ಬೆಂಗಳೂರು: ನಮ್ಮ ಮೆಟ್ರೊ (Namma Metro) ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ರಸ್ತೆ ಮಧ್ಯದಿಂದ ಭೂಕುಸಿತ ನಡೆದ ಪ್ರಕರಣ ಗುರುವಾರ ವರದಿಯಾಗಿದೆ. ನಾಗವಾರ ಮುಖ್ಯ ರಸ್ತೆಯ ಉಮರ್ ನಗರ ಬಳಿ ರಸ್ತೆ ಕುಸಿದಿದೆ. ತಕ್ಷಣ ಮೆಟ್ರೊ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಾಂಕ್ರಿಟ್ ಹಾಕಿ ಹೊಂಡವನ್ನು ಮುಚ್ಚಿದ್ದಾರೆ.
ನಾಗವಾರ ತನಕದ ಮೆಟ್ರೊ ಕಾಮಗಾರಿಗಾಗಿ ಸುರಂಗ ಮಾರ್ಗವನ್ನು ಮೆಟ್ರೊದ ಯಂತ್ರಗಳು ನಡೆಸುತ್ತಿವೆ. ಈ ವೇಳೆ ಭೂಕುಸಿತ ಉಂಟಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಸ್ತೆ ಏಕಾಏಕಿ ಕುಸಿದ ಕಾರಣ ಸ್ಥಳೀಯರು ಆತಂಕಗೊಂಡಿದ್ದರು. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ತಕ್ಷಣ ಪೊಲೀಸರು ರಸ್ತೆಯನ್ನು ಬಂದ್ ಮಾಡಿ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.
ನಮ್ಮ ಮೆಟ್ರೋ ಕಾಮಗಾರಿಯ ವೇಳೆ ಉಂಟಾಗುತ್ತಿರುವ ಅಲುಗಾಟದಿಂದ ಅಕ್ಕ ಪಕ್ಕದ ಕಟ್ಟಡಗಳಲ್ಲೂ ಬಿರುಕು ಮೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಮಗಾರಿ ನಡೆಯುವ ವೇಳೆ ನಿರು ತುಂಬಿಕೊಂಡು ರಸ್ತೆಯಲ್ಲಿ ಕುಸಿತ ಉಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳಕ್ಕೆ ಮೆಟ್ರೊ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಂಕ್ರಿಟ್ ಹಾಕಿ ರಸ್ತೆಯನ್ನು ಮುಚ್ಚಿದ್ದಾರೆ.
ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?
ಸರ್ಜಾಪುರದಿಂದ ಹೆಬ್ಬಾಳದವರೆಗಿನ 36.5 ಕಿ.ಮೀ ಉದ್ದದ 3ಎ ಮೆಟ್ರೋ ಮಾರ್ಗವು (Bengaluru Metro) 2031ರ ವೇಳೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
(ಬಿಎಂಆರ್ ಸಿಎಲ್) ತಿಳಿಸಿದೆ.
ಇದನ್ನೂ ಓದಿ: Nitin Gadkari : ಕೆಟ್ಟದಾಗಿರುವ ಹೈವೆಗಳಿಗೆ ಟೋಲ್ ಶುಲ್ಕ ಕಟ್ಟಬೇಡಿ; ನಿತಿನ್ ಗಡ್ಕರಿ ಸೂಚನೆ
18 ತಿಂಗಳ ನಂತರ ಬಿಎಂಆರ್‌ಸಿಎಲ್ ಕಳೆದ ವಾರ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿದೆ. ಈ ಯೋಜನೆಗೆ 26,405 ಕೋಟಿ ರೂ. ವೆಚ್ಚವಾಗಲಿದೆ ಮತ್ತು 28 ನಿಲ್ದಾಣಗಳನ್ನು ಹೊಂದಿರುತ್ತದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ. ಆಗ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರು 2022-23ರ ಬಜೆಟ್ ಭಾಷಣದಲ್ಲಿ ಅನೇಕ ಯೋಜನೆಗಳ ಘೋಷಣೆ ಮಾಡಿದ್ದರು. ವಿವರವಾದ ಯೋಜನಾ ವರದಿಯನ್ನು ಸಲ್ಲಿಸಲು 8 ತಿಂಗಳ ಗಡುವನ್ನು ನಿಗದಿಪಡಿಸಿದ್ದರು. ಆಗ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಬಿಎಂಆರ್‌ಸಿಎಲ್ ರೀನಾ ಕನ್ಸಲ್ಟಿಂಗ್ ಕಂಪನಿಗೆ ಗುತ್ತಿಗೆ ನೀಡಿತ್ತು. ಆಗ ಯೋಜನಾ ವೆಚ್ಚ 16,000 ಕೋಟಿ ರೂ. ಆಗಿತ್ತು. ಆದರೆ ಅದು ಈಗ ಹೆಚ್ಚಾಗಿದೆ ಎನ್ನಲಾಗಿದೆ.
ವರದಿ ಪ್ರಕಾರ ಈ ಯೋಜನೆಯು ಕೋರಮಂಗಲ 2ನೇ ಬ್ಲಾಕ್‌ನಿಂದ ಪಶುವೈದ್ಯಕೀಯ ಕಾಲೇಜಿನವರೆಗೆ 14.4 ಕಿ.ಮೀ ಅಂಡರ್ ಗ್ರೌಂಡ್ ಪ್ರದೇಶದಲ್ಲಿ 11 ನಿಲ್ದಾಣಗಳನ್ನು ಹೊಂದಿರುತ್ತದೆ. 22.1 ಕಿ.ಮೀ ಎತ್ತರದ ಕಾರಿಡಾರ್‌ನಲ್ಲಿ 17 ನಿಲ್ದಾಣಗಳನ್ನು ಹೊಂದಿರುತ್ತದೆ. ಈ ನಿಲ್ದಾಣ ಸರ್ಜಾಪುರದಿಂದ ಕೋರಮಂಗಲ 2ನೇ ಬ್ಲಾಕ್ ಅನ್ನು ಸಂಪರ್ಕಿಸುತ್ತದೆ. ನಂತರ ಪಶುವೈದ್ಯಕೀಯ ಕಾಲೇಜಿನಿಂದ ಹೆಬ್ಬಾಳದವರೆಗೆ ಅಂಡರ್ ಗ್ರೌಂಡ್ ಮಾರ್ಗದಿಂದ ಮುಂದುವರಿಯುತ್ತದೆ ಎನ್ನಲಾಗಿದೆ. ಈ ಮಾರ್ಗವು 2031ರಲ್ಲಿ 6.21 ಲಕ್ಷ ದೈನಂದಿನ ಪ್ರಯಾಣಿಕರನ್ನು ಹೊಂದುವ ನಿರೀಕ್ಷೆ ವ್ಯಕ್ತವಾಗಿದೆ. 2041ರಲ್ಲಿ 7.2 ಲಕ್ಷ, 2051ರಲ್ಲಿ 8.51 ಲಕ್ಷ, ಹಾಗೂ 2061ರ ವೇಳೆಗೆ 9.5 ಲಕ್ಷ ಪ್ರಯಾಣಿಕರನ್ನು ಹೊಂದಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಮೆಟ್ರೋ ಮಾರ್ಗದ ನಿರ್ಮಾಣಕ್ಕಾಗಿ ಒಟ್ಟು 5400 ಮರಗಳನ್ನು ಕತ್ತರಿಸಲಾಗಿದೆ. ಆದರೆ ಅವುಗಳಲ್ಲಿ ಅರ್ಧದಷ್ಟು ಮರಗಳನ್ನು ಬೇರೆ ಕಡೆ ಕಸಿ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಮೆಟ್ರೋ 3ಎ ಮಾರ್ಗವು 8 ಇಂಟರ್ ಚೇಂಜ್‌ಗಳನ್ನು ಹೊಂದಿದ್ದು, ಸರ್ಜಾಪುರ, ಕಾರ್ಮಲರಾಮ್, ಇಬ್ಲೂರು, ಅಗರ, ಡೈರಿ ಸರ್ಕಲ್, ಶಾಂತಿನಗರ, ಕೆಆರ್ ಸರ್ಕಲ್ ಮತ್ತು ಹೆಬ್ಬಾಳದಲ್ಲಿ ಇದು ನಡೆಯಲಿದೆ. ಅಲ್ಲದೇ ಈ ಮಾರ್ಗವು 4 ನಿಲ್ದಾಣಗಳಲ್ಲಿ ಇತರ ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸುತ್ತದೆ. ಡೇರಿ ಸರ್ಕಲ್‌ನಲ್ಲಿ ಹಂತ 3ಎ ಲೈನ್ ಪಿಂಕ್ ಲೈನ್ ನ ಡೇರಿ ಸರ್ಕಲ್ ನಿಲ್ದಾಣವನ್ನು ಸಂಪರ್ಕಿಸುತ್ತದೆ. ಕೆ ಆರ್ ವೃತ್ತದಲ್ಲಿ ಪರ್ಪಲ್ ಲೈನ್‌ನ ಸರ್ ಎಂ ವಿ ಸ್ಟೇಷನ್ ಅನ್ನು ಹಾಗೂ ಇಬ್ಲೂರು ಮತ್ತು ಹೆಬ್ಬಾಳದಲ್ಲಿ ಬ್ಲೂಲೈನ್ ಅದೇ ನಿಲ್ದಾಣಗಳನ್ನು, ಕಾರ್ಮಲರಾಮ್‌ನಲ್ಲಿ ರೈಲು ಮಾರ್ಗಗಳೊಂದಿಗೆ ಈ ಮಾರ್ಗ ಸಂಪರ್ಕಿಸುತ್ತದೆ ಎನ್ನಲಾಗಿದೆ.