ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ನಂದಿನಿ ಹಾಲಿನ ದರವೂ ಏರಿಕೆಯಾಗಿದೆ. ಕರ್ನಾಟಕ ಹಾಲು ಒಕ್ಕೂಟದ (KMF) ನಂದಿನಿ ಹಾಲಿನ ದರಗಳನ್ನು (Nandini milk Price Hike) ಏರಿಸಿ ಆದೇಶ ಹೊರಡಿಸಿತ್ತು. ನಾಳೆಯಿಂದಲೇ ಪರಿಷ್ಕೃತ ಹಾಲಿನ ದರ (Milk Price) ಜಾರಿಯಾಗಲಿದ್ದು, ಯಾವ ಪ್ಯಾಕೆಟ್ಗೆ ಎಷ್ಟು ದರ ಏರಿಕೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ನಂದಿನಿ ಹಾಲಿನ ಲೀಟರ್ಗೆ 2 ರೂ. ಏರಿಕೆ ಮಾಡಲಾಗಿದ್ದು, ಒಂದು ಲೀಟರ್ ಹಾಲಿನ ದರ ನಾಳೆಯಿಂದ 44 ರೂ. ಆಗುತ್ತಿದೆ. ಇಷ್ಟು ದಿನ 1000 ಮಿ.ಲೀ. ಹಾಲು 42 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ನಾಳೆಯಿಂದ 50 ಮಿ.ಲೀ. ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ, ಅದರ ದರ 2 ರೂ.ಗಳನ್ನು ಸೇರಿಸಿ ಮಾರಾಟ ಮಾಡಲಾಗುತ್ತದೆ.
ಹಾಲಿನ ಪರಿಷ್ಕೃತ ದರ ಪಟ್ಟಿ
- ಟೋನ್ಡ್ ಹಾಲಿನ ಬೆಲೆ 500 ಮಿ.ಮೀಗೆ 22 ರೂ. ಇದ್ದದ್ದು 24 ರೂ. ಆಗಲಿದೆ. 1 ಲೀ. 42ರಿಂದ 44ಕ್ಕೆ ಏರಿಕೆ.
- ಹೋಮೋಜಿನೈಸ್ಟ್ ಟೋನ್ಡ್ ಹಾಲು ಅರ್ಧ ಲೀ. 22 ರೂ.ನಿಂದ 24ಕ್ಕೆ ಏರಿಕೆ, ಒಂದು ಲೀ. ಹಾಲಿನ ದರ 43ರಿಂದ 45 ರೂ. ಏರಿಕೆ
- ಹೋಮೋಜಿನೈಸ್ಟ್ ಹಸುವಿನ ಹಾಲು ಅರ್ಧ ಲೀ. 24ರಿಂದ 26 ರೂ.ಗೆ ಏರಿಕೆ, 1 ಲೀ. ಹಾಲು 46ರಿಂದ 48ರೂ.ಕ್ಕೆ ಏರಿಕೆ.
- ಸ್ಪೆಷಲ್ ಅರ್ಧ ಲೀಟರ್ ಹಾಲು 25ರಿಂದ 27 ರೂ.ಗೆ ಏರಿಕೆ, 1 ಲೀಟಲ್ 48 ರಿಂದ 50 ರೂ.
- ಶುಭಂ ಹಾಲು ಅರ್ಧ ಲೀ.ಗೆ 25 ಇದ್ದದ್ದು 27 ರೂ. ಏರಿಕೆ. 1 ಲೀಟರ್ ಬೆಲೆ 48 ರಿಂದ 50 ರೂ.ಗೆ ಏರಿಕೆ.
- ಸಮೃದ್ಧಿ ಹಾಲು ಅರ್ಧ ಲೀ.ಗೆ 26ರಿಂದ 28 ರೂ., 1 ಲೀ.ಗೆ 51 ರಿಂದ 53ಕ್ಕೆ ಹೆಚ್ಚಳ.
- ಹೋಮೋಜಿನೈನ್ಸ್ ಶುಭಂ ಹಾಲಿನ ಅರ್ಧ ಲೀಟರ್ ಬೆಲೆ 25ರಿಂದ 27 ರೂ., 1 ಲೀಟರ್ ಬೆಲೆ 49 ರಿಂದ 51ಕ್ಕೆ ಹೆಚ್ಚಳ.
- ಸಂತೃಪ್ತಿ ಹಾಲಿನ ಬೆಲೆ ಅರ್ಧ ಲೀಟರ್ 28ರಿಂದ 30 ರೂ.ಗೆ, 1 ಲೀಟರ್ ಬೆಲೆ 55 ರಿಂದ 57ಕ್ಕೆ ಹೆಚ್ಚಳ.
- ಶುಭಂ ಗೋಲ್ಡ್ ಹಾಲು ಅರ್ಧ ಲೀ.ಗೆ 26ರಿಂದ 28ಕ್ಕೆ ಏರಿಕೆ., 1 ಲೀಟರ್ ಹಾಲಿನ ಬೆಲೆ 49ರಿಂದ 51ಗೆ ಏರಿಕೆ.
- ಡಬಲ್ ಟೋನ್ಡ್ ಹಾಲಿನ ಬೆಲೆ ಅರ್ಧ ಲೀಟರ್ಗೆ 21 ರೂ.ನಿಂದ 23ಕ್ಕೆ, 1 ಲೀಟರ್ ಬೆಲೆ 41 ರೂ.ರಿಂದ 43ಕ್ಕೆ ಏರಿಕೆ.
Milk Price: ಹಾಲಿನ ಬೆಲೆ ಏರಿಕೆ ಮಾಡಿಲ್ಲ, ಹೆಚ್ಚುವರಿ 50 ಎಂ.ಎಲ್.ಗೆ 2 ರೂ. ದರ ನಿಗದಿ: ಸಿಎಂ ಸಮರ್ಥನೆ
ಬೆಂಗಳೂರು: ನಂದಿನಿ ಹಾಲಿನ ಪ್ಯಾಕೇಟ್ಗಳಲ್ಲಿ ಹಾಲಿನ ಪ್ರಮಾಣವನ್ನು 50 ಮಿ.ಲೀ. ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2 ರೂ. ದರ ನಿಗದಿಪಡಿಸಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆಯೇ ವಿನಃ ಹಾಲಿನ ಬೆಲೆಯಲ್ಲಿ (Milk Price) ಏರಿಕೆ ಮಾಡಿಲ್ಲ ಎಂದು ಹೇಳುವ ಮೂಲಕ ಬೆಲೆ ಏರಿಕೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಹಾಲಿನ ಬೆಲೆ ಏರಿಕೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಇನ್ನು ಮುಂದೆ ಅರ್ಧಲೀಟರ್ ಹಾಲಿನ ಪ್ಯಾಕೇಟ್ನಲ್ಲಿ 550 ಮಿ.ಲೀ. ಹಾಲು ಹಾಗೂ ಲೀಟರ್ ಪ್ಯಾಕೇಟ್ನಲ್ಲಿ 1,050 ಮಿ.ಲೀ. ಹಾಲು ಸಿಗಲಿದೆ. ಹಾಲು ಸಂಗ್ರಹಣಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ರೈತರು ಹೆಚ್ಚುವರಿಯಾಗಿ ತರುತ್ತಿರುವ ಹಾಲನ್ನು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಕೆಎಂಎಫ್ ಸಂಸ್ಥೆ ಪ್ಯಾಕೇಟ್ಗಳಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಳ ಮಾಡುವ ತೀರ್ಮಾನ ಮಾಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Milk Price: ಜನರ ಬದುಕಿನೊಂದಿಗೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟ; ಹಾಲಿನ ದರ ಏರಿಕೆಗೆ ವಿಜಯೇಂದ್ರ ಆಕ್ರೋಶ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಈ ಬಾರಿ ಹಾಲಿನ ಉತ್ಪಾದನೆ ಶೇ.15 ಹೆಚ್ಚಳವಾಗಿದೆ. ಹಿಂದಿನ ವರ್ಷಗಳಲ್ಲಿ ಈ ವೇಳೆಗೆ ನಿತ್ಯ ಸರಾಸರಿ 90 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಈ ಬಾರಿ ಸರಾಸರಿ 99 ಲಕ್ಷ ಲೀಟರ್ಗೆ ಏರಿಕೆಯಾಗಿದೆ. ಹೀಗೆ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ಹಾಲನ್ನು ರೈತರಿಂದ ಖರೀದಿ ಮಾಡಬೇಕು, ಯಾವುದೇ ಕಾರಣಕ್ಕೂ ಅವರಿಂದ ಹಾಲು ಪಡೆಯಲು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಒಂದು ಲೀಟರ್ ಹಾಲಿನ ಪ್ಯಾಕೇಟ್ಗೆ ಹೆಚ್ಚುವರಿಯಾಗಿ 50 ಮಿ.ಲೀ ಹಾಲನ್ನು ಸೇರಿಸಿ, ಈ ಹೆಚ್ಚುವರಿ ಹಾಲಿನ ಬೆಲೆ 2 ರೂಪಾಯಿಯನ್ನು ಮಾತ್ರ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ. ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ ಎಂದು ಹೇಳಿದ್ದಾರೆ.
ಈವರೆಗೆ 1,000 ಮಿ.ಲೀ ಹಾಲಿಗೆ 42 ರೂ. ಹಾಗೂ 500 ಮಿ.ಲೀ ಹಾಲಿಗೆ ರೂ.22 ದರವನ್ನು ನಿಗದಿಪಡಿಸಲಾಗಿತ್ತು, ಇನ್ನು ಮುಂದೆ 1,050 ಮಿ.ಲೀ ಹಾಗೂ 550 ಮಿ.ಲೀ ಹಾಲಿನ ಪ್ಯಾಕೇಟ್ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಅದಕ್ಕೆ ಕ್ರಮವಾಗಿ 44 ರೂ. ಹಾಗೂ 24 ರೂ. ದರ ನಿಗದಿಪಡಿಸಲಾಗುತ್ತದೆ. ಇದು ನಾಡಿನ ಲಕ್ಷಾಂತರ ಹೈನುಗಾರರ ಹಿತದೃಷ್ಟಿಯಿಂದ ಕೆ.ಎಂ.ಎಫ್ ಸಂಸ್ಥೆಯು ತೆಗೆದುಕೊಂಡ ನಿರ್ಣಯವಾಗಿದ್ದು, ಹೆಚ್ಚುವರಿಯಾಗಿ ಉದ್ಪಾದನೆಯಾಗುತ್ತಿರುವ ಹಾಲನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ಸದುದ್ದೇಶವನ್ನು ಹೊಂದಿದೆ.
ಈಗಾಗಲೇ ಗರಿಷ್ಠ ಪ್ರಮಾಣದ ಹಾಲನ್ನು ಹಾಲಿನ ಪೌಡರ್ ತಯಾರಿಕೆ ಮಾಡುವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ನಿತ್ಯ ಸುಮಾರು 30 ಲಕ್ಷ ಲೀಟರ್ ಹಾಲು ಪೌಡರ್ ತಯಾರಿಕೆಗಾಗಿ ಬಳಸಲ್ಪಡುತ್ತಿದ್ದು, 250 ಮೆಟ್ರಿಕ್ ಟನ್ ಹಾಲಿನ ಪೌಡರ್ ತಯಾರಿಸಲಾಗುತ್ತಿದೆ. ಇದು ಹಾಲಿನ ಪೌಡರ್ಗೆ ಇರುವ ಬೇಡಿಕೆಗೆ ಅನುಗುಣವಾಗಿದೆ.
ಇದನ್ನೂ ಓದಿ | Milk Price: ನಂದಿನಿ ಹಾಲು ದರ ಏರಿಕೆ ಶಾಕ್; ಅರ್ಧ ಲೀಟರ್ಗೂ ₹2, ಒಂದು ಲೀಟರ್ಗೂ ₹2 ಬೆಲೆ ಏರಿಕೆ!
ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ರಾಜ್ಯದಲ್ಲಿ ನಿತ್ಯ ಸರಾಸರಿ 72 ಲಕ್ಷ ಲೀಟರ್ಗಳಷ್ಟು ಹಾಲು ಸಂಗ್ರಹವಾಗುತ್ತಿತ್ತು. ಈ ಹಿಂದೆ ಹಾಲಿನ ಬೆಲೆಯಲ್ಲಿ 3 ರೂ. ಹೆಚ್ಚಳ ಮಾಡಿ ಆ ಹೆಚ್ಚುವರಿ ಹಣವನ್ನು ರೈತರಿಗೆ ನೇರವಾಗಿ ವರ್ಗಾಯಿಸುವ ಪ್ರೋತ್ಸಾಹದಾಯಕ ಕ್ರಮ ಕೈಗೊಂಡಿದ್ದರಿಂದ ಹೈನೋದ್ಯಮವು ಹಿಂದಿಗಿಂತ ಲಾಭ ತಂದುಕೊಡುವ ಉದ್ಯೋಗವಾಯಿತು. ಜತೆಗೆ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿದೆ. ಈ ಎರಡು ಕಾರಣಗಳಿಂದಾಗಿ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಇಂದು ನಿತ್ಯ ಸರಿಸುಮಾರು 1 ಕೋಟಿ ಲೀಟರ್ ತಲುಪುವ ಹಂತಕ್ಕೆ ಬಂದಿದೆ. ಹೀಗೆ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲನ್ನು ರೈತರಿಂದ ಖರೀದಿಸಿ, ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ಮಾರಾಟ ಮಾಡುವ ಸಲುವಾಗಿ ಕೆ.ಎಂ.ಎಫ್ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.