Site icon Vistara News

Mahanati Show: ʼಮಹಾನಟಿ ಶೋʼ ವಿರುದ್ಧ ಮೆಕ್ಯಾನಿಕ್‌ಗಳ ಆಕ್ರೋಶ; ಸ್ಪರ್ಧಿ ಗಗನಾ, ರಮೇಶ್‌ ಅರವಿಂದ್‌ ಸೇರಿ ಐವರ ವಿರುದ್ಧ ಮತ್ತೊಂದು ದೂರು

Mahanati Show

ಬೆಂಗಳೂರು: ʼಮಹಾನಟಿʼ ರಿಯಾಲಿಟಿ ಶೋ (Mahanati Show) ಸ್ಪರ್ಧಿ ಗಗನಾ ಹೇಳಿಕೆಯಿಂದ ಮೆಕ್ಯಾನಿಕ್‌ ವರ್ಗಕ್ಕೆ ನೋವಾಗಿದೆ ಎಂದು ಚಿಕ್ಕನಾಯಕನಹಳ್ಳಿಯ ದ್ವಿಚಕ್ರವಾಹನ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘ ದೂರು ನೀಡಿದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಮೆಕ್ಯಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗವನ್ನು ಕೀಳಾಗಿ ನಿಂದಿಸಿ, ಅಪಮಾನಿಸಲಾಗಿದೆ ಎಂದು ಆರೋಪಿಸಿ ʼಮಹಾನಟಿʼ ರಿಯಾಲಿಟಿ ಶೋ ನಡೆಸುವ ಜೀ ವಾಹಿನಿ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಮುಖ ನಟ, ನಟಿಯರು ಹಾಗೂ ಸ್ಪರ್ಧಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೆಕ್ಯಾನಿಕ್‌ ಮಿತ್ರ ವೆಲ್‌ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಆರ್‌.ನಾಗೇಶ್‌ ನೇತೃತ್ವದಲ್ಲಿ ಪದಾಧಿಕಾರಿಗಳು, ಸುಬ್ರಮಣ್ಯನಗರ ಪೊಲೀಸ್‌ ಠಾಣೆಗೆ ದೂರು‌ ನೀಡಿದ್ದಾರೆ.

ಮಹಾನಟಿ ಶೋ ಜಡ್ಜ್‌ಗಳಾದ ನಟಿ ಪ್ರೇಮಾ, ನಟ ರಮೇಶ್‌ ಅರವಿಂದ್‌, ನಿರ್ದೇಶಕ ತರುಣ್‌ ಸುಧೀರ್‌, ನಿರೂಪಕಿ ಅನುಶ್ರೀ ಹಾಗೂ ಸ್ಪರ್ಧಿ ಗಗನಾ ವಿರುದ್ಧ ದೂರು ದಾಖಲಾಗಿದೆ.

ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಎಂಬ ರಿಯಾಲಿಟಿ ಶೋನ ಒಂದು ಕಾರ್ಯಕ್ರಮದಲ್ಲಿ ಮೆಕ್ಯಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗದ ಜನರನ್ನು ತೀರಾ ಕೆಟ್ಟದಾಗಿ ಅಪಮಾನಿಸಲಾಗಿದೆ. ಈ ಕಾರ್ಯಕ್ರಮವನ್ನು ರಾಜ್ಯದ ಕೋಟ್ಯಂತರ ಜನರು ನೋಡುತ್ತಾರಾದ್ದರಿಂದ ನಮಗೆ ಆಗಿರುವ ಅವಮಾನಕ್ಕೆ ಎಣೆಯೇ ಇಲ್ಲದಂತಾಗಿದೆ. ಈ ಕಾರ್ಯಕ್ರಮದ ಒಂದು ಎಪಿಸೋಡ್‌ನಲ್ಲಿ, ಕಾರ್ಯಕ್ರಮದ ಜಡ್ಜ್ ಆಗಿರುವ ನಟ ರಮೇಶ್ ಅರವಿಂದ್ ಅವರು ಸ್ಪರ್ಧಿಯೊಬ್ಬರಿಗೆ ಟಾಸ್ಕ್ ನೀಡುತ್ತಾರೆ. ನಿಮ್ಮ ತಂಗಿ ಒಬ್ಬ ಮೆಕ್ಯಾನಿಕ್ ಜತೆ ಓಡಾಡುವುದನ್ನು ನೀವು ನೋಡುತ್ತೀರಿ. ನಿಮ್ಮ ತಂಗಿ ಮನೆಗೆ ಬಂದಾಗ ಏನು ಹೇಳುತ್ತೀರಿ ಎಂದು ಅವರು ಪ್ರಶ್ನಿಸಿ, ಅಭಿನಯಿಸಲು ಹೇಳುತ್ತಾರೆ. ಈ ಸಂದರ್ಭದಲ್ಲಿ ಸ್ಪರ್ಧಿ ಹೇಳುವ ಮಾತುಗಳು ಮೆಕ್ಯಾನಿಕ್ ಸಮುದಾಯಕ್ಕೆ ಅಪಮಾನಕಾರಿಯಾಗಿರುತ್ತದೆ ಎಂದು ಪದಾಧಿಕಾರಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ | Mahanati Show: ಮೆಕ್ಯಾನಿಕಲ್‌ ಲೈಫ್‌ ಬಗ್ಗೆ ಕೆಟ್ಟ ಡೈಲಾಗ್‌ ಹೊಡೆದ ಗಗನಾ; ರಮೇಶ್‌ ಸೇರಿ ಹಲವರ ವಿರುದ್ಧ ದೂರು!

“ನೋಡು ಐಶು, ನೀನು ಅವನ ಜತೆ ಬೈಕಲ್ಲಿ ಸುತ್ತಾಡೋದನ್ನು ನಾನು ನೋಡಿದೆ. ಬಿದ್ರೆ ಯಾವಾಗೂ, ತುಪ್ಪದ ಕೊಳದಲ್ಲಿ ಬೀಳಬೇಕೇ ಹೊರತು ಕೊಚ್ಚೆಯ ಕೊಳೆಯಲ್ಲಿ ಬೀಳಬಾರದು. ಇದನ್ನ ನೆನಪಿಟ್ಕೋ. ಲೈಫು ನೀನು ಅಂದುಕೊಂಡಷ್ಟು ಈಜಿಯಾಗಿರೋದಿಲ್ಲ. ದುಡ್ಡು ಇಂಪಾರ್ಟೆಂಟ್ ಅಲ್ಲ, ಪ್ರೀತಿನೇ ಇಂಪಾರ್ಟೆಂಟ್ ಅಂತ ನೀನು ಅಂದುಕೊಂಡಿರಬಹುದು. ಆದರೆ ದುಡ್ಡು ಯಾವಾಗಲೂ ಬೇಕು. ಪ್ರೀತಿ ಮಾಡ್ಕೊಂಡೇ ಗ್ರೀಸ್ ತಿಂದುಕೊಂಡು ಇರುತ್ತೀನಿ ಅಂದ್ರ ಆಗಲ್ಲ. ನೀನು ಮೆಕಾನಿಕ್ ಜತೆನೇ ಹೋಗಿ ಅವನ ಜತೆ ಗ್ರೀಸ್ ತಿಂದುಕೊಂಡು ಇರುತ್ತೀನಿ ಅಂದ್ರೆ ತಪ್ಪಾಗುತ್ತೆ” ಎಂದು ಆಕೆ ಹೇಳುತ್ತಾರೆ.

ಸ್ಪರ್ಧಿ ಇಷ್ಟು ಕೆಟ್ಟದಾಗಿ ಒಂದು ದೊಡ್ಡ ಶ್ರಮಿಕ ವರ್ಗದ ಬಗ್ಗೆ ಮಾತನಾಡುತ್ತಿದ್ದರೂ ಜಡ್ಜ್‌ಗಳಾದ ರಮೇಶ್ ಅರವಿಂದ್, ನಟಿ ಪ್ರೇಮ, ನಿರ್ದೇಶಕ ತರುಣ್ ಸುಧೀರ್, ಆಂಕರ್ ಅನುಶ್ರೀ ಮತ್ತು ಅತಿಥಿಗಳಾಗಿ ಪಾಲ್ಗೊಂಡಿದ್ದ ನಟ ನಟಿಯರು ಹೀಗೆ ಮಾತನಾಡುವುದು ತಪ್ಪು ಎಂದು ಹೇಳುವ ಬದಲಾಗಿ, ಆಕೆಯ ಮಾತುಗಳಿಗೆ ಚಪ್ಪಾಳೆ ಹೊಡೆದು, ಪ್ರೋತ್ಸಾಹಿಸುತ್ತಾರೆ.

ಮೆಕ್ಯಾನಿಕ್ ವೃತ್ತಿಯೂ ಎಲ್ಲ ವೃತ್ತಿಗಳ ಹಾಗೆಯೇ ಗೌರವಾನ್ವಿತ ವೃತ್ತಿ. ಎಂಜಿನಿಯರ್, ಡಾಕ್ಟರ್, ಬ್ಯುಸಿನೆಸ್ ಮ್ಯಾನ್, ಪೊಲೀಸ್, ಮಿಲಿಟರಿಯಿಂದ ಹಿಡಿದು ಚಪ್ಪಲಿ ಹೊಲೆಯುವ ಕಾಯಕದವರೆಗೆ ಎಲ್ಲ ವೃತ್ತಿಗಳೂ ಶ್ರೇಷ್ಠ ವೃತ್ತಿಗಳೇ ಆಗಿವೆ. ಯಾವ ವೃತ್ತಿಯೂ ಕನಿಷ್ಠವಲ್ಲ, ಯಾವ ವೃತ್ತಿ ಮಾಡುವವನೂ ಕೊಚ್ಚೆ ಅಲ್ಲ. ಇದು ಈ ಮಹಾನಟ ನಟಿಯರಿಗೆ ಅರ್ಥವಾಗದೇ ಇರುವುದು ಆಶ್ಚರ್ಯಕರವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.

ಮಹಾನಟಿ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್ ಕೆಲಸ ಮಾಡುವವರು ಕೊಚ್ಚೆ ಎಂದು ನಿಂದಿಸಲಾಗಿದೆ. ಮೆಕಾನಿಕ್ ಮನೆಯವರು ಗ್ರೀಸ್ ತಿಂದು ಬದುಕುತ್ತಾರೆ ಎಂದು ಬಿಂಬಿಸಲಾಗಿದೆ. ಈ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವೂ ಆಗಿರುವುದರಿಂದ, ನಮ್ಮ ಬಗ್ಗೆ ಇಷ್ಟು ಕೊಳಕಾಗಿ ನಿಂದಿಸಿರುವುದರಿಂದ ನಾವುಗಳು ತಲೆ ಎತ್ತಿಕೊಂಡು ಓಡಾಡದಂತಾಗಿದೆ. ಇದೇ ಮಾತುಗಳನ್ನು ವೈದ್ಯ, ಪೊಲೀಸ್, ವಕೀಲ, ಪತ್ರಕರ್ತ, ಚಿತ್ರನಟರು ಅಥವಾ ಇನ್ಯಾವುದೇ ವೃತ್ತಿಪರ ಸಮುದಾಯದ ವಿರುದ್ಧ ಮಾತನಾಡಿದ್ದರೆ ಅವರು ಸುಮ್ಮನೆ ಇರುತ್ತಿದ್ದರೆ? ಅದಕ್ಕೂ ರಮೇಶ್ ಅರವಿಂದ್ ಅವರಾದಿಯಾಗಿ ಎಲ್ಲರೂ ಆಕೆಯನ್ನು ಹೊಗಳಿ ಅಟ್ಕ್ಕೇರಿಸುತ್ತಾರೆ. ಆ ಸಂದರ್ಭದಲ್ಲಿ ಇಡೀ ಒಂದು ಶ್ರಮಿಕ ವರ್ಗವನ್ನು ಕೊಚ್ಚೆ ಗುಂಡಿಯಲ್ಲಿರುವವರು ಹಾಗೂ ತಮ್ಮ ಕುಟುಂಬದವರಿಗೆ ಅನ್ನಕ್ಕೆ ಬದಲಾಗಿ ಗ್ರೀಸನ್ನು ತಿನ್ನಿಸುತ್ತಾರೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಒಂದು ಶ್ರಮಿಕ ಸಮುದಾಯವನ್ನು ಕೊಚ್ಚೆ ಗುಂಡಿಯಲ್ಲಿರುವವರು, ಗ್ರೀಸ್ ತಿಂದು ಬದುಕುವವರು ಎಂದು ನಿಂದಿಸಿರುವ ಈ ಕಾರ್ಯಕ್ರಮ ಪ್ರಸಾರ ಮಾಡುವ ವಾಹಿನಿ ಮುಖ್ಯಸ್ಥರು, ಜಡ್ಜ್‌ಗಳಾದ ರಮೇಶ್ ಅರವಿಂದ್ ಮತ್ತು ಪ್ರೇಮ, ತರುಣ್ ಸುಧೀರ್, ಆಂಕರ್ ಅನುಶ್ರೀ, ಸ್ಪರ್ಧಿ ಗಗನ ಮೇಲೆ ಸಮುದಾಯಗಳ ನಡುವೆ ದ್ವೇಷ ಹರಡುವ, ಸಮಾಜದಲ್ಲಿ ಅಶಾಂತಿ ಹರಡುವ, ಒಂದಿಡೀ ಶ್ರಮಿಕ ಸಮುದಾಯವನ್ನು ಕೊಚ್ಚೆ ಎಂದು ನಿಂದಿಸಿ ಅವರ ಆತ್ಮಗೌರವಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ಸಂಘ ಕೋರಿದೆ.

Exit mobile version