Site icon Vistara News

IPL 2024 : ಗುಜರಾತ್​​ ವಿರುದ್ಧ ಲಕ್ನೊಗೆ 33 ರನ್ ಭರ್ಜರಿ ಗೆಲುವು

IPL 2024

ಲಖನೌ: ಮಾರ್ಕಸ್​ ಸ್ಟೊಯ್ನಿಸ್​ (43 ಎಸೆತಕ್ಕೆ 58 ರನ್​) ಅರ್ಧ ಶತಕ ಹಾಗೂ ಬೌಲರ್​ಗಳಾದ ಯಶ್​ ಠಾಕೂರ್​ (3.5 ಓವರ್​, 30 ರನ್​, 5 ವಿಕೆಟ್​​) ಹಾಗೂ ಕೃಣಾಲ್ ಪಾಂಡ್ಯ (4 ಓವರ್​ 11 ರನ್​, 3 ವಿಕೆಟ್​) ಮಾರಕ ಬೌಲಿಂಗ್​ ದಾಳಿಗೆ ನಲುಗಿದ ಗುಜರಾತ್​ ಜೈಂಟ್ಸ್ ತಂಡ ಐಪಿಎಲ್​ 17ನೇ (IPL 2024) ಆವೃತ್ತಿಯ 21ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 33 ರನ್​ಗಳ ಸೋಲಿಗೆ ಒಳಗಾಗಿದೆ. ಇದು ಗುಜರಾತ್​ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಮೂರನೇ ಸೋಲು. ಇದೇ ವೇಳೆ ಕೆ. ಎಲ್​ ರಾಹುಲ್ ನೇತೃತ್ವದ ಲಕ್ನೊ ತಂಡ ಹ್ಯಾಟ್ರಿಕ್ ಜಯವನ್ನು ತನ್ನದಾಗಿಸಿಕೊಂಡಿದೆ.

ಇಲ್ಲಿನ ಭಾರತರತ್ನ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಗುಜರಾತ್ ಬಳಗ 18.5 ಓವರ್​ಗಳಲ್ಲಿ 130 ರನ್​ಗಳಿಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು.

ಸ್ಪರ್ಧಾತ್ಮ ಕ ಗುರಿಯನ್ನು ಬೆನ್ನಟ್ಟಲು ಅರಂಭಿಸಿದ ಗುಜರಾತ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಶುಭ್​ಮನ್ ಗಿಲ್​ 19 ರನ್ ಬಾರಿಸಿದರೆ, ಸಾಯಿ ಸುದರ್ಶನ್ 31 ರನ್ ಬಾರಿಸಿ ಸ್ವಲ್ಪ ಹೊತ್ತು ಕ್ರೀಸ್​ನಲ್ಲಿ ತಳವೂರಿದರು. ಬಳಿಕ ಬಂದ ಕೇನ್ ವಿಲಿಯಮ್ಸನ್​ 1 ರನ್​ಗೆ ಔಟಾದರೆ, ಬಿ. ಆರ್​ ಭರತ್​ 2 ರನ್​ ಬಾರಿಸಿ ನಿರ್ಗಮಿಸಿದರು. ವಿಜಯ್ ಶಂಕರ್ ಇನಿಂಗ್ಸ್ 17 ರನ್​ಗೆ ಮುಕ್ತಾಯಗೊಂಡರೆ ದರ್ಶನ್ ನಾಲ್ಕಂಡೆ 12 ರನ್ ಬಾರಿಸಿದರು. ಕೊನೆಯಲ್ಲಿ ರಾಹುಲ್ ತೆವಟಿಯಾ 30 ರನ್ ಕೊಡುಗೆ ಕೊಟ್ಟರು.

ಇದನ್ನೂ ಓದಿ: IPL 2024 : ಮುಂಬಯಿ – ಡೆಲ್ಲಿ​ ಪಂದ್ಯದಲ್ಲಿ ಸೃಷ್ಟಿಯಾದ ಕೆಲವು ದಾಖಲೆಗಳ ವಿವರ ಇಲ್ಲಿದೆ

ಕೃಣಾಲ್ ಪಾಂಡ್ಯ, ಯಶ್​ ಠಾಕೂರ್​ ಮಾರಕ ಬೌಲಿಂಗ್​ಗೆ ಗುಜರಾತ್ ವಿಕೆಟ್​ಗಳು ಸತತವಾಗಿ ಪತನಗೊಂಡವು.

ಸ್ಟೊಯ್ನಿಸ್ ಅರ್ಧ ಶತಕ

ಕಠಿಣ ಪಿಚ್​​ನಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡವೂ ಕ್ವಿಂಟನ್ ಡಿ ಕಾಕ್ ಅವರನ್ನು 6 ರನ್​ಗಳಿಗೆ ಕಳೆದುಕೊಂಡಿತು. ಅದಾದ ಬಳಿಕ ಬಂದ ದೇವದತ್​ ಪಡಿಕ್ಕಲ್​ ಕೂಡ 7 ರನ್​ಗೆ ವಿಕೆಟ್ ಒಪ್ಪಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕೆ. ಎಲ್​ ರಾಹುಲ್​ (33 ರನ್​) ಹಾಗೂ ಮಾರ್ಕಸ್​ ಸ್ಟೊಯ್ನಿಸ್​ ವಿಕೆಟ್ ಉಳಿಸಿ ಆಡಿದರು. ಸ್ಟೊಯ್ನಿಸ್ 43 ಎಸೆತಕ್ಕೆ 4 ಫೋರ್​ ಹಾಗೂ 2 ಸಿಕ್ಸರ್ ಸಮೇತ 58 ರನ್ ಬಾರಿಸಿ ಆಧಾರವಾದರು. ಕೊನೆಯಲ್ಲಿ ನಿಕೋಲಸ್ ಪೂರನ್​ 32 ರನ್ ಬಾರಿಸಿದರೆ ಆಯುಷ್ ಬದೋನಿ 11 ಎಸೆತಕ್ಕೆ 20 ರನ್ ಮಾಡಿದರು. ಜಿಟಿ ಪರ ಉಮೇಶ್ ಯಾದವ್ ಹಾಗೂ ದರ್ಶನ್ ನಾಲ್ಕಂಡೆ ತಲಾ 2 ವಿಕೆಟ್​ ಪಡೆದರು.

Exit mobile version