ಮುಂಬಯಿ: ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂಬ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ನೀಡಿದ್ದ ಸೂಚನೆಗೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ.
ಗುರುವಾರ ರಾತ್ರಿ ಫೇಸ್ಬುಕ್ಲೈವ್ನಲ್ಲಿ ಬಂದ ಅವರು ನಿರೀಕ್ಷೆಯಂತೆ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು. ಸರ್ಕಾರದ ಸಾಧನೆಗಳನ್ನು ವಿವರಿಸಿದ ಅವರು ಶಿವಸೇನೆ ತನ್ನ ಸಿದ್ಧಾಂತಕ್ಕೆ ಇಂದೂ ಬದ್ಧವಾಗಿದೆ, ಮುಂದೂ ಬದ್ಧವಾಗಿರಲಿದೆ ಎಂದರು.
ಮುಖ್ಯಮಂತ್ರಿ ಸ್ಥಾನದ ಜತೆಗೆ ವಿಧಾನ ಪರಿಷತ್ನ ಸ್ಥಾನಕ್ಕೂ ತಾವು ರಾಜೀನಾಮೆ ನೀಡುವುದಾಗಿ ಠಾಕ್ರೆ ಹೇಳಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಹಲವಾರು ಸವಾಲುಗಳನ್ನು ಎದುರಿಸಿದೆ. ಮೊದಲಿಗೆ ಕೊರೊನಾ ಟೆಸ್ಟ್ ನಡೆಸಲಾಗುತ್ತಿತ್ತು. ಈಗ ಫ್ಲೋರ್ ಟೆಸ್ಟ್ ನಡೆಸಬೇಕಾಗಿದೆ. ಏನೇ ಆದರೂ ಮುಂದೆ ಬರಲಿರುವ ಸರ್ಕಾರಕ್ಕೆ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಪ್ರಕಟಿಸಿದರು.
ಇಂದು ಸಚಿವ ಸಂಪುಟದ ಸಭೆಯಲ್ಲಿ ಹೆಸರು ಬದಲಾಯಿಸುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಾಗ ಕಾಂಗ್ರೆಸ್ ಅಥವಾ ಎನ್ಸಿಪಿಯ ಸಚಿವರು ವಿರೋಧಿಸಲಿಲ್ಲ ಎಂದು ಹೇಳಿದ ಅವರು, ಯಾರು ಇದಕ್ಕಾಗಿ ಒತ್ತಾಯಿಸುತ್ತಿದ್ದರೋ ಅವರು ವಿರೋಧಿಸುತ್ತಿದ್ದಾರೆ ಎಂದರು.
ಇದಕ್ಕೂ ಮೊದಲು ರಾಜ್ಯಪಾಲರ ಸೂಚನೆಗೆ ತಡೆ ನೀಡಬೇಕೆಂದು ಮಹಾ ವಿಕಾಸ ಅಘಾಡಿ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಜ್ಯಪಾಲರ ಸೂಚನೆಯನ್ನು ಎತ್ತಿ ಹಿಡಿದಿತ್ತು. ಗುರುವಾರ ಬಹುಮತ ಸಾಬೀತುಪಡಿಸವಂತೆ ತಿಳಿಸಿತ್ತು.
ಸುಪ್ರೀಂಕೋರ್ಟ್ ಶಾಸಕರ ಅನರ್ಹತೆ ವಿಚಾರಣೆಗೆ ತಡೆ ಒಡ್ಡಿದೆ. ಈ ಹಂತದಲ್ಲಿ ಒಂದೊಮ್ಮೆ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ನಡೆದರೆ ಅದೇ ಶಾಸಕರಿಗೆ ಮತ ಹಾಕಲು ಅವಕಾಶ ನೀಡುವುದು ವೈರುಧ್ಯವಾಗುತ್ತದೆ ಎಂಬ ಸರ್ಕಾರದ ವಾದವನ್ನು ಒಪ್ಪಿದ್ದ ಸುಪ್ರೀಂ ಕೋರ್ಟ್, ಜು.೧೨ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗುವ ತೀರ್ಪಿಗೆ ಗುರುವಾರದ ವಿಶ್ವಾಸಮತ ಯಾಚನೆಯ ಫಲಿತಾಂಶವು ಬದ್ಧವಾಗಿರಲಿದೆ ಎಂದಿತ್ತು.
ಇದನ್ನೂ ಓದಿ| Maha politics: ನಾಳೆ ಸಂಜೆ 5 ಗಂಟೆಗೆ ಅಧಿವೇಶನ ಫಿಕ್ಸ್, ವಿಶ್ವಾಸಮತ ಸಾಬೀತುಪಡಿಸಲು ಠಾಕ್ರೆಗೆ ಆದೇಶ