Site icon Vistara News

Mahua Moitra: ಫೆಮಾ ಉಲ್ಲಂಘನೆ; ಟಿಎಂಸಿ ನಾಯಕಿ ಮಹುವಾ ಮೋಯಿತ್ರಾಗೆ ಇ.ಡಿ ಸಮನ್ಸ್

Mahua Moitra gets summoned by ed in FEMA probe

ನವದೆಹಲಿ: ಫೆಮಾ ನಿಯಮ ಉಲ್ಲಂಘನೆಗೆ (FEMA Probe) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (Enforcement Directorate ED) ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೋಯಿತ್ರಾ (TMC Leader Mahua Moitra) ಅವರಿಗೆ ಸಮನ್ಸ್ (Summons) ಜಾರಿ ಮಾಡಿದೆ. ಫೆಬ್ರವರಿ 19 ರಂದು ವಿಚಾರಣೆಗೆ ಹಾಜರಾಗುವಂತೆ ಮಹುವಾ ಅವರಿಗೆ ಸೂಚಿಸಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಅಡಿಯಲ್ಲಿ ಅವರ ಹೇಳಿಕೆಯನ್ನು ಇಡಿ ದಾಖಲಿಸಲಿದೆ. ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಇತ್ತೀಚೆಗಷ್ಟೇ ಮಹುವಾ ಮೋಯಿತ್ರಾ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ.

ಇ.ಡಿ ಮಾತ್ರವಲ್ಲದೇ ಸಿಬಿಐ ಕೂಡ ಮೋಯಿತ್ರಾ ಅವರ ವಿರುದ್ಧ ತನಿಖೆಯನ್ನು ನಡೆಸುತ್ತಿದೆ. ಲೋಕಪಾಲ್ ಉಲ್ಲೇಖದ ಅನ್ವಯದ ಮೋಯಿತ್ರಾ ಅವರ ವಿರುದ್ಧ ಆರೋಪಗಳ ಕುರಿತು ಸಿಬಿಐ ತನಿಖೆಯನ್ನು ಕೈಗೊಂಡಿದೆ. ಅನೈತಿಕ ನಡವಳಿಕೆ ಮತ್ತು ಲೋಕಸಭಾ ಪೋರ್ಟಲ್‌ನ ತಮ್ಮ ಯುಸರ್ ಐಡಿ ಮತ್ತು ಪಾಸ್ವರ್ಡ್‌ಗಳನ್ನು ಮೂರನೇ ವ್ಯಕ್ತಿಗೆ ಷೇರ್ ಮಾಡಿದ್ದು, ಇದು ರಾಷ್ಟ್ರೀಯ ಭದ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹುವಾ ಮೋಯಿತ್ರಾ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಉಚ್ಚಾಟಣೆ ಮಾಡಲಾಗಿತ್ತು.

ಸದನದಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ಲಂಚ ಸ್ವೀಕರಿಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐನ ಪ್ರಶ್ನಾವಳಿಗೆ ತಮ್ಮ ಪ್ರತಿಕ್ರಿಯೆಗಳನ್ನು ಈಗಾಗಲೇ ಕಳುಹಿಸಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರತಿಕ್ರಿಯೆಗಳನ್ನು ಸಿಬಿಐ ಪರಿಶೀಲಿಸುತ್ತಿದ್ದು, ಬಳಿಕ ತನ್ನ ವರದಿಯನ್ನು ಲೋಕಪಾಲ್‌ಗೆ ಸಲ್ಲಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲೋಕಪಾಲದ ಉಲ್ಲೇಖದ ಮೇರೆಗೆ ಮೊಯಿತ್ರಾ ವಿರುದ್ಧದ ಆರೋಪಗಳ ಬಗ್ಗೆ ಸಂಸ್ಥೆ ಪ್ರಾಥಮಿಕ ವಿಚಾರಣೆ ನಡೆಸುತ್ತಿದೆ. ಸಿಬಿಐ ತನ್ನ ವಿಚಾರಣೆಗೆ ಸಂಬಂಧಿಸಿದಂತೆ ವಕೀಲ ಜೈ ದೇಹದ್ರಾಯ್ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ಅವರನ್ನೂ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಲೋಕಸಭಾ ಸಂಸದ ನಿಶಿಕಾಂತ್ ದುಬೆ ಅವರು ಮಹುವಾ ಮೋಯಿತ್ರಾ ಲಂಚ ಪಡೆದು, ಸದನದಲ್ಲಿ ಅದಾನಿ ಗ್ರೂಪ್ ಹಾಗೂ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳತ್ತಿದ್ದರು ಎಂದು ಆರೋಪಿಸಿದ್ದರು. ಹಣಕ್ಕಾಗಿ ಮಹುವಾ ಅವರು ರಾಷ್ಟ್ರೀಯ ಭದ್ರತೆ ಜತೆಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಪರಿಣಾಮ ಸಂಸದೀಯ ಸ್ಥಾಯಿ ಸಮಿತಿ ವಿಚಾರಣೆ ನಡೆಸಿ, ಮಹುವಾ ಅವರು ತಪ್ಫಿತಸ್ಥೆ ಎಂದು ಹೇಳಿ, ಸಂಸದ ಸ್ಥಾನದಿಂದ ಉಚ್ಚಾಟನೆ ಮಾಡುವಂತೆ ಶಿಫಾರಸು ಮಾಡಿತ್ತು.

ಈ ಸುದ್ದಿಯನ್ನೂ ಓದಿ: Mahua Moitra: ಮಹುವಾ ಮೋಯಿತ್ರಾ ವಿರುದ್ಧ ಸರ್ಕಾರಿ ತನಿಖೆಗೆ ಸದನ ಸಮಿತಿ ಶಿಫಾರಸು

Exit mobile version