ಚೆನ್ನೈ: ಐಪಿಎಲ್ನ ಯಶಸ್ವಿ ನಾಯಕ ಹಾಗೂ ಐದು ಬಾರಿಯ ಚಾಂಪಿಯನ್ ಮಹೇಂದ್ರ ಸಿಂಗ್ ಧೋನಿ (MS Dhoni) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕತ್ವ ತೊರೆದಿದ್ದಾರೆ. ನೂತನ ನಾಯಕನಾಗಿ ಋತುರಾಜ್ ಗಾಯಕ್ವಾಡ್ (Ruturaj Gaikwad) ಆಯ್ಕೆಯಾಗಿದ್ದಾರೆ. 2019 ರಿಂದ ಐಪಿಎಲ್ನಲ್ಲಿ ಆಡುತ್ತಿರುವ ಋತುರಾಜ್, ಐಪಿಎಲ್ 2021 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.
ಋತುರಾಜ್ ಗಾಯಕ್ವಾಡ್ ಐಪಿಎಲ್ನ ಒಂದು ಋತುವಿನಲ್ಲಿ 635 ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ಆಟಗಾರನಾಗಿದ್ದಾನೆ. ಏಷ್ಯನ್ ಗೇಮ್ಸ್ನಲ್ಲಿ ಗಾಯಕ್ವಾಡ್ ಮೂರು ಟಿ 20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಅಲ್ಲಿ ಭಾರತ ಟ್ರೋಫಿ ಗೆದ್ದಿದೆ. ದೇಶೀಯ ಕ್ರಿಕೆಟ್ನಲ್ಲಿ ಅವರು ತಮ್ಮ ರಾಜ್ಯ ತಂಡ ಮಹಾರಾಷ್ಟ್ರವನ್ನು ಮುನ್ನಡೆಸಿದ್ದಾರೆ.
ಧೋನಿ ನಾಯಕತ್ವದಿಂದ ಇಳಿದ ಮಾಹಿತಿಯನ್ನು ಐಪಿಎಲ್ ಮೂಲಗಳು ಖಚಿತಪಡಿಸಿವೆ. “ಐಪಿಎಲ್ 2024 ಪ್ರಾರಂಭವಾಗುವ ಮೊದಲು ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಋತುರಾಜ್ ಗಾಯಗ್ವಾಡ್ಗೆ ಹಸ್ತಾಂತರಿಸಿದ್ದಾರೆ. ಋತುರಾಜ್ 2019 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಋತುರಾಜ್ ಐಪಿಎಲ್ನಲ್ಲಿ 52 ಪಂದ್ಯಗಳನ್ನು ಆಡಿದ್ದಾರೆ ಎಂದು ಸಿಎಸ್ಕೆ ಪ್ರಕಟಣೆ ತಿಳಿಸಿದೆ.
ಎಂಎಸ್ ಧೋನಿ 2022 ರಲ್ಲಿ ರವೀಂದ್ರ ಜಡೇಜಾಗೆ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರ ಮಾಡಿದ್ದರು. ಆ ವೇಳೆಯಿಂದಲೇ ಸಿಎಸ್ಕೆ ಧೋನಿಯ ಉತ್ತರಾಧಿಕಾರಿಯನ್ನು ಹುಡುಕುವ ಯೋಜನೆ ಮಾಡಿತ್ತು. ಆದರೆ ಅದರಲ್ಲಿ ಸಿಎಸ್ಕೆ ವಿಫಲಗೊಂಡಿತ್ತು. ಅಪೇಕ್ಷಣೀಯ ಫಲಿತಾಂಶಗಳನ್ನು ಪಡೆಯಲು ವಿಫಲವಾದಾಗ ಜಡೇಜಾ ಅವರಿಂದ ಧೋನಿ ಮತ್ತೆ ನಾಯಕತ್ವವನ್ನು ವಾಪಸ್ ಪಡೆದುಕೊಂಡಿದ್ದರು. ಐಪಿಎಲ್ನ 2023 ರಲ್ಲಿ ಧೋನಿ ಸಿಎಸ್ಕೆ ತಂಡವನ್ನು ಐದನೇ ಪ್ರಶಸ್ತಿ ಕಡೆಗೆ ಮುನ್ನಡೆಸಿದ್ದರು. ಆದಾಗ್ಯೂ, 2024 ರ ಆವೃತ್ತಿಯು ಧೋನಿಯ ಅಂತಿಮ ಸೀಸನ್ ಎಂದು ನಿರೀಕ್ಷಿಸಲಾಗಿರುವುದರಿಂದ ನಾಯಕತ್ವ ಬದಲಾವಣೆ ಅಚ್ಚರಿಯೇನಲ್ಲ.
ಇದನ್ನೂ ಓದಿ : IPL 2024: ಕಪ್ ಗೆಲ್ಲುವ ತಂಡವನ್ನು ಹೆಸರಿಸಿದ ಎಬಿಡಿ; ಈ ಹಿಂದಿನ 2 ಭವಿಷ್ಯ ಕೂಡ ನಿಜವಾಗಿತ್ತು!
ಐದು ಟ್ರೋಫಿ ಗೆದ್ದ ಧೋನಿ
ಧೋನಿ ನಾಯಕತ್ವದಲ್ಲಿ ಸಿಎಸ್ಕೆ ಐದು ಐಪಿಎಲ್ ಪ್ರಶಸ್ತಿಗಳು ಮತ್ತು ಎರಡು ಚಾಂಪಿಯನ್ಸ್ ಲೀಗ್ ಟಿ 20 ಪ್ರಶಸ್ತಿಗಳನ್ನು ಗೆದ್ದಿದೆ. ಅದೇ ರೀತಿ ಪಂದ್ಯಾವಳಿಯ ಇತಿಹಾಸದಲ್ಲಿ ಅವರು ಆಡಿದ 14 ಋತುಗಳಲ್ಲಿ ಅತ್ಯಂತ ಸ್ಥಿರವಾದ ತಂಡವಾಗಿದೆ. ಹೀಗಾಗಿ ಧೋನಿಯ ನಿವೃತ್ತಿಯೊಂದಿಗೆ ಸಿಎಸ್ಕೆ ತಂಡದ ಗತ ವೈಭವ ಅಂತ್ಯವಾಗಿದೆ. ಧೋನಿ ಐಪಿಎಲ್ನಲ್ಲಿ 226 ಪಂದ್ಯಗಳಲ್ಲಿ ಸಿಎಸ್ಕೆ ತಂಡವನ್ನು ಮುನ್ನಡೆಸಿದ್ದಾರೆ. ಇದು ನಾಯಕನೊಬ್ಬನಿಗೆ ಗರಿಷ್ಠ ಪಂದ್ಯ. ಇದರಲ್ಲಿಯೂ 133 ಪಂದ್ಯಗಳನ್ನು ಗೆದ್ದಿದೆ.
ಧೋನಿ ವಿಕೆಟ್ ಕೀಪರ್ ಆಗಿದ್ದು ಯಶಸ್ಸು ಸಾಧಿಸಿದ್ದಾರೆ. ಮುಂದಿನ ಆವೃತ್ತಿಯಲ್ಲೂ ಅವರು ಸಿಎಸ್ಕೆ ವಿಕೆಟ್ಕೀಪರ್ ಆಗಿ ಆಡಲಿದ್ದಾರೆ. ಹೀಗಾಗಿ ಋತುರಾಜ್ ಗಾಯಕ್ವಾಡ್ ಅವರಿಗೆ ಹೆಚ್ಚಿನ ನೆರವು ಸಿಗಲಿದೆ.