ಬೆಂಗಳೂರು: ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿರುವ ಕಾರಣ ಜನಾಕ್ರೋಶ ಉಂಟಾಗಿದೆ. ಪೆಟ್ರೋಲ್ಗೆ 3 ರೂಪಾಯಿ ಹಾಗೂ ಡಿಸೆಲ್ಗೆ 3.50 ರೂಪಾಯಿ ಏರಿಕೆಯಾಗಿರುವ ಕಾರಣ ಬೇರೆಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ವಿರೋಧ ಪಕ್ಷ ಬಿಜೆಪಿ ಇದರ ವಿರುದ್ದ ಆಂದೋಲನ ಶುರು ಮಾಡಿದೆ. ಈ ಎಲ್ಲ ಬೆಳವಣಿಗೆ ನಡುವೆ ನೆರೆಯ ಮಹಾರಾಷ್ಟ್ರ ಸರ್ಕಾರ ಮುಂಬಯಿ ನಗರದ ಪ್ರದೇಶಧಲ್ಲಿ ಪೆಟ್ರೋಲ್ ಬೆಲೆಯನ್ನು (Petrol Price) ಇಳಿಕೆ ಮಾಡಿದೆ. ಆದಾಗ್ಯೂ ಆ ರಾಜ್ಯದಲ್ಲಿ ಇಂಧನ ಬೆಲೆ ಕರ್ನಾಟಕಕ್ಕಿಂತ ಹೆಚ್ಚಾಗಿದೆ.
ಮುಂಬೈ ಪ್ರದೇಶದಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 24 ರಿಂದ 21 ಕ್ಕೆ ಇಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇಕಡಾ 26 ರಿಂದ 25 ಕ್ಕೆ ಇಳಿಸಲಾಗುವುದು ಎಂದಿದೆ. ಇದು ಮುಂಬೈ, ನವೀ ಮುಂಬೈ ಮತ್ತು ಥಾಣೆ ಸೇರಿದಂತೆ ಮುಂಬೈ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ 65 ಪೈಸೆ ಇಳಿಕೆಯಾಗಿದೆ ಹಾಗೂ ಡೀಸೆಲ್ ಬೆಲೆ 2 ರೂಪಾಯಿ ಕಡಿಮೆಯಾಗಿದೆ.
ಮಹಾರಾಷ್ಟ್ರ ಬಜೆಟ್ ಮಂಡಿಸಿದ ಉಪಮುಖ್ಯಮಂತ್ರಿ ಅಜಿತ್ ಪವಾರ್, “ಮುಂಬೈ ಪ್ರದೇಶದಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 24 ರಿಂದ 21 ಕ್ಕೆ ಇಳಿಸಲಾಗಿದೆ. ಮುಂಬೈ ವಲಯದಲ್ಲಿ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.26ರಿಂದ ಶೇ.25ಕ್ಕೆ ಇಳಿಸಲಾಗಿದ್ದು, ಇದರಿಂದ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 65 ಪೈಸೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಜೂನ್ 28 ರಂದು ಮುಂಬೈನಲ್ಲಿ ಪೆಟ್ರೋಲ್ 104.21 ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ ಲೀಟರ್ಗೆ 92.15 ರೂಪಾಯಿ ಇದೆ. ಕರ್ನಾಟಕದಲ್ಲಿ 102. 86 ರೂಪಾಯಿ ಆದರೆ ಬೆಂಗಳೂರು 88. 94 ರೂಪಾಯಿ ನಡೆದಿದೆ.
ಮಹಾರಾಷ್ಟ್ರ ಬಜೆಟ್
2024-25ರ ರಾಜ್ಯ ಬಜೆಟ್ನಲ್ಲಿ 21 ರಿಂದ 60 ವರ್ಷ ವಯಸ್ಸಿನ ಅರ್ಹ ಮಹಿಳೆಯರಿಗೆ ಮಾಸಿಕ 1,500 ರೂ.ಗಳ ಭತ್ಯೆ ಒಳಗೊಂಡ ಆರ್ಥಿಕ ನೆರವು ಯೋಜನೆಯನ್ನು ಹಣಕಾಸು ಖಾತೆಯನ್ನು ಹೊಂದಿರುವ ಪವಾರ್ ಬಜೆಟ್ನಲ್ಲಿ ಮಂಡಿಸಿದ್ದಾರೆ. ವಿಧಾನಸಭೆಯಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಪವಾರ್ ಅವರು ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆ’ ಎಂಬ ಯೋಜನೆಯನ್ನು ಜುಲೈನಿಂದ ಜಾರಿಗೆ ತರಲಾಗುವುದು ಎಂದು ಹೇಳಿದರು.
ಈ ಯೋಜನೆಗಾಗಿ ವಾರ್ಷಿಕ ಬಜೆಟ್ ನಲ್ಲಿ 46,000 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದು ಅವರು ಹೇಳಿದರು. ಮತ್ತೊಂದು ಕಲ್ಯಾಣ ಯೋಜನೆಯನ್ನು ಘೋಷಿಸಿದ ಹಣಕಾಸು ಸಚಿವರು, ಐದು ಸದಸ್ಯರ ಅರ್ಹ ಕುಟುಂಬಕ್ಕೆ ‘ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ’ ಅಡಿ ಪ್ರತಿ ವರ್ಷ ಮೂರು ಅಡುಗೆ ಅನಿಲ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.