ಬೆಂಗಳೂರು: ವಿಸ್ತಾರ ಡಿಜಿಟಲ್ ನ್ಯೂಸ್ ಈಗಾಗಲೇ ಕ್ಷಿಪ್ರ ಅವಧಿಯಲ್ಲಿ ತನ್ನ ಗುಣಮಟ್ಟದಿಂದಾಗಿ ಜನಮನ್ನಣೆ ಗಳಿಸಿದೆ. ಇದೇ ರೀತಿ ವಿಸ್ತಾರ ನ್ಯೂಸ್ ಚಾನೆಲ್ ಕೂಡ ಕರ್ನಾಟಕದ ಗಡಿ ದಾಟಿ ಜನಪ್ರಿಯವಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Vistara mews launch) ಅವರು ಶುಭಾಶಯ ಕೋರಿದರು.
ಕನ್ನಡ ಮಾಧ್ಯಮ ಲೋಕದ ಬಹು ನಿರೀಕ್ಷಿತ ವಿಸ್ತಾರ ನ್ಯೂಸ್ ಚಾನೆಲ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮಾಧ್ಯಮ ಮತ್ತು ಜನರ ಮನದಾಳಕ್ಕೂ ಅವಿನಾಭಾವ ಸಂಬಂಧ ಇದೆ. ಸಿನಿಮಾ ನೋಡುವಾಗ ಜನರ ಮನದಾಳದ ಡೈಲಾಗ್ ಅನ್ನು ಹೀರೊ ಹೇಳಿದಾಗ ಜನ ಚಪ್ಪಾಳೆ ತಟ್ಟಿ ಮೆಚ್ಚುತ್ತಾರೆ. ಅದೇ ರೀತಿ ಮಾಧ್ಯಮ ಜನರ ದನಿಯಾಗಬೇಕು. ಇಂದು ತಂತ್ರಜ್ಞಾನ ಇಡೀ ಬದುಕನ್ನು ಆವರಿಸಿದೆ. ನಮ್ಮ ಚಿಂತನಾಶಕ್ತಿ ಕಡಿಮೆಯಾಗುತ್ತಿದೆ. ನಾವು ಒಂದು ಬಟನ್ ಒತ್ತಿದರೆ ಎಲ್ಲವೂ ಸಿಗುವಂಥ ತಂತ್ರಜ್ಞಾನ ಬೆಳೆದಿದೆ. ಆದರೆ ಇಂಥ ಸಂದರ್ಭದಲ್ಲಿ ಅಂತಃಕರಣವನ್ನು, ಮಾನವೀಯತೆ, ಪ್ರೀತಿ, ವಿಶ್ವಾಸವನ್ನು ಯಾರೂ ಮರೆಯಬಾರದು. ಅದನ್ನು ಕಂಪ್ಯೂಟರ್ ಹೇಳಿಕೊಡುವುದಿಲ್ಲ. ಯಾವುದೇ ರಾಜಕಾರಣಿಗೆ ತಲೆ ತಣ್ಣಗಿರಬೇಕು, ಹೃದಯ ಬೆಚ್ಚಗಿರಬೇಕು ಎಂದು ಹಿರಿಯರು ಹೇಳುತ್ತಾರೆ. ಯಾರು ಏನೇ ಮಾತನಾಡಿದರೂ ತಲೆ ಕೆಡಿಸಿಕೊಳ್ಳಬಾರದು. ನಮ್ಮ ಗುರಿ, ಸಂಕಲ್ಪ ಸರಿಯಾಗಿದ್ದಾಗ ಎಲ್ಲವೂ ಸಾಧ್ಯವಾಗುತ್ತದೆ. ನಮ್ಮ ಕರ್ತವ್ಯಪರತೆ ನಮ್ಮ ಕೈಯಲ್ಲಿದೆ. ಯಾವುದೂ ಶಾಶ್ವತವಲ್ಲ, ಪ್ರೀತಿ ಮತ್ತು ವಿಶ್ವಾಸ ದೊಡ್ಡದು. ಜನರಿಗೆ ಪ್ರಜಾಪ್ರಭುತ್ವದ ಮೇಲೆ ಅಪಾರ ವಿಶ್ವಾಸ ಇದೆ. ಅದನ್ನು ಸಂರಕ್ಷಿಸಲು ಮಾಧ್ಯಮಗಳು, ರಾಜಕಾರಣಿಗಳು ಕಾರ್ಯಪ್ರವೃತ್ತವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜನರ ಮನದಾಳದ ಕನ್ನಡಿ ಮಾಧ್ಯಮ:
ಮಾಧ್ಯಮ ಮತ್ತು ಸಾರ್ವಜನಿಕ ವಲಯದ್ದು ಅವಿನಾಭಾವ ಸಂಬಂಧ. ಓದುಗರಿಲ್ಲದೆ ಪತ್ರಿಕೆಗಳು ಇಲ್ಲ, ನೋಡುಗರಿಲ್ಲದೆ ಚಾನೆಲ್‌ಗಳಿಲ್ಲ. ಹೀಗೆ ಇವೆರೆಡರ ಸಂಬಂಧವನ್ನು ಚೆನ್ನಾಗಿ ಅರಿತವರು ಯಶಸ್ವಿಯಾಗುತ್ತಾರೆ. ಜನರ ಮನದಾಳದಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಹರಿಪ್ರಕಾಶ್ ಕೋಣೆಮನೆಯವರ ಅಪಾರ ಅನುಭವ, ಕ್ರಿಯಾಶೀಲತೆ, ಜನಮಾನಸದ ಜತೆ ಗುರುತಿಸಿಕೊಂಡಿರುವ ರೀತಿ, ಸ್ಥಿತಪ್ರಜ್ಞತೆಯಿಂದ, ಅವರ ನೇತೃತ್ವದಲ್ಲಿ ವಿಸ್ತಾರ ಸುವಿಸ್ತಾರವಾಗಿ ಬೆಳೆಯುವ ವಿಶ್ವಾಸ ಇದೆ ಎಂದು ಶುಭ ಹಾರೈಸಿದರು.
ಮಾಧ್ಯಮ-ರಾಜಕಾರಣಿಗಳ ಸಂಬಂಧ:
ಮಾಧ್ಯಮಗಳು ಮತ್ತು ರಾಜಕಾರಣಿಗಳ ನಂಟನ್ನು ವಿವರಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಎಷ್ಟೇ ಜಗಳವಾಡಿದರೂ, ಭಿನ್ನಾಭಿಪ್ರಾಯವಿದ್ದರೂ, ಮಾಧ್ಯಮಗಳು ಮತ್ತು ರಾಜಕಾರಣಿಗಳ ಪರಸ್ಪರ ನಂಟು ಅವಿನಾಭಾವವಾಗಿರುವಂಥದ್ದು, ಗಂಡ-ಹೆಂಡತಿಯ ಸಂಬಂಧವದು ಎಂದು ಲಘು ಹಾಸ್ಯದ ಚಟಾಕಿಯೊಂದಿಗೆ ಬಣ್ಣಿಸಿದರು.