Site icon Vistara News

Harsh Vardhan: ಬಿಜೆಪಿ ಟಿಕೆಟ್‌ ನಿರಾಕರಣೆ; ರಾಜಕೀಯವನ್ನೇ ತೊರೆದ ಹರ್ಷವರ್ಧನ್!

Harsh Vardhan

Lok Sabha Election 2024: BJP's Harsh Vardhan quits politics, was left out of Candidates List

ನವದೆಹಲಿ: ಬಿಜೆಪಿ ಹಿರಿಯ ನಾಯಕ, ದೆಹಲಿ ಸಂಸದ ಡಾ. ಹರ್ಷವರ್ಧನ್‌ (Harsh Vardhan) ಅವರು ರಾಜಕೀಯವನ್ನೇ ತೊರೆದಿದ್ದಾರೆ. ಬಿಜೆಪಿಯು ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಡಾ. ಹರ್ಷವರ್ಧನ್‌ ಅವರ ಕ್ಷೇತ್ರವಾದ ದೆಹಲಿ ಚಾಂದಿನಿ ಚೌಕ್‌ ಲೋಕಸಭೆ ಕ್ಷೇತ್ರದಲ್ಲಿ ಪ್ರವೀಣ್‌ ಖಂಡೇಲ್ವಾಲ್‌ (Praveen Khandelwal) ಅವರಿಗೆ ಪಕ್ಷವು ಟಿಕೆಟ್‌ ನೀಡಿದೆ. ಇದರ ಬೆನ್ನಲ್ಲೇ, ಹರ್ಷವರ್ಧನ್‌ ಅವರು ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

“ನಾನು ಕಳೆದ 30 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ಐದು ವಿಧಾನಸಭೆ ಹಾಗೂ ಎರಡು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಹಾಗೆಯೇ, ಪಕ್ಷ ವಹಿಸಿದ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದೆ. ಈಗ ನಾನು ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ. ನಾನು ಮತ್ತೆ ನನ್ನ ಮೂಲ ಉದ್ಯೋಗವಾದ ವೈದ್ಯ ವೃತ್ತಿಗೆ ಮರಳುತ್ತೇನೆ. ದೆಹಲಿ ಆರೋಗ್ಯ ಸಚಿವ ಹಾಗೂ ಕೇಂದ್ರ ಆರೋಗ್ಯ ಸಚಿವನಾಗಿ ನಾನು ನಿರ್ವಹಿಸಿದ ಕೆಲಸವು ತೃಪ್ತಿ ತಂದಿದೆ. ಇದುವರೆಗೆ ನನಗೆ ಅವಕಾಶ ಕೊಟ್ಟ ಬಿಜೆಪಿ ಹಿರಿಯ ನಾಯಕರು, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು” ಎಂದು ಹರ್ಷವರ್ಧನ್‌ ಅವರು ಪೋಸ್ಟ್‌ ಮಾಡಿದ್ದಾರೆ. ಬಿಜೆಪಿಯ ಗೌತಮ್‌ ಗಂಭೀರ್‌ ಹಾಗೂ ಜಯಂತ್‌ ಸಿನ್ಹಾ ಅವರು ಕೂಡ ಈಗಾಗಲೇ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ನ ಗಾಂಧಿನಗರ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಲಖನೌ, ಸ್ಮೃತಿ ಇರಾನಿ ಅವರು ಅಮೇಥಿಯಿಂದ, ಕಿರಣ್‌ ರಿಜಿಜು ಅರುಣಾಚಲ ಪಶ್ಚಿಮ, ಪೋರ್‌ಬಂದರ್‌ನಿಂದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ, ಕೇರಳದ ಪಥಣಂತಿಟ್ಟದಿಂದ ಎ.ಕೆ. ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿ, ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ತಿರುವನಂತಪುರಂನಿಂದ ಟಿಕೆಟ್‌ ನೀಡಲಾಗಿದೆ. ಮಧ್ಯಪ್ರದೇಶದ ವಿದಿಶಾದಿಂದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

ಉತ್ತರ ಪ್ರದೇಶದ ಮಥುರಾದಿಂದ ಹೇಮಾಮಾಲಿನಿ, ಉನ್ನಾವೋದಿಂದ ಸಾಕ್ಷಿ ಮಹಾರಾಜ್‌, ತೆಲಂಗಾಣದ ಕರೀಂ ನಗರದಿಂದ ಬಂಡಿ ಸಂಜೀವ್‌ ಕುಮಾರ್‌, ಸಿಕಂದರಾಬಾದ್‌ ಜಿ. ಕಿಶನ್‌ ರೆಡ್ಡಿ ಅವರಿಗೂ ಬಿಜೆಪಿ ಹೈಕಮಾಂಡ್‌ ಮಣೆ ಹಾಕಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ವಿದಿಶಾದಿಂದ ಟಿಕೆಟ್‌ ನೀಡಲಾಗಿದೆ. ಇನ್ನುಳಿದಂತೆ ದೆಹಲಿ ಉತ್ತರ ಮನೋಜ್‌ ತಿವಾರಿ ಅವರು ಕಣಕ್ಕಿಳಿದಿದ್ದಾರೆ. ಉತ್ತರ ಗೋವಾದಿಂದ ಶ್ರೀಪಾದ್‌ ನಾಯಕ್‌ ಅವರು ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version