Site icon Vistara News

ಚುನಾವಣೆ ಫಲಿತಾಂಶಕ್ಕೆ ಮೊದಲೇ ಇಂಡಿಯಾ ಒಕ್ಕೂಟಕ್ಕೆ ದೀದಿ ಶಾಕ್; ಬಾಹ್ಯ ಬೆಂಬಲವಷ್ಟೇ ಎಂದು ಘೋಷಣೆ!

Mamata Banerjee

Mamata Banerjee Redefines INDIA Bloc, Says Will Provide Outside Support

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನ ಮುಕ್ತಾಯವಾಗಿದೆ. ಐದನೇ ಹಂತದ ಮತದಾನಕ್ಕೆ ಚುನಾವಣೆ ಆಯೋಗ (Election Commission Of India) ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿವೆ. ಅಭ್ಯರ್ಥಿಗಳೂ ಇದೇ ಲೆಕ್ಕಾಚಾರದಲ್ಲಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರದ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಬೇಕು ಎಂದೇ ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಶಾಕ್‌ ನೀಡಿದ್ದಾರೆ. “ಇಂಡಿಯಾ ಒಕ್ಕೂಟಕ್ಕೆ ನಮ್ಮದೇನಿದ್ದರೂ ಬಾಹ್ಯ ಬೆಂಬಲ” ಎಂದಿದ್ದಾರೆ.

“ಕೇಂದ್ರದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಟಿಎಂಸಿಯು ನಾಯಕತ್ವದ ಸಹಕಾರ ನೀಡುತ್ತದೆ. ಬಾಹ್ಯವಾಗಿಯೇ ಇಂಡಿಯಾ ಒಕ್ಕೂಟಕ್ಕೆ ಟಿಎಂಸಿಯು ಬೆಂಬಲ ನೀಡಲಿದೆ. ಪ್ರತಿಯೊಂದು ವಿಚಾರದಲ್ಲಿಯೂ ಇಂಡಿಯಾ ಒಕ್ಕೂಟಕ್ಕೆ ನಾವು ಸಹಕಾರ ನೀಡುತ್ತೇವೆ. ಅಷ್ಟೇ ಅಲ್ಲ, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ, ಪಶ್ಚಿಮ ಬಂಗಾಳದ ಜನರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಅದರಲ್ಲೂ, 100 ದಿನಗಳ ಉದ್ಯೋಗ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವವರಿಗಂತೂ ಯಾವುದೇ ಸಮಸ್ಯೆ ಆಗುವುದಿಲ್ಲ” ಎಂದು ಹೇಳಿದ್ದಾರೆ.

ಇದೇ ವೇಳೆ, ಇಂಡಿಯಾ ಒಕ್ಕೂಟಕ್ಕೂ ಮಮತಾ ಬ್ಯಾನರ್ಜಿ ಅವರು ವ್ಯಾಖ್ಯಾನ ನೀಡಿದರು. “ಯಾವುದು ಇಂಡಿಯಾ ಒಕ್ಕೂಟ, ಎಲ್ಲಿ ಮೈತ್ರಿ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಪಶ್ಚಿಮ ಬಂಗಾಳದ ಕಾಂಗ್ರೆಸ್‌ ಅಥವಾ ಸಿಪಿಎಂ ಬಗ್ಗೆ ಯೋಚನೆ ಮಾಡದಿರಿ. ಈ ಪಕ್ಷಗಳ ಲೆಕ್ಕಾಚಾರ ತೆಗೆದುಕೊಳ್ಳದಿರಿ. ಈ ಎರಡೂ ಪಕ್ಷಗಳು ಬಿಜೆಪಿ ಜತೆಗಿವೆ. ನಾನು ಮಾತನಾಡುತ್ತಿರುವುದು ದೆಹಲಿ ಮೈತ್ರಿಯ ಬಗ್ಗೆ ಮಾತ್ರ” ಎಂದು ಹೇಳಿದರು. ಆ ಮೂಲಕ ಚುನಾವಣೆ ಫಲಿತಾಂಶದ ಬಳಿಕದ ಮೈತ್ರಿಯ ಬಗ್ಗೆ ಸೂಚನೆ ನೀಡಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರದವನ್ನು ಅಧಿಕಾರದಿಂದ ಕೆಳಗಿಳಿಸುವ ಏಕಮಾತ್ರ ಉದ್ದೇಶದಿಂದ ಹಲವು ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು ರಚಿಸಿವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳಲ್ಲಿಯೇ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಸೇರಿ ಹಲವೆಡೆ ಹಲವು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿವೆ. ಕೆಲವು ಕಡೆಯಂತೂ, ಇಂಡಿಯಾ ಒಕ್ಕೂಟದ ಪಕ್ಷಗಳ ಮಧ್ಯೆಯೇ ಪೈಪೋಟಿ ಇದೆ. ಇದರ ಮಧ್ಯೆಯೇ, ನಮ್ಮದೇನಿದ್ದರೂ ಬಾಹ್ಯ ಬೆಂಬಲ ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ಅವರು ಶಾಕ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

Exit mobile version