ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ನಿಂದ 10 ಕೋಟಿ ರೂ.ಗಳನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಜೈಲಿನಲ್ಲಿರುವ ಎಎಪಿ ನಾಯಕ ಸತ್ಯೇಂದರ್ ಜೈನ್ (Satyendar Jain) ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಜೈನ್ ಮತ್ತು ತಿಹಾರ್ ಜೈಲಿನ ಮಾಜಿ ಡಿಜಿ ಸಂದೀಪ್ ಗೋಯೆಲ್ ಅವರು ತಿಹಾರ್ ನಿಂದ ಸುಲಿಗೆ ದಂಧೆ ನಡೆಸುತ್ತಿದ್ದರು ಮತ್ತು ಉನ್ನತ ಮಟ್ಟದ ಕೈದಿಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಆಡಳಿತಾರೂಢ ಅಪ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಈ ವರ್ಷದ ಆರಂಭದಲ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಸತ್ಯೇಂದರ್ ಜೈನ್ ವಿರುದ್ಧದ ಸುಲಿಗೆ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಅನುಮತಿ ನೀಡಿದ್ದರು. ಸುಲಿಗೆ ಆರೋಪಗಳ ಬಗ್ಗೆ ತನಿಖೆ ನಡೆಸಲು ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಕೋರಿ ಬರೆದ ಪತ್ರದಲ್ಲಿ, ಜೈನ್ ಅವರು ತಿಹಾರ್ ಜೈಲಿನಿಂದ ಉನ್ನತ ಮಟ್ಟದ ಸುಲಿಗೆ ದಂಧೆಯನ್ನು ನಡೆಸುತ್ತಿದ್ದಾರೆ. ಜೈಲಿನಲ್ಲಿ ಐಷಾರಾಮಿಯಾಗಿ ಬದುಕು ನಡೆಸಲು ಸುಕೇಶ್ ಚಂದ್ರಶೇಖರ್ ನಿಂದ 10 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಸಿಬಿಐ ಕಳೆದ ವರ್ಷ ನವೆಂಬರ್ನಲ್ಲಿ ಬರೆದಿತ್ತು.
ದೆಹಲಿಯ ವಿವಿಧ ಜೈಲುಗಳಾದ ತಿಹಾರ್, ರೋಹಿಣಿ ಮತ್ತು ಮಂಡೋಲಿಯಲ್ಲಿ ಆರಾಮವಾಗಿ ವಾಸಿಸಲು ಅನುಕೂಲವಾಗುವಂತೆ ಜೈನ್ ಗೆ ವೈಯಕ್ತಿಕವಾಗಿ ಅಥವಾ ತನ್ನ ಸಹಚರರ ಮೂಲಕ 2018-21ರ ಅವಧಿಯಲ್ಲಿ ವಿವಿಧ ಕಂತುಗಳಲ್ಲಿ ಹಣವನ್ನು ನೀಡಿದ್ದೇನೆ ಎಂದು ಸುಕೇಶ್ ಹೇಳಿಕೊಂಡಿದ್ದಾನೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸತ್ಯೇಂದರ್ ಜೈನ್ ಅವರನ್ನು 2022 ರ ಮೇ ತಿಂಗಳಲ್ಲಿ ಬಂಧಿಸಲಾಯಿತು. ಅವರ ಕೊನೆಯ ಜಾಮೀನು ಅರ್ಜಿಯನ್ನು ಈ ವರ್ಷದ ಮಾರ್ಚ್ನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಾಗುವಂತೆ ಉನ್ನತ ನ್ಯಾಯಾಲಯವು ಅವರಿಗೆ ಸೂಚಿಸಿತು. ಜೈಲಿನ ಸ್ನಾನಗೃಹದಲ್ಲಿ ಬಿದ್ದ ನಂತರ ಅವರಿಗೆ ಮೇ 26, 2023 ರಂದು ಮಧ್ಯಂತರ ವೈದ್ಯಕೀಯ ಜಾಮೀನು ನೀಡಲಾಯಿತು. ಜಾಮೀನು ಅವಧಿಯಲ್ಲಿ, ಅವರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.