ಬೆಂಗಳೂರು: ಕಳೆದ 13 ವರ್ಷಗಳ ಹಿಂದಿನ ಕಾಮಗಾರಿಯೊಂದಕ್ಕೆ ಸಂಬಂಧಿಸಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಗುತ್ತಿಗೆದಾರರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ( High Court) ತಿರಸ್ಕರಿಸಿದೆ.
2009-11ರಲ್ಲಿ ನಡೆದ ಕಾಮಗಾರಿಗೆ ಸಂಬಂಧಿಸಿ 2021ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಗುತ್ತಿಗೆದಾರ ಕೆ.ರಾಮಚಂದ್ರ ರಾಜು ಎಂಬುವರು ಸಲ್ಲಿಸಿದ ಅರ್ಜಿಯ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ 2009-2011ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿರ್ಮಾಣವನ್ನು ಅವರು ಪೂರ್ಣಗೊಳಿಸಿದ್ದರು. 2009ರಲ್ಲಿ ಈ ಬಗ್ಗೆ ಕರ್ನಾಟಕ ರೆಸಿಡೆನ್ಷಿಯಲ್ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್ ಸೊಸೈಟಿ (KREIS) ವತಿಯಿಂದ ಕರೆಯಲಾಗಿದ್ದ ಟೆಂಡರ್‌ನಲ್ಲಿ ರಾಜು ಅವರು ಯಶಸ್ವಿ ಬಿಡ್ಡರ್ ಆಗಿದ್ದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ವಸತಿ ಶಾಲೆ ನಿರ್ಮಾಣದ ಯೋಜನೆ ಇದಾಗಿತ್ತು. ರಾಜು ಅವರ ಪ್ರಕಾರ 2011ರಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರು.
ಕೆಆರ್‌ಇಐಎಸ್, ಕಾಮಗಾರಿಯ ಮೌಲ್ಯ ಮಾಪನಕ್ಕೆ ಸಂಬಂಧಿಸಿ ಎಲ್ಲ ಯಶಸ್ವಿ ಬಿಡ್ಡರ್‌ಗಳನ್ನು ಸಂಪರ್ಕಿಸಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಅರ್ಜಿದಾರ ರಾಮಚಂದ್ರ ರಾಜು ಅವರು ಭಾಗವಹಿಸಿರಲಿಲ್ಲ. ಬದಲಿಗೆ 2021ರಲ್ಲಿ ಕೆಆರ್‌ಇಐಎಸ್‌ಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದರು. ಕೆಆರ್‌ಇಐಎಸ್‌ನಿಂದ 1.5 ಕೋಟಿ ರೂ. ಹಣ ಸಿಗಬೇಕಿದ್ದು, ಇದಕ್ಕಾಗಿ ಹಲವು ಸಲ ಯತ್ನಿಸಿದ್ದರೂ ಪ್ರಯೋಜನ ಆಗಿಲ್ಲ ಎಂದು ರಾಜು ಆರೋಪಿಸಿದ್ದರು.
ಮತ್ತೊಂದು ಕಡೆ ಕೆಆರ್‌ಇಐಎಸ್ ಪ್ರಕಾರ, 2011ರ ಮೇ 27ರಂದು ರಾಮಚಂದ್ರ ರಾಜು ಅವರಿಗೆ ಮಾಡಿರುವ ಕೆಲಸ ಪೂರ್ಣಗೊಳಿಸಿರುವ ಬಗ್ಗೆ ಆಧಾರ ತೋರಿಸಲು ಸೂಚಿಸಿದ್ದರೂ, ಕೊಟ್ಟಿರಲಿಲ್ಲ.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಇದೇ ಮೊದಲ ಬಾರಿಗೆ 2009ರಲ್ಲಿ ನಡೆದ ಕಾಮಗಾರಿಗೆ 2021ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದೂ ವಿವಾದಾತ್ಮಕವಾಗಿದೆ. ಈ ರೀತಿಯ ವರ್ಷಾನುಗಟ್ಟಲೆ ವಿಳಂಬದ ಬಳಿಕ ದೂರು ನೀಡಿರುವುದು ಸಮಂಜಸವಲ್ಲ ಎಂದು ಹೈಕೋರ್ಟ್ ಪ್ರತಿಪಾದಿಸಿದೆ.