ಬೆಂಗಳೂರು: ಮಾಧ್ಯಮಗಳು ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು. ನಕಾರಾತ್ಮಕ ಸಂಗತಿಗಳನ್ನೇ ಸದಾ ಕಾಲ ಬಿತ್ತಬಾರದು. ನಮಗೆ ಬ್ರೇಕಿಂಗ್ ನ್ಯೂಸ್‌ಗಿಂತ ಮೇಕಿಂಗ್ ನ್ಯೂಸ್ ಅಗತ್ಯ ಎಂದು ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ತೀರ್ಥ ಸ್ವಾಮೀಜಿಯವರು (Vistara news launch) ಹೇಳಿದರು.
ವಿಸ್ತಾರ ನ್ಯೂಸ್ ಚಾನೆಲ್ ಅನಾವರಣ ಮತ್ತು ಕಾಯಕ ಯೋಗಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ನಾನಾ ಕ್ಷೇತ್ರಗಳ ಸಾಧಕರಿಗೆ ಪುರಸ್ಕಾರ ಮಾಡುವ ಮೂಲಕ ರತ್ನ ಮಾಲಿಕೆಗಳ ನಡುವೆ ವಿಸ್ತಾರ ಚಾನೆಲ್ ಅನಾವರಣವಾಗುತ್ತಿದೆ. ವಿಸ್ತಾರ ಚಾನೆಲ್ ವೈವಿಧ್ಯಮಯ ವಿಷಯಗಳಿಗೆ ಪ್ರತ್ಯೇಕ ಯೂಟ್ಯೂಬ್ ಚಾನೆಲ್‌ಗಳನ್ನೂ ಹೊಂದಿರುವುದು ಸ್ವಾಗತಾರ್ಹ. ಏಕತಾನತೆಗೆ ಜೋತುಬೀಳದಂತೆ, ನಾನಾ ವಿಷಯಗಳಿಗೆ ಸಂಬಂಧಿಸಿ ಹರಿ ಪ್ರಕಾಶ್ ಕೋಣೆಮನೆಯವರು ವಾರ್ತಾ ವಾಹಿನಿಯನ್ನು ಬೆಳೆಸುತ್ತಿದ್ದಾರೆ. ವಿಭಿನ್ನತೆಯ ಜತೆಗೆ ಉಪಯುಕ್ತತೆ ಮುಖ್ಯ. ಈ ನಿಟ್ಟಿನಲ್ಲಿ ವಿಸ್ತಾರ ಹೊಸತನ್ನು ನೀಡುವಂತಾಗಲಿ ಎಂದು ಆಶೀರ್ವಚನ ನೀಡಿದರು.
ವಾರ್ತಾ ವಾಹಿನಿಗಳು ಸಮಾಜ ಕಟ್ಟುವ ಮತ್ತು ಎದಲ್ಲರ ಬದುಕನ್ನು ಹಸನುಗೊಳಿಸುವ ಕೆಲಸ ಮಾಡಬೇಕು. ಕೇವಲ ರಾಜಕಾರಣ ಮಾತ್ರ ಸುದ್ದಿಯಾಗಬಾರದು. ಕಲೆ, ಸಾಹಿತ್ಯ, ಆಧ್ಯಾತ್ಮ, ಸಂಸ್ಕೃತಿ ಸೇರಿ ಬದುಕಿನ ದರ್ಪಣ ಆಗಬೇಕು. ವಿಸ್ತಾರ ವಾಹಿನಿ ಈ ನಿಟ್ಟಿನಲ್ಲಿ ಹಲವು ಯೂಟ್ಯೂಬ್ ವಾಹಿನಿಗಳನ್ನು ಒಳಗೊಂಡಿದೆ. ವಿಸ್ತಾರ ಚಾನೆಲ್ ಹುಟ್ಟುವಾಗಲೇ ವಿಸ್ತಾರವಾಗಿದೆ. ಬೆಳೆದಾಗ ಹೇಗೆ ವಿಸ್ತಾರವಾಗಬಹುದು ಎಂಬುದು ಕಲ್ಪನಾತೀತವಾಗಿದೆ. ಜತೆಗೆ ಎಲ್ಲರೂ ಸುದ್ದಿಗಳನ್ನು ಕಳಿಸಬಹುದು, ಸಾಕ್ಷಿಗಳಾಗುವುದರ ಜತೆಗೆ ಭಾಗಿಗಳಾಗುವ ಅವಕಾಶವನ್ನೂ ವಿಸ್ತಾರ ಒದಗಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.