ವಿಧಾನಪರಿಷತ್: ದಿನಕ್ಕೆ 12ಗಂಟೆವರೆಗೆ ಕೆಲಸದ ಅವಧಿ ವಿಸ್ತರಣೆ ಮಾಡಲು ಅವಕಾಶವಿರುವ ಕಾರ್ಖಾನೆಗಳ ತಿದ್ದುಪಡಿ ವಿಧೇಯಕ – 2023ಕ್ಕೆ (Labour Law) ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರೇ ವಿರೋಧ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಅಂಗೀಕಾರವಾಗಿ ಪರಿಷತ್‌ಗೆ ಆಗಮಿಸಿದ ವಿಧೇಯಕಕ್ಕೆ ಬಿಜೆಪಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವಿರೋಧ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಸದಸ್ಯನಾಗಿ ನಾನು ಇದನ್ನ ವಿರೋಧಿಸುತ್ತೇನೆ. ಮನುಷ್ಯ ಕೇವಲ ಉತ್ಪಾದನೆ ಮಾಡುವ ಯಂತ್ರ ಅಲ್ಲ. ಈಗಿರುವ 8 ಗಂಟೆ ಕೆಲಸ, 8 ಗಂಟೆ ನಿದ್ದೆ, 8 ಗಂಟೆ ವಿಶ್ರಾಂತಿ ಸರಿ ಇದೆ. ಇದು ಉಳ್ಳವರಿಗೆ ಲಾಭ ಮಾಡಿಕೊಡುವ ಉದ್ದೇಶವಷ್ಟೇ. ಯಾರೋ ಐಫೋನ್ ಮತ್ತಿತ್ಯಾದಿ ಎಲೆಕ್ಟ್ರಾನಿಕ್ ಉತ್ಪಾದನೆ ಅವರಿಗೆ ಮಾತ್ರ ಲಾಭ ಮಾಡಿ ಕೊಡುವ ಉದ್ದೇಶ ಇದೆ.
ಉದ್ಯೋಗದ ಅವಕಾಶ ಕೂಡ ಕಡಿಮೆ ಆಗುವ ಸಾಧ್ಯತೆ ಇದೆ. ಹೀಗಾಗಿ ಯಾವ ಕ್ಷೇತ್ರಕ್ಕೆ ಇದು ಅಗತ್ಯವಿದೆಯೋ ಆಯಾ ಕ್ಷೇತ್ರಕ್ಕೆ ಮಾತ್ರ ಮಾಡಿ. ಅದು ಬಿಟ್ಟು ಎಲ್ಲಾ ಉತ್ಪಾದನಾ ಕ್ಷೇತ್ರಕ್ಕೆ ಬೇಡ. ಇದು ಗುಲಾಮಗಿರಿ ರೀತಿ ದುಡಿಸಿಕೊಳ್ಳುವ ಕೆಲಸ ಆಗತ್ತೆ. ಇದು ಕಾರ್ಖಾನೆಗಳ ಮಾಲೀಕರ ಒತ್ತಡಕ್ಕೆ ಮಾಡ್ತಿರುವ ಮಸೂದೆ. ಕಾರ್ಮಿಕ ಮಂತ್ರಿ ಇದನ್ನ ಯಾಕೆ ತೆಗೆದುಕೊಂಡು ಬಂದ್ರೋ ಗೊತ್ತಿಲ್ಲ. ಅವರು ಮೊದಲು ಡ್ರೈವರ್ ಆಗಿದ್ದವರು. ನೀವು 12 ಗಂಟೆ ಡ್ರೈವಿಂಗ್ ಮಾಡಿದ್ರೆ ಆಕ್ಸಿಡೆಂಟ್ ಆಗಲ್ವೇ ಎಂದು ಅವರನ್ನು ಕೇಳುತ್ತಿದ್ದೆ.
ನಾಳೆ 12 ಗಂಟೆ ಕೆಲಸ ಮಾಡಿ ದೈಹಿಕವಾಗಿ ಕುಸಿದು ಏನಾದರೂ ಅನಾಹುತ ಮಾಡಿಕೊಂಡರೆ ಹೊಣೆಯಾರು? ಮನುಷ್ಯನನ್ನ ಯಂತ್ರದ ರೀತಿ ನೋಡಬಾರದು. ನಾವುಗಳೇ ಸದನದಲ್ಲಿ ಎಂಟು ಗಂಟೆ ಕೂರಲು ಕಠಿಣ ಅಂತ ಒಪ್ಪಿಕೊಳ್ಳುವ ನಾವು. 12 ಗಂಟೆ ಕೆಲಸ ಮಾಡುವ ಕಾರ್ಮಿಕನ ಪರಿಸ್ಥಿತಿ ಏನು ಅಂತ ಯೋಚನೆ ಮಾಡಬೇಕು. ಇದು ಯಾವ ಕಾರ್ಮಿಕ ಸಂಘಗಳ ಜೊತೆ ಸಭೆ ಮಾಡಿಲ್ಲ. ಇದರ ಬಗ್ಗೆ ಕೂಲಂಕಷ ಅಧ್ಯಯನ ಮಾಡಬೇಕು. ಇಲ್ಲದಿದ್ದರೆ ಇದನ್ನ ವಿಧೇಯಕ ಖಡಾಖಂಡಿತವಾಗಿ ವಿರೋಧಿಸಬೇಕಾಗುತ್ತದೆ.
ಈ ಕಾಯ್ದೆ ಜಾರಿಗೆ ತರುವ ಮೊದಲು ಕಾರ್ಮಿಕ ಸಂಘಗಳ ಜೊತೆ ಚರ್ಚೆ ಮಾಡಿದ್ದೀರಾ…? ತಜ್ಞರ ಜೊತೆ ಚರ್ಚೆ ಮಾಡಿದ್ದೀರಾ…? ಕಾರ್ಖಾನೆಯ ಮಾಲೀಕರು 12 ಗಂಟೆ ವರೆಗೂ ಮಾಡಲೇಬೇಕು ಎಂದ್ರೆ ಅದನ್ನ ವಿರೋಧಿಸಲು ಆಗುತ್ತಾ…? ವಿರೋಧಿಸಿದ್ರೆ ಕೆಲಸದಿಂದ ತೆಗೆಯುವ ಎಚ್ಚರಿಕೆಯನ್ನ ನೀಡಲ್ವಾ? ರೇಪ್ ಮಾಡ್ತೀನಿ ಎಂದ್ರೆ ಮಾಡಿಸಿಕೊಳ್ಳಲು ಒಪ್ಪಿಗೆ ನೀಡಿದಂತಾಗುತ್ತೆ. ಈ ರೀತಿಯ ಕಾಯ್ದೆ ಸರಿಯಲ್ಲ, ಈ ಬಗ್ಗೆ ಸಾಕಷ್ಟು ಚರ್ಚೆ ಆಗಬೇಕು. ಇದನ್ನ ವಾಪಸ್ಸು ಪಡೆಯಬೇಕು ಎಂದರು.
ಮತ್ತೊಬ್ಬ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, 12 ಗಂಟೆ ಕೆಲಸ ಕೆಲಸ ಕ್ಷಮತೆ ಕುಗ್ಗಿಸುತ್ತದೆ. ಇದು ಕಾರ್ಮಿಕರ ವಿರೋಧಿ ವಿಧೇಯಕ. ಮಹಿಳೆಯರಿಗೆ ರಾತ್ರಿ ಶಿಫ್ಟ್ ಮಾಡಿ ಅನ್ನೋದು ಹೇಗೆ? ಅವರ ರಕ್ಷಣೆ ಹೇಗೆ? ಈ ಬಿಲ್ ವಾಪಸ್ ಪಡೆಯುವಂತೆ ತೇಜಸ್ವಿನಿಗೌಡ ಒತ್ತಾಯ ಮಾಡುತ್ತೇನೆ ಎಂದರು.
ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, 12 ಗಂಟೆ ಕಡ್ಡಾಯ ಅಲ್ಲ. ಮಾಲೀಕ-ಕೆಲಸಗಾರ ಒಪ್ಪಿ ಕೆಲಸ ಮಾಡಬೇಕು. ಯಾರಾದ್ರು ಕೆಲಸ ಮಾಡ್ತೀನಿ ಅಂದ್ರೆ ಮಾಡಬಹುದು. ವಾರಕ್ಕೆ 48 ಗಂಟೆ ನಿಯಮ ಬದಲಾವಣೆ ಇಲ್ಲ. ಈ ನಿಯಮದಲ್ಲಿ 12 ಗಂಟೆ ಕಡ್ಡಾಯ ಮಾಡಿಲ್ಲ. ಅಗತ್ಯ ಸೌಕರ್ಯಗಳು ಕೊಟ್ಟರೆ ಮಾತ್ರ ಮಹಿಳೆಯರು ಕೆಲಸ ಮಾಡಬಹುದು ಎಂದರು.
ಸಚಿವ ಅಶ್ವತ್ಥನಾರಾಯಣ ಮಾತನಾಡಿ, ವಾರಕ್ಕೆ 48 ಗಂಟೆ ನಿಯಮ ಬದಲಾವಣೆ ಇಲ್ಲ. ಕಾರ್ಮಿಕರು ಒಪ್ಪಿದ್ರೆ ಮಾತ್ರ ಕೆಲಸ ಮಾಡಬಹುದು. ಇದು ಪ್ರಗತಿ ಪರ ಬಿಲ್ ಎಂದರು.
ಜೆಡಿಎಸ್‌ನ ಮರಿತಿಬ್ಬೇಗೌಡ ಇದನ್ನು ವಿರೋಧಿಸಿ, ಇದು ಕಾರ್ಮಿಕರ ಮರಣ ಶಾಸನ ಬಿಲ್. ಈ ಬಿಲ್ ವಾಪಸ್ ಪಡೆಯಬೇಕು ಎಂದರು. ಕಾಂಗ್ರೆಸ್-ಜೆಡಿಎಸ್ ಸದಸ್ಯರಿಂದಲೂ ಬಿಲ್ ವಿರೋಧಿಸಿ ಸಭಾ ತ್ಯಾಗ ನಡೆಯಿತು. ಬಿಜೆಪಿ ಸದಸು ಆಯನೂರು ಮಂಜುನಾಥ್ ಸಹ ಸಭಾತ್ಯಾಗ ನಡೆಸಿದರು.