ಪ್ಯಾರಿಸ್: ಎನ್ಐಎಸ್ ಪಟಿಯಾಲದ ಮಹಿಳೆಯರ ಹಾಸ್ಟೆಲ್ಗೆ ನುಗ್ಗಿದ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವೇಟ್ ಲಿಫ್ಟರ್ ಅಚಿಂತಾ ಶೆವುಲಿ (Achinta Sheuli) ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಪೂರ್ವಸಿದ್ಧತಾ ಶಿಬಿರದಿಂದ ಹೊರಹಾಕಲಾಗಿದೆ. ಶಿಸ್ತು ಉಲ್ಲಂಘನೆ ಗುರುವಾರ ರಾತ್ರಿ ಮಾಡಿದ್ದಾರೆ. ಪುರುಷರ 73 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ 22 ವರ್ಷದ ಅಚಿಂತಾ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದರು. ಅವರು ಅದನ್ನು ವಿಡಿಯೊ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿದ್ದರು.
“ನಿಸ್ಸಂಶಯವಾಗಿ, ಅಂತಹ ಅಶಿಸ್ತನ್ನು ಸಹಿಸಲಾಗುವುದಿಲ್ಲ. ತಕ್ಷಣವೇ ಶಿಬಿರದಿಂದ ಹೊರಹೋಗುವಂತೆ ಅಚಿಂತಾ ಅವರಿಗೆ ಸೂಚಿಸಲಾಗಿತ್ತು’ ಎಂದು ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಲ್ ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಎನ್ಐಎಸ್ ಪಟಿಯಾಲ ಕಾರ್ಯನಿರ್ವಾಹಕ ನಿರ್ದೇಶಕ ವಿನೀತ್ ಕುಮಾರ್ ಅವರಿಗೆ ಘಟನೆಯ ಬಗ್ಗೆ ತಕ್ಷಣ ಮಾಹಿತಿ ನೀಡಲಾಯಿತು. ಘಟನೆಯ ವೀಡಿಯೊ ಪುರಾವೆಗಳು ಇದ್ದ ಕಾರಣ ಸಾಯ್ ತನಿಖಾ ಸಮಿತಿಯನ್ನು ರಚಿಸಲಿಲ್ಲ. “ವೀಡಿಯೊವನ್ನು ಎನ್ಐಎಸ್ ಪಟಿಯಾಲ ವಿನೀತ್ ಕುಮಾರ್ ಮತ್ತು ನವದೆಹಲಿಯ ಸಾಯ್ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ. ಅಚಿಂತಾ ಅವರನ್ನು ಶಿಬಿರದಿಂದ ಹೊರಕ್ಕೆ ಹಾಕಲಾಗಿದೆ ಎಂದು ಐಡಬ್ಲ್ಯುಎಲ್ಎಫ್ಗೆ ತಿಳಿಸಲಾಗಿದೆ” ಎಂದು ಸಾಯ್ ಮೂಲಗಳು ತಿಳಿಸಿವೆ.
2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಶೆವುಲಿ ಶುಕ್ರವಾರ ಶಿಬಿರದಿಂದ ಹೊರನಡೆಯುವಂತಾಗಿದೆ. ಪಟಿಯಾಲದಲ್ಲಿರುವ ಸಾಯ್ ತರಬೇತಿ ಸೌಲಭ್ಯವು ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಹಾಸ್ಟೆಲ್ ಗಳನ್ನು ಹೊಂದಿದೆ. ಪ್ರಸ್ತುತ, ಮಹಿಳಾ ಬಾಕ್ಸರ್ಗಳು ಮತ್ತು ಕುಸ್ತಿಪಟುಗಳು ಎನ್ಐಎಸ್ನಲ್ಲಿ ಬೀಡುಬಿಟ್ಟಿದ್ದಾರೆ.
ಇದನ್ನೂ ಓದಿ : IPL 2024 : ಐಪಿಎಲ್ ವಿದೇಶಕ್ಕೆ ಹೋಗುವುದಿಲ್ಲ; ಜಯ್ ಶಾ ಸ್ಪಷ್ಟನೆ ಕೊಡಲು ಕಾರಣವೇನು?
ಶಿಸ್ತು ಉಲ್ಲಂಘನೆಗಾಗಿ ಕ್ರೀಡಾಪಟು ವಿರುದ್ಧ ಐಡಬ್ಲ್ಯುಎಲ್ಎಫ್ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಕಾಮನ್ವೆಲ್ತ್ ಗೇಮ್ಸ್ ಮತ್ತು ಯೂತ್ ಒಲಿಂಪಿಕ್ಸ್ ಚಾಂಪಿಯನ್ ಜೆರೆಮಿ ಲಾಲ್ರಿನ್ನುಂಗಾ ಅವರನ್ನೂ ಅಶಿಸ್ತಿನ ಆಧಾರದ ಮೇಲೆ ರಾಷ್ಟ್ರೀಯ ಶಿಬಿರದಿಂದ ಹೊರಹಾಕಲಾಯಿತು.
ಒಲಿಂಪಿಕ್ಸ್ ಅವಕಾಶ ಮಿಸ್
ಶೆಲಿ ಹೊರಹಾಕಿದ ನಂತರ, ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಅವಕಾಶಗಳು ಸಹ ಕೊನೆಗೊಂಡಿವೆ. ಏಕೆಂದರೆ ಅವರು ಈ ತಿಂಗಳು ಥೈಲ್ಯಾಂಡ್ನ ಫುಕೆಟ್ನಲ್ಲಿ ನಡೆಯಲಿರುವ ಐಡಬ್ಲ್ಯುಎಫ್ ವಿಶ್ವಕಪ್ಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಇದು ಪ್ಯಾರಿಸ್ ಕ್ರೀಡಾಕೂಟದ ಅರ್ಹತೆಗೆ ಕಡ್ಡಾಯ ಕೂಟವಾಗಿದೆ. ಶೆಲಿ ಪ್ರಸ್ತುತ ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ 27 ನೇ ಸ್ಥಾನದಲ್ಲಿದ್ದಾರೆ ಮತ್ತು ಕಾಂಟಿನೆಂಟಲ್ ಕೋಟಾ ಮೂಲಕ ಸ್ಥಾನ ಪಡೆಯುವ ಅವಕಾಶವನ್ನು ಅವರು ಹೊಂದಿದ್ದರು.
“ಘಟನೆ ಅವರ ಪಾಲಿಗೆ ಅತ್ಯಂತ ಹೀನಾಯ. ಅವರು ಗಾಯದ ನಂತರ ಮತ್ತೆ ಹಳಿಗೆ ಮರಳಲು ಪ್ರಾರಂಭಿಸಿದ್ದರು” ಎಂದು ಮೂಲಗಳು ತಿಳಿಸಿವೆ. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು (49 ಕೆಜಿ) ಮತ್ತು ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತೆ ಬಿಂದ್ಯಾರಾಣಿ ದೇವಿ ಮಾತ್ರ ಪ್ಯಾರಿಸ್ ಕ್ರೀಡಾಕೂಟಕ್ಕೆ ಸ್ಪರ್ಧೆಯಲ್ಲಿದ್ದಾರೆ. 2024ರ ಒಲಿಂಪಿಕ್ಸ್ ಅರ್ಹತಾ ನಿಯಮದ ಪ್ರಕಾರ, ಲಿಫ್ಟರ್ 2023ರ ವಿಶ್ವ ಚಾಂಪಿಯನ್ಶಿಪ್ ಮತ್ತು 2024ರ ವಿಶ್ವಕಪ್ನಲ್ಲಿ ಕಡ್ಡಾಯವಾಗಿ ಸ್ಪರ್ಧಿಸಬೇಕು.