟೇಶ್‌ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅಖಿಲ್ ಅಕ್ಕಿನೇನಿ ‘ತೆಲುಗು ವಾರಿಯರ್ಸ್‌’ ತಂಡದ ನಾಯಕ. ‘ಕರ್ನಾಟಕ ಬುಲ್ಡೋಜರ್ಸ್‌’ ತಂಡಕ್ಕೆ ಕಿಚ್ಚ ಸುದೀಪ್‌ ನಾಯಕನಾಗಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಅನ್ನು ಈಗಷ್ಟೇ ಮುಗಿಸಿರುವ ಸುದೀಪ್‌, ಮತ್ತೊಮ್ಮೆ ಸಿಸಿಎಲ್‌ 10 ಮೂಲಕ ಜಿಯೊಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್‌ಲಾಲ್‌ ಸಹಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್‌’ ತಂಡಕ್ಕೆ ಇಂದ್ರಜಿತ್ ನಾಯಕರಾಗಿದ್ದಾರೆ. ‘ಭೋಜಪುರಿ ದಬಾಂಗ್ಸ್‌’ ತಂಡಕ್ಕೆ ಮನೋಜ್‌ ತಿವಾರಿ ನಾಯಕರಾಗಿದ್ದಾರೆ. ‘ಪಂಜಾಬ್‌ ದೆ ಶೇರ್’ ತಂಡಕ್ಕೆ ಸೋನು ಸೂದ್‌ ನಾಯಕರಾಗಿದ್ದಾರೆ. ಬೋನಿ ಕಪೂರ್ ಮಾಲೀಕರಾಗಿರುವ ‘ಬೆಂಗಾಲ್ ಟೈಗರ್ಸ್‌’ ತಂಡಕ್ಕೆ ಜಿಸ್ಸು ಸೆನ್‌ಗುಪ್ತ ನಾಯಕರಾಗಿದ್ದಾರೆ.

ಇದನ್ನೂ ಓದಿ : Radhika Pandit: ʻಪ್ರೇಮಿಗಳ ಮಾಸಕ್ಕೆ ಹಲೋʼ ಎಂದು ಫೋಟೊಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್‌!

ಸಿಸಿಎಲ್‌ ಜೊತೆಗಿನ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯಿಸಿರುವ ಜಿಯೊಸಿನಿಮಾದ ಬ್ಯುಸಿನೆಸ್‌ ಹೆಡ್‌ ಫರ್ಜಾದ್ ಪಾಲಿಯಾ, ‘ಜಿಯೊಸಿನಿಮಾ ವೇದಿಕೆಗೆ ಎಲ್ಲೆಡೆಯಿಂದ ಅದ್ಭುತವಾದ ಮೆಚ್ಚುಗೆ ದೊರಕುತ್ತಿದ್ದು, ಕ್ರಿಡೆ ಮತ್ತು ಮನರಂಜನೆಗೆ ಬೇರೆಲ್ಲೂ ಸಿಗದ ಅದ್ಭುತ ಪ್ರತಿಕ್ರಿಯೆ ಜಿಯೊಸಿನಿಮಾಗೆ ದೊರಕುತ್ತಿದೆ. ನಮಗೆ ಸಿಗುತ್ತಿರುವ ಅಪ್ರತಿಮವಾದ ವ್ಯೂವರ್‍ಷಿಪ್‌ ಅದಕ್ಕೆ ಪುರಾವೆಯಾಗಿದೆ. ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಎಂಬುದು ಕ್ರಿಡೆ ಮತ್ತು ಮನರಂಜನೆ ಎರಡೂ ಜಗತ್ತುಗಳನ್ನು ಒಂದೆಡೆ ಸೇರಿಸುತ್ತಿದ್ದು, ಇಂಡಿಯಾವನ್ನು ರಂಜಿಸುವ ಉದ್ದೆಶದಿಂದ ಸಿಸಿಎಲ್‌ ಜೊತೆಗೆ ಕೈಜೋಡಿಸುತ್ತಿರುವುದು ನಮಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ’ ಎಂದು ಹೇಳಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ (ಸಿಸಿಎಲ್) ಸಂಸ್ಥಾಪಕರಾದ ವಿಷ್ಣು ಇಂದುರಿ ಕೂಡ ಈ ಸಹಭಾಗಿತ್ವದ ಬಗ್ಗೆ ಉತ್ಸಾಹದ ಮಾತುಗಳಾಡಿದ್ದಾರೆ. ‘ಸೆಲೆಬ್ರಿಟಿ ಕ್ರಿಕೆಟ್‌ ಲೀಗ್, ಸಂಸ್ಕೃತಿಕ ಹೆಗ್ಗುರುತಾಗಿ ಹೊರಹೊಮ್ಮುತ್ತಿದೆ. ಇದರ ಹತ್ತನೇ ಸೀಸನ್‌ ಅನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಯೊಸಿನಿಮಾ ಜೊತೆಗೆ ಕೈಜೋಡಿಸಿರುವುದು ನಿಜಕ್ಕೂ ನಮಗೆ ಸಂತೋಷದ ಸಂಗತಿ. ಕ್ರೀಡೆ ಮತ್ತು ಮನರಂಜನೆಯ ಈ ಸಂಯೋಜನೆಯ ಸಿಸಿಎಲ್‌ ಮೂಲಕ ದೇಶದಾದ್ಯಂತ ಅಭಿಮಾನಿಗಳ ಮನಸೂರೆಗೊಳ್ಳಲು ನಾವು ಕಾಯುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಕ್ರೀಡೆ ಮತ್ತು ಮನರಂಜನೆಯ ಅಪರೂಪದ ಸಂಯೋಜನೆಯಾಗಿರುವ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ (ಸಿಸಿಎಲ್) 10ನೇ ಸೀಸನ್‌ ಅನ್ನು ಫೆಬ್ರುವರಿ 23ರಿಂದ ಜಿಯೊಸಿನಿಮಾದಲ್ಲಿ ವೀಕ್ಷಿಸಿ.

Exit mobile version