Site icon Vistara News

Lok Sabha Election 2024: ನಾಳೆ ರಾಜ್ಯದಲ್ಲಿ 2ನೇ ಹಂತದ ಮತದಾನಕ್ಕೆ ಸಕಲ ಸಿದ್ಧತೆ; 14 ಕ್ಷೇತ್ರಗಳಲ್ಲಿ 227 ಅಭ್ಯರ್ಥಿಗಳ ಸ್ಪರ್ಧೆ

Lok Sabha Election 2024

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ(Lok Sabha Election 2024) ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದ್ದು, ಮೇ 17ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ಕೇಂದ್ರದಲ್ಲಿ ಮತದಾರರ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಮತಗಟ್ಟೆಗಳ ಸುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಭದ್ರತೆ ಏರ್ಪಡಿಸಲಾಗಿದೆ.

ಮತದಾನ ನಡೆಯುವ 14 ಕ್ಷೇತ್ರಗಳು ಯಾವುವು?

ಮೇ 7 ರಂದು ಮಂಗಳವಾರ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 14 ಕ್ಷೇತ್ರಗಳಲ್ಲಿ 28,269 ಮತಗಟ್ಟೆ ಸ್ಥಾಪಿಸಿದ್ದು, ಶಾಂತಿಯುತ ಚುನಾವಣೆ ನಡೆಸಲು ಸುಮಾರು 40 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಘಟಾನುಘಟಿಗಳು ಸ್ಪರ್ಧಿಸಿರುವ‌ 2ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಒಟ್ಟು 2.59 ಕೋಟಿ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

227 ಅಭ್ಯರ್ಥಿಗಳು ಸ್ಪರ್ಧೆ

ಕಾಂಗ್ರೆಸ್, ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೆ, ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ
ಪಕ್ಷಗಳು 23, ಸ್ವತಂತ್ರ ಅಭ್ಯರ್ಥಿಗಳು 117 ಸೇರಿ ಒಟ್ಟು 227 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಇದರಲ್ಲಿ 206
ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಈ ಕ್ಷೇತ್ರಗಳಲ್ಲಿ 2,59,52,958 ಮತದಾರರಿದ್ದು, 1,29,48,978 ಪುರುಷ, 1,29,64,570 ಮಹಿಳಾ ಹಾಗೂ 1,945 ತೃತೀಯ ಲಿಂಗಿ ಮತದಾರರು ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಕಡಿಮೆ 16,41,156 ಮತದಾರರಿದ್ದರೆ, ಅತಿ ಹೆಚ್ಚು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 20,98,202 ಮತದಾರರಿದ್ದಾರೆ.

ಮತಗಟ್ಟೆಗಳಲ್ಲಿ ಮತದಾರರಿಗೆ ಮೂಲಸೌಕರ್ಯ

ತಾಪಮಾನ ಹೆಚ್ಚಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಆಯೋಗ ಮತದಾನದ ದಿನದಂದು ಮತಗಟ್ಟೆಯಲ್ಲಿ ಮತದಾರರಿಗಾಗಿ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ಒಆರ್‌ಎಸ್ ಜ್ಯೂಸ್, ಕುಳಿತುಕೊಳ್ಳಲು ಕಾಯ್ದಿರಿಸಿದ ಕೊಠಡಿಗಳು, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಆಂಬ್ಯುಲೆನ್ಸ್ ವಾಹನಗಳು ಮುಂತಾದ ಹಲವು ಮೂಲ ಸೌಲಭ್ಯಗಳನ್ನು ಒದಗಿಸಿದೆ. ಇನ್ನು ದೃಷ್ಟಿಹೀನ ಮತದಾರರ ಸಹಾಯಕ್ಕಾಗಿ ಬ್ರೈಲ್ ಸೌಲಭ್ಯವುಳ್ಳ ಇವಿಎಂ ಗಳನ್ನು ಮತಗಟ್ಟೆಗಳಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ | ನಾಳೆ ಎರಡನೇ ಹಂತದ ಮತದಾನ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ಮತದಾರರ ಗುರುತಿನ ಚೀಟಿ ಕಡ್ಡಾಯ

ಚುನಾವಣಾ ಆಯೋಗದಿಂದ ಈಗಾಗಲೇ ನೀಡಲಾಗಿರುವ ವೋಟರ್‌ ಸ್ಲಿಪ್‌ ಜತೆಗೆ ಮತದಾರರ ಗುರುತಿನ ಚೀಟಿ,
ಆಧಾರ್‌ಕಾರ್ಡ್, ನರೇಗಾ ಜಾಬ್‌ ಕಾರ್ಡ್, ಬ್ಯಾಂಕ್, ಪೋಸ್ಟ್ ಆಫೀಸ್ ಪಾಸ್‌ಬುಕ್, ಕಾರ್ಮಿಕ ಸಚಿವರು ನೀಡುವ
ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೆಸೆನ್ಸ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಪಿಂಚಣಿಯ ದಾಖಲೆ,
ರಾಜ್ಯಸರ್ಕಾರ, ಸಾರ್ವಜನಿಕ ಸಂಸ್ಥೆಗಳು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ
ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಎಂಪಿ, ಎಂಎಲ್‌ಎ, ಎಂಎಲ್‌ಸಿಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಸಾಮಾಜಿಕ ನ್ಯಾಯ ಸಬಲೀಕರಣ ನೀಡಿರುವ ವಿಶಿಷ್ಟ ಅಂಗವಿಕಲ ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಬಹುದು.

Exit mobile version