Site icon Vistara News

Modi Meditation: ಮೋದಿ ಮಾಡ್ತಿರೋದು ‘ಧ್ಯಾನ’ ಅಲ್ಲ ‘ಡ್ರಾಮಾ’ ಎಂದ ಮಲ್ಲಿಕಾರ್ಜುನ ಖರ್ಗೆ!

Modi Meditation

Mallikarjun Kharge's jibe at PM Narendra Modi's Kanniyakumari meditation: Why this drama?

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲೆ ಸ್ಮಾರಕದಲ್ಲಿ (Vivekananda Rock Memorial) 45 ಗಂಟೆಗಳ ಧ್ಯಾನ ಆರಂಭಿಸಿದ್ದಾರೆ. ಸುಮಾರು 131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನದಲ್ಲಿ (Modi Meditation) ತೊಡಗಿಕೊಂಡಿದ್ದಾರೆ. ಇದರ ಬೆನ್ನಲ್ಲೇ, “ಮೋದಿ ಅವರು ಮನೆಯಲ್ಲಿಯೇ ಧ್ಯಾನ ಮಾಡಬಹುದಿತ್ತು. ಕನ್ಯಾಕುಮಾರಿಯಲ್ಲಿ ಧ್ಯಾನದ ಹೆಸರಿನಲ್ಲಿ ಡ್ರಾಮಾ ಮಾಡುವ ಅವಶ್ಯಕತೆ ಇರಲಿಲ್ಲ” ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ಇಂಡಿಯಾ ಟಿವಿಗೆ ನೀಡಿದ ಸಂದರ್ಶನದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಧ್ಯಾನದ ಕುರಿತು ಮಾತನಾಡಿದರು. “ನರೇಂದ್ರ ಮೋದಿ ಅವರು ಮನೆಯಲ್ಲಿಯೇ 45 ಗಂಟೆ ಧ್ಯಾನ ಮಾಡಬಹುದಿತ್ತು. ಕನ್ಯಾಕುಮಾರಿಗೆ ಹೋಗುವ ಅನಿವಾರ್ಯತೆ ಏನಿತ್ತು? ನರೇಂದ್ರ ಮೋದಿ ಅವರ ಭದ್ರತೆಗೆ 10 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಷ್ಟೊಂದು ಡ್ರಾಮಾ ಏಕೆ ಬೇಕಿತ್ತು? ಅವರು ಮನೆಯಲ್ಲಿಯೇ ಪೂಜೆ, ಧ್ಯಾನ ಮಾಡಬಹುದಿತ್ತು” ಎಂಬುದಾಗಿ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಹಾರ ಸೇವಿಸಲ್ಲ ಮೋದಿ

ನರೇಂದ್ರ ಮೋದಿ ಅವರು ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸುವುದಿಲ್ಲ. ಹಣ್ಣುಗಳನ್ನು ಕೂಡ ಅವರು ಸೇವಿಸುವುದಿಲ್ಲ. ಎರಡು ದಿನವೂ ಅವರು ಪಾನೀಯ ಮಾತ್ರ ಸೇವಿಸಲಿದ್ದಾರೆ. ಜ್ಯೂಸ್‌, ಹಾಲಿನಲ್ಲಿಯೇ ಎರಡು ದಿನ ಕಳೆಯಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಜನವರಿಯಲ್ಲಿ ರಾಮಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿಯೂ ನರೇಂದ್ರ ಮೋದಿ ಅವರು 11 ದಿನಗಳ ಉಪವಾಸ ಕೈಗೊಂಡಿದ್ದರು. ಹಾಸಿಗೆಯ ಮೇಲೆ ಮಲಗುವುದನ್ನು ನಿಲ್ಲಿಸಿದ್ದರು. ನೆಲದ ಮೇಲೆ ಬಟ್ಟೆ ಹಾಸಿಕೊಂಡು ನಿದ್ದೆ ಮಾಡಿದ್ದರು. ಈ ಅವಧಿಯಲ್ಲಿ ಅವರು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸಿದ್ದರು. ಹಣ್ಣುಗಳನ್ನು ಮಾತ್ರ ಸೇವಿಸಿದ್ದರು.

ನರೇಂದ್ರ ಮೋದಿ ಅವರು ಕೇರಳ ರಾಜಧಾನಿ ತಿರುವನಂತಪುರಂನಿಂದ ಕನ್ಯಾಕುಮಾರಿಗೆ ಆಗಮಿಸಿದರು. ಧ್ಯಾನ ಆರಂಭಿಸುವ ಮೊದಲು ಅವರು ಭಗವತಿ ಅಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮೋದಿ ಅವರು ಧ್ಯಾನ ಆರಂಭಿಸಿದರು. ಮೋದಿ ಅವರು ಎರಡು ದಿನ ಧ್ಯಾನ ಮಾಡುವ ಹಿನ್ನೆಲೆಯಲ್ಲಿ ಸ್ಮಾರಕದ ಸುತ್ತಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Lok Sabha Election: ನಾಳೆ ಕೊನೆಯ ಹಂತದ ಮತದಾನ; ಮೋದಿ, ಕಂಗನಾ ಸೇರಿ ಹಲವರ ಭವಿಷ್ಯ ನಿರ್ಧಾರ

Exit mobile version