ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಇತರ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು (ಆ.೨) ನಡೆಸಿದ ಇಡಿ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.
ಪ್ರಕರಣದ ತನಿಖೆ ನಡೆಸಿದ್ದ ಇ.ಡಿ ನ್ಯಾಯಾಲಯಕ್ಕೆ ಜಾರ್ಜ್‌ಶೀಟ್ ಸಲ್ಲಿಸಿತ್ತು. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್ ತಮ್ಮ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿಗಣಿಸಲು ಮನವಿ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿಯ ಜಾರಿ ನಿರ್ದೇಶನಾಲಯ (ಇಡಿ) ವಿಶೇಷ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ನಿಗದಿಯಂತೆಯೇ ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ತೀರ್ಪು ಪ್ರಕಟಿಸಿದೆ. ಒಟ್ಟು ಮೂರು ಷರತ್ತುಗಳನ್ನು ವಿಧಿಸಿ ಡಿಕೆಶಿಗೆ ಜಾಮೀನು ನೀಡಲಾಗಿದೆ. ದೇಶ ಬಿಟ್ಟು ಹೊರಗೆ ಹೋಗುವಂತಿಲ್ಲ, ಸಾಕ್ಷ್ಯ ನಾಶಪಡಿಸುವಂತಿಲ್ಲ ಎಂಬ ಷರತ್ತು ಪ್ರಮುಖವಾಗಿವೆ. ಜತೆಗೆ ಒಂದು ಲಕ್ಷ ರೂ.ಗಳ ಬಾಂಡ್ ಅನ್ನು ಖಾತರಿಯಾಗಿ ನೀಡಬೇಕು ಎಂದು ಸೂಚಿಸಲಾಗಿದೆ.
ವಿಚಾರಣೆ ವೇಳೆ ಜಾಮೀನು ನೀಡದಂತೆ ಇಡಿ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪ್ರತಿವಾದ ಮಂಡಿಸಿದ ಡಿ .ಕೆ. ಶಿವಕುಮಾರ್ ಪರ ವಕೀಲರು, ಹೈಕೋರ್ಟ್ ನೀಡಿದ ಜಾಮೀನಿನ ಆಧಾರದ ಮೇಲೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಏನಿದು ಪ್ರಕರಣ?
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ನವ ದೆಹಲಿಯಲ್ಲಿ ಬಂಧಿಸಿ ತಿಹಾರ್ ಜೈಲಿಗೆ ಕಳಿಸಿತ್ತು. ತನಿಖೆ ಪೂರ್ಣಗೊಳಿಸಿರುವ ಇ.ಡಿ ಜೂನ್ ಕೊನೆಯ ವಾರದಲ್ಲಿ ದೋಷಾರೋಪ ಪಟ್ಟಿಯನ್ನು ದೆಹಲಿಯಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ದೆಹಲಿಯ ಸಫ್ಧರ್‌ಜಂಗ್ ಅಪಾರ್ಟ್‌ಮೆಂಟ್‌ನಲಿ ಸಿಕ್ಕ 6.61 ಕೋಟಿ ರೂ. ಡಿ.ಕೆ.ಶಿವಕುಮಾರ್ ಅವರದ್ದೇ ಎಂದು ವಿಚಾರಣೆ ವೇಳೆ ಆರೋಪಿ ಆಂಜನೇಯ ಬಾಯಿ ಬಿಟ್ಟಿದ್ದರು. ಡಿ.ಕೆ. ಶಿವಕುಮಾರ್ ಅವರ ಅಕ್ರಮ ಹಣದ ವ್ಯವಹಾರವನ್ನು ರಾಜೇಂದ್ರ ಹಾಗೂ ಆಂಜನೇಯ ನೋಡಿಕೊಳ್ಳುತ್ತಿದ್ದರು. ಸುರೇಶ್ ಶರ್ಮಾ ಅವರ ಫ್ಲಾಟ್ ಅನ್ನು ಡಿ.ಕೆ.ಶಿವಕುಮಾರ್ ಹಾಗೂ ಸುನಿಲ್ ಶರ್ಮಾ ಹಾಗೂ ಡಿಕೆಶಿ ಅಕ್ರಮ ಹಣ ಸಂಗ್ರಹಣೆ ಬಳಸುತ್ತಿದ್ದರು.
ಡಿಕೆಶಿ ಸೂಚನೆ ಮೇರೆಗೆ 1 ಕೋಟಿ ರೂ., 2 ಕೋಟಿ ರೂ., 1.5 ಕೋಟಿ ರೂ. ಹೀಗೆ ಹಲವು ಬಾರಿ ಸಾಗಾಟ ಮಾಡಲಾಗಿದೆ. ಏನೇ ಸಮಸ್ಯೆ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಆಂಜನೇಯಗೆ ಹೇಳಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ಜಾಗ ಕೊಡುವ ಭರವಸೆ ನೀಡಿದ್ದಾರೆ ಎಂಬ ಮಹತ್ವದ ಅಂಶಗಳು ಇ.ಡಿ. ಚಾರ್ಜ್‌ಶೀಟ್‌ನಲ್ಲಿವೆ. (ಚಾರ್ಜ್‌ಶೀಟ್‌ನ ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)
ಆರೋಪ ಪಟ್ಟಿ ಸಲ್ಲಿಕೆ ನಂತರ ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ನೀಡಿತ್ತು. ಕೆಪಿಸಿಸಿ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ರಾಜ್ಯ ವಿಧಾನಸಭೆ ಚುನಾವಣೆ ಕುರಿತು ಚರ್ಚೆ ನಡೆಸಲು ಮೂರು ದಿನದಿಂದ ನವ ದೆಹಲಿಯಲ್ಲಿ ಉಳಿದುಕೊಂಡಿದ್ದ ಡಿ.ಕೆ. ಶಿವಕುಮಾರ್ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಜುಲೈ ೩೦ಕ್ಕೆ ವಿಚಾರಣೆಯನ್ನು ಮುಂದೂಡಲಾಗಿತ್ತು. ಅಂದು ವಿಚಾರಣೆ ನಡೆದಿದ್ದು, ತೀರ್ಪನ್ನು ಕಾಯ್ದಿರಿಸಲಾಗಿತ್ತು.
ಇದನ್ನೂ ಓದಿ| ED Case | ಇಂದು ಇಡಿ ವಿಶೇಷ ನ್ಯಾಯಾಲಯದಲ್ಲಿ ಡಿಕೆಶಿ ವಿಚಾರಣೆ