ಬೆಂಗಳೂರು: ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ವಿಶ್ವ ಕಪ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ ಅವರು ಶ್ರೀಲಂಕಾದ ದಿಗ್ಗಜ ಲಸಿತ್ ಮಾಲಿಂಗ ಅವರನ್ನು ಹಿಂದಿಕ್ಕಿ ಎಲೈಟ್ ಬೌಲರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರು ಬರೆದುಕೊಂಡಿದ್ದಾರೆ. ಟ್ರಿನಿಡಾಡ್ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ 2024 ಸೂಪರ್ 8 ಪಂದ್ಯದಲ್ಲಿ ಅವರು ಈ ದಾಖಲೆ ಬರೆದಿದ್ದಾರೆ.
Starc Supreme ⚡️
— cricket.com.au (@cricketcomau) June 21, 2024
Details: https://t.co/QxJtsZHo8W pic.twitter.com/Y1IFJYP5Ni
ಸೂಪರ್ 8 ಹಂತದ ಪಂದ್ಯದಲ್ಲಿ ನಡೆದಿರುವ 2 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 8 ವಿಕೆಟ್ಗಳಿಮದ ಸೋತರೆ, ಅಫ್ಘಾನಿಸ್ತಾನವು ಭಾರತದ ವಿರುದ್ಧ 47 ರನ್ಗಳಿಂದ ಸೋತಿದೆ. ಬಾಂಗ್ಲಾದೇಶವೂ ಆಸ್ಟ್ರೇಲಿಯಾಕ್ಕೆ ಮಣಿಸಿದೆ. ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 2021 ರ ಚಾಂಪಿಯನ್ ಆಸ್ಟ್ರೇಲಿಯಾ ನಜ್ಮುಲ್ ಹುಸೇನ್ ಶಾಂಟೊ ಅವರ ಬಾಂಗ್ಲಾದೇಶವನ್ನು ಎದುರಿಸಿತು.
ಇದನ್ನೂ ಓದಿ: Team India : ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ ಪ್ರಕಟ
ಮಳೆಯಿಂದ ಅಡಚಣೆಗೊಳಗಾದ ಆ ಪಂದ್ಯದಲ್ಲಿ ಆಸೀಸ್ ತಂಡ ಉತ್ತಮ ಪ್ರದರ್ಶನ ನೀಡಿತು. ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಸಾಧನೆ ಮಾಡಿದರೆ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಬ್ಯಾಟಿಂಗ್ನಲ್ಲಿ ತಮ್ಮ ಪ್ರಭಾವ ತೋರಿದರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಗ್ರೂಪ್ 1ರಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಭಾರತ ಮೊದಲ ಗೆಲುವಿನ ಬಳಿಕ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾವನ್ನು ಎದುರಿಸಬೇಕಾಗಿದೆ. ಈ ಎಲ್ಲದರ ನಡುವೆ ಮಿಚೆಲ್ ಸ್ಟಾರ್ಕ್ ಅಮೋಘ ಸಾಧನೆಯೊಂದನ್ನು ಮಾಡಿದ್ದಾರೆ.
ಮಿಚೆಲ್ ಸ್ಟಾರ್ಕ್ ಹೊಸ ಸಾಧನೆ
ಸೂಪರ್ 8 ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ಬಾಂಗ್ಲಾ ಇನಿಂಗ್ಸ್ನಲ್ಲಿ ತಮ್ಮ ಮೂರನೇ ಎಸೆತಕ್ಕೆ ತಂಜಿದ್ ಹಸನ್ ಅವರನ್ನು ಔಟ್ ಮಾಡಿದರು. ಈ ವೇಳೆ ಅವರು 2014ರ ಟಿ20 ವಿಶ್ವಕಪ್ ವಿಜೇತ ನಾಯಕ ಲಸಿತ್ ಮಾಲಿಂಗ ಅವರನ್ನು ಬೌಲಿಂಗ್ ಸಾಧನೆಯಲ್ಲಿ ಹಿಮ್ಮೆಟ್ಟಿಸಿದರು. ಚಾಂಪಿಯನ್ಸ್ ಟ್ರೋಫಿ ಹೊರತುಪಡಿಸಿ 50 ಓವರ್ ಮತ್ತು 20 ಓವರ್ಗಳ ವಿಶ್ವ ಟೂರ್ನಿಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಸ್ಟಾರ್ಕ್ ಪಾತ್ರರಾದರು.
ಮಿಚೆಲ್ ಸ್ಟಾರ್ಕ್ ವಿಶ್ವಕಪ್ನಲ್ಲಿ ತಮ್ಮ 95 ನೇ ವಿಕೆಟ್ ಪಡೆದರು ಮತ್ತು ಈ ಪಂದ್ಯಕ್ಕೆ ಮೊದಲು ಅವರು ಲಸಿತ್ ಮಾಲಿಂಗ ಅವರೊಂದಿಗೆ 94 ವಿಕೆಟ್ಗಳ ಸಾಧನೆ ಸರಿಗಟ್ಟಿದ್ದರು. ತಂಜಿದ್ ಹಸನ್ ಅವರ ವಿಕೆಟ್ ಟಿ 20 ವಿಶ್ವಕಪ್ಗಳಲ್ಲಿ ಸ್ಟಾರ್ಕ್ ಅವರ 30 ನೇ ವಿಕೆಟ್ ಆಗಿದೆ. ಐಸಿಸಿ ವೈಟ್-ಬಾಲ್ ಸ್ಪರ್ಧೆಗಳಲ್ಲಿ ಅವರ ಸರಾಸರಿಯೂ ಮಾಲಿಂಗ ಅವರಿಗಿಂತ ಉತ್ತಮವಾಗಿದೆ.
ಎಡಗೈ ವೇಗಿ 21.11 ಸರಾಸರಿಯನ್ನು ಹೊಂದಿದ್ದರೆ, ಶ್ರೀಲಂಕಾದ ಮಾಜಿ ವೇಗಿ 21.74 ಸರಾಸರಿ ಹೊಂದಿದ್ದರು. ಮಿಚೆಲ್ ಸ್ಟಾರ್ಕ್ ತಮ್ಮ 52 ನೇ ಪಂದ್ಯದಲ್ಲಿ 95 ನೇ ವಿಶ್ವಕಪ್ ವಿಕೆಟ್ ಪಡೆದರು ಮತ್ತು ಈ ಟಿ 20 ವಿಶ್ವಕಪ್ ಅಂತ್ಯದ ವೇಳೆಗೆ ಶತಕ ಪೂರ್ಣಗೊಳಿಸುವ ಅವಕಾಶವಿದೆ. ಆಸ್ಟ್ರೇಲಿಯಾ 3ನೇ ಟಿ20 ವಿಶ್ವಕಪ್ ಫೈನಲ್ ತಲುಪಿದರೆ ಸ್ಟಾರ್ಕ್ ಇನ್ನು ಮುಂದೆ 4 ಪಂದ್ಯಗಳನ್ನು ಆಡಲಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧ ಆಸೀಸ್ ತನ್ನ ಮುಂದಿನ ಪಂದ್ಯವನ್ನು ಗೆದ್ದರೆ, ಜೂನ್ 23 ರಂದು ಅರ್ನೋಸ್ ವೇಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ನಂತರ ಸ್ಟಾರ್ಕ್ ಇನ್ನೂ 2 ಪಂದ್ಯಗಳನ್ನು ಆಡುವುದು ಖಚಿತ. ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಟಾಪ್ 5 ಪಟ್ಟಿಯಲ್ಲಿ, ಸ್ಟಾರ್ಕ್ 77 ಪಂದ್ಯಗಳಿಂದ 92 ವಿಕೆಟ್ಗಳನ್ನು ಪಡೆದಿರುವ ಶಕೀಬ್ ಅಲ್ ಹಸನ್ ಅವರೊಂದಿಗೆ ಏಕೈಕ ಸಕ್ರಿಯ ಕ್ರಿಕೆಟಿಗರಾಗಿದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್ಗಳು
- ಮಿಚೆಲ್ ಸ್ಟಾರ್ಕ್ 95 ವಿಕೆಟ್, 65 ವಿಕೆಟ್ (ಏಕದಿನ), 30 ವಿಕೆಟ್ (ಟಿ20)
- ಲಸಿತ್ ಮಾಲಿಂಗ 94 ವಿಕೆಟ್, 56 ವಿಕೆಟ್ (ಏಕದಿನ), 38 ವಿಕೆಟ್ (ಟಿ20)
- ಶಕೀಬ್ ಅಲ್ ಹಸನ್ 92 ವಿಕೆಟ್, 43 ವಿಕೆಟ್ (ಏಕದಿನ), 49 ವಿಕೆಟ್ (ಟಿ20)
- ಟ್ರೆಂಟ್ ಬೌಲ್ಟ್ 87 ವಿಕೆಟ್, 53 ವಿಕೆಟ್ (ಏಕದಿನ), 34 ವಿಕೆಟ್ (ಟಿ20)
- ಮುತ್ತಯ್ಯ ಮುರಳೀಧರನ್ 79 ವಿಕೆಟ್, 68 ವಿಕೆಟ್ (ಏಕದಿನ), 11 ವಿಕೆಟ್ (ಟಿ20)