ನವ ದೆಹಲಿ: ಮನ್ ಕೀ ಬಾತ್‌ನ 100ನೇ ವಿಶೇಷ ಸಂಚಿಕೆಯ ಸಂದರ್ಭ ಯುನೆಸ್ಕೊದ ಪ್ರಧಾನ ನಿರ್ದೇಶಕಿ ಔಡ್ರೆ ಅಜೌಲೆ ಅವರು (Audrey Azoulay) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮನ್ ಕೀ ಬಾತ್‌ನಲ್ಲಿ ಪ್ರಧಾನಿಯವರಿಗೆ ಸಂದೇಶ ರವಾನಿಸಿದ ಅವರು, ಈ ಅದ್ಭುತ ಬಾನುಲಿ ಕಾರ್ಯಕ್ರಮದ ಪಯಣದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಮನ್ ಕೀ ಬಾತ್‌ನ 100ನೇ ಸಂಚಿಕೆಯಲ್ಲಿ ಭಾಗವಹಿಸಲು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ಯುನೆಸ್ಕೊ ಮತ್ತು ಭಾರತ ದೀರ್ಘಕಾಲೀನ ಸಮಾನಾಂತರ ಇತಿಹಾಸವನ್ನು ಒಳಗೊಂಡಿದೆ. ಶಿಕ್ಷಣ, ವಿಜ್ಞಾನ, ಸಂಸ್ಕೃತಿ, ಮಾಹಿತಿ ವಲಯದಲ್ಲಿ ಜಂಟಿಯಾಗಿ ಪ್ರಬಲ ಸಹಭಾಗಿತ್ವವನ್ನು ಹೊಂದಿದ್ದೇವೆ. 2030ರ ವೇಳೆಗೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಬಗ್ಗೆ ಯುನೆಸ್ಕೊ ಕಾರ್ಯಪ್ರವೃತ್ತವಾಗಿದೆ ಈ ಗುರಿಯನ್ನು ಸಾಧಿಸಲು ವಿಶ್ವದ ಅತಿ ದೊಡ್ಡ ಜನಸಂಖ್ಯೆ ಇರುವ ರಾಷ್ಟ್ರವಾಗಿರುವ ಭಾರತ ಏನಾದರೂ ಸಲಹೆ ನೀಡಬಹುದೇ ಎಂದು ಯುನೆಸ್ಕೊದ ಪ್ರಧಾನ ನಿರ್ದೇಶಕಿ ಔಡ್ರೆ ಅಜೌಲೆ ಅವರು ವಿವರಿಸಿದರು.
ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದ್ದು, ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವದ ಕಾಲದಲ್ಲಿ ಪ್ರತಿಯೊಬ್ಬ ಭಾರತೀಯರನ್ನೂ ಸಕಾರಾತ್ಮಕವಾಗಿ ಪ್ರೇರೇಪಿಸಿದೆ. 50ಕ್ಕೂ ಹೆಚ್ಚು ಭಾಷೆಗಳಲ್ಲಿ ಮನ್ ಕೀ ಬಾತ್‌ನ ಕೋಟ್ಯಂತರ ಕೇಳುಗರು ಇದ್ದಾರೆ. ರೇಡಿಯೋ ಕಾರ್ಯಕ್ರಮವು ಹೀಗೆ ಕೋಟ್ಯಂತರ ಜನರನ್ನು ಒಂದುಗೂಡಿಸುತ್ತಿರುವುದು ವಿಶೇಷ ಎಂದು ಔಡ್ರೆ ಅಜೌಲೆ ಅವರು ಹೇಳಿದರು.
ಶತಮಾನದ ಹಿಂದೆ ರೇಡಿಯೊ ಸಂಶೋಧನೆಯಾದಂದಿನಿಂದ ಜನಜೀವನದ ಮೇಲೆ ಗಣನೀಯ ಪ್ರಭಾವ ಬೀರಿದೆ. ಸಾಂಪ್ರದಾಯಿಕ ಎಎಂ ಮತ್ತು ಎಫ್‌ಎಂ ತರಂಗಾಂತರಗಳ ತನಕ ಜನಜೀವನದ ಅವಿಭಾಜ್ಯ ಅಂಶವಾಗಿದೆ. ಡಿಜಿಟಲ್ ರೇಡಿಯೊ, ವೆಬ್ ರೇಡಿಯೊ, ಪಾಡ್ ಕಾಸ್ಟ್‌ಗಳ ಮೂಲಕ ಆಧುನಿಕ ಸ್ವರೂಪವನ್ನೂ ಗಳಿಸಿವೆ. ಇಂಥ ಸಂದರ್ಭದಲ್ಲಿ ಮನ್ ಕೀ ಬಾತ್ ಬಾನುಲಿಯ ಸಾಧ್ಯತೆಯನ್ನು ಹೆಚ್ಚಿಸಿ ಮಾದರಿಯಾಗಿದೆ ಎಂದು ಔಡ್ರೆ ಅಜೌಲೆ ವಿವರಿಸಿದರು.