ನವ ದೆಹಲಿ: ನನ್ನ ಪ್ರೀತಿಯ ದೇಶವಾಸಿಗಳೇ, ನಿಮಗೆ ನಮಸ್ಕಾರ, ನನಗೆ ಜನರ ಸಾವಿರಾರು ಪತ್ರಗಳು ಬಂದಿವೆ. ಲಕ್ಷಾಂತರ ಸಂದೇಶಗಳನ್ನು ಓದಿ ಹಲವು ಸಲ ಭಾವುಕನಾಗಿದ್ದೇನೆ. ಮನಸ್ಸು ಭಾವನೆಗಳಿಂದ ತುಂಬಿದಾಗ ನನ್ನನ್ನು ನಾನೇ ಸಂಭಾಳಿಸಿದ್ದೇನೆ. ಮನ್ ಕೀ ಬಾತ್ ಕೋಟ್ಯಂತರ ಭಾರತೀಯರ ಭಾವನೆಯಾಗಿದೆ. 2014ರ ಅಕ್ಟೋಬರ್ 3ರ ವಿಜಯ ದಶಮಿಯಂದು ಮನ್ ಕೀ ಬಾತ್ ಆರಂಭವಾಗಿತ್ತು. (Mann Ki Baat ) ಇದು ದೇಶದ ಜನತೆಯ ಸಕಾರಾತ್ಮಕ ಭಾವೆನಗಳನ್ನು ಅಭಿವ್ಯಕ್ತಪಡಿಸುವ ಹಬ್ಬವಾಗಿದೆ. ಪ್ರತಿ ತಿಂಗಳೂ ಇದು ಬರುತ್ತದೆ. ಹೀಗೆಂದು ಪ್ರಧಾನಿ ಮೋದಿ ಅವರು 100ನೇ ಮನ್ ಕೀ ಬಾತ್ ಅನ್ನು ಆರಂಭಿಸಿದರು.
ಮನ್ ಕೀ ಬಾತ್‌ನಿಂದ ನಡೆದಿವೆ ಆಂದೋಲನ
ಮನ್ ಕೀ ಬಾತ್‌ನ ಪ್ರತಿಯೊಂದು ಸಂಚಿಕೆಯೂ ವಿಶೇಷತೆಗಳನ್ನು ಒಳಗೊಂಡಿದೆ. ದೇಶದ ಮೂಲೆ ಮೂಲೆಯ ಜನತೆಯನ್ನು ಇದು ತಲುಪಿದೆ. ಪ್ರತಿ ತಿಂಗಳೂ ಕೋಟ್ಯಂತರ ಜನ ಇದರ ನಿರೀಕ್ಷೆಯಲ್ಲಿ ಇರುತ್ತಾರೆ. ದೇಶವಾಸಿಗಳ ಯಶೋಗಾಥೆಯನ್ನು ಇದು ತಿಳಿಸುತ್ತದೆ. ಎಲ್ಲ ವಯೋಮಾನದ ಜನತೆ ಇದರಲ್ಲಿದ್ದಾರೆ. ಬೇಟಿ ಬಚಾವೊ ಬೇಟಿ ಪಡಾವೊ ಆಂದೋಲನವಾಗಿರಬಹುದು, ಸ್ವಚ್ಛ ಭಾರತ ಅಭಿಯಾನವಾಗಿರಬಹುದು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಇರಬಹುದು, ಖಾದಿಯ ಮೇಲಿನ ಪ್ರೀತಿ ಇರಬಹುದು, ಪರಿಸರದ ಕಾಳಜಿ ಇರಬಹುದು, ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪವಾದ ಬಳಿಕ ಜನಾಂದೋಲನವಾಗಿ ಹೊರಹೊಮ್ಮಿವೆ. ಇದು ಜನರಿಂದ ಸಾಧ್ಯವಾಗಿದೆ.
ನಾನು ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಜತೆಗೆ ಮನ್ ಕೀ ಬಾತ್ ಮಾಡಿದಾಗ ಇಡೀ ಜಗತ್ತಿನಲ್ಲಿ ಸುದ್ದಿಯಾಗಿತ್ತು. ಮನ್ ಕೀ ಬಾತ್ ಎಂದರೆ ನನಗೆ ಜನರ ಒಳ್ಳೆಯ ಗುಣಗಳನ್ನು ಆರಾಧಿಸುವ ವ್ರತವಾಗಿದೆ. ನನ್ನ ಮಾರ್ಗದರ್ಶಕರೊಬ್ಬರಿದ್ದರು. ಅವರ ಹೆಸರು ಲಕ್ಷ್ಮಣ ರಾವ್ ಜೀ. ಅವರನ್ನು ವಕೀಲ್ ಸಾಬ್ ಎಂದು ಕರೆಯುತ್ತಿದ್ದೆವು. ಅವರು ಹೇಳುತ್ತಿದ್ದರು-ನಾವು ನಮ್ಮವರ ಹಾಗೂ ನಮ್ಮ ವಿರೋಧಿಗಳ ಒಳ್ಳೆಯ ಗುಣಗಳನ್ನು ಕಾಣಬೇಕು. ಈ ಮಾತು ನನಗೆ ಪ್ರೇರಣೆ ನೀಡಿದೆ. ಮನ್ ಕೀ ಬಾತ್ ಎಲ್ಲರ ಒಳ್ಳೆಯ ಗುಣಗಳನ್ನು ಸ್ಮರಿಸುವ ವೇದಿಕೆಯಾಗಿದೆ.
ಪ್ರಧಾನಿಯಾದ ಬಳಿಕ ಜನರಿಗೆ ಹತ್ತಿರವಾಗಲು ಮನ್ ಕೀ ಬಾತ್
ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಜನ ಸಾಮಾನ್ಯರೊಡನೆ ಬೆರೆಯುತ್ತಿದ್ದೆ. ಅದು ಸ್ವಾಭಾವಿಕವೂ ಆಗಿತ್ತು. ಸಿಎಂ ಆದವರಿಗೆ ನಿತ್ಯ ಅಂಥ ಸಂದರ್ಭ ಸಿಗುತ್ತದೆ. ಆದರೆ 2014ರಲ್ಲಿ ದಿಲ್ಲಿಗೆ ಬಂದ ಬಳಿಕ ನನಗೆ ಇಲ್ಲಿನ ಪರಿಸ್ಥಿತಿ ಭಿನ್ನ ಎಂಬ ಅರಿವಾಯಿತು. ಹುದ್ದೆಯ ಜವಾಬ್ದಾರಿಯ ಹೊರೆಗಳು, ಶಿಷ್ಟಾಚಾರದ ಭಾರ, ಭದ್ರಯಾ ವ್ಯವಸ್ಥೆಯ ಕಟ್ಟುಪಾಡುಗಳ ಪರಿಣಾಮ ನನಗೆ ಜನ ಸಾಮಾನ್ಯರ ಜತೆಗೆ ಬೆರೆಯಲು ಸಾಧ್ಯವಾಗುತ್ತಿರಲಿಲ್ಲ. ಸ್ಥಿತಿ-ಪರಿಸ್ಥಿತಿಯ ಬಂಧನಗಳು ಆರಂಭದಲ್ಲಿ ನನಗೆ ಕಸಿವಿಸಿ ತರುವಂತಿತ್ತು. ನನ್ನ ದೇಶವಾಸಿಗಳ ಜತೆಗೆ ಬಾಂಧವ್ಯವನ್ನು ಕಡಿದುಕೊಂಡು ಇರಲು ನನಗೆ ಸಾಧ್ಯವೇ ಇರಲಿಲ್ಲ.
ಪದಭಾರ-ಶಿಷ್ಟಾಚಾರವನ್ನು ಮೀರಿ ಜನರನ್ನು ತಲುಪಲು ನನಗೆ ಮನ್ ಕೀ ಬಾತ್ ವೇದಿಕೆಯಾಗಿ ಪರಿಣಮಿಸಿದೆ. ಪ್ರತಿ ವಾರ ಸಾವಿರಾರು ಪತ್ರಗಳನ್ನು ಓದುವಾಗ ಜನರಿಂದ ದೂರವಾಗಿದ್ದೇನೆ ಎಂಬ ಭಾವನೆ ಸುಳಿಯುವುದಿಲ್ಲ. ಮನ್ ಕೀ ಬಾತ್ ನನ್ನ ಆಧ್ಯಾತ್ಮಿಕ ಯಾತ್ರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.