ಬೆಂಗಳೂರು: ಟಿ 20 ವಿಶ್ವಕಪ್ 2024 ವಿಜೇತ ಭಾರತೀಯ ತಂಡದ ಸದಸ್ಯರು ಇತ್ತೀಚೆಗೆ ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಮ್ನಲ್ಲಿ (wankhede stadium) ಸಂಭ್ರಮಾಚರಣೆ ಮಾಡಿದ್ದರು. ಆದರೆ, ಈ ಐತಿಹಾಸಿಕ ಸ್ಟೇಡಿಯಮ್ ಇನ್ನು ಮುಂದೆ ಇತಿಹಾಸದ ಪುಸ್ತಕ ಸೇರುವ ಎಲ್ಲ ಸಾಧ್ಯತೆಗಳಿವೆ. ಯಾಕೆಂದರೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು (Mumbai Cricket Association) ಒಂದು ಲಕ್ಷ ಮಂದಿ ಪ್ರೇಕ್ಷಕರ ದೊಡ್ಡ ಸ್ಟೇಡಿಯಮ್ ಒಂದನ್ನು ನಿರ್ಮಿಸಲು ಮುಂದಾಗಿದೆ. ಹೀಗಾದರೆ ವಾಂಖೆಡೆ ಮೂಲೆಗುಂಪಾಗುವುದು ಖಚಿತ.
ಟಿ20 ವಿಜಯೋತ್ಸವ ಬಳಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರರು ಸ್ವಾಗತಿಸಿದ್ದರು.
ಮಹಾರಾಷ್ಟ್ರ ಮೂಲದ ಎಲ್ಲಾ ಕ್ರಿಕೆಟಿಗರನ್ನು ರಾಜ್ಯ ಸರ್ಕಾರವು ಸನ್ಮಾನಿಸಿತ್ತು. ಆಗ ಫಡ್ನವೀಸ್ ಸಿಎಂ ಏಕನಾಥ್ ಶಿಂಧೆ ಬಳಿ ರಾಜ್ಯದಲ್ಲಿ ಮತ್ತೊಂದು ವಿಶ್ವ ದರ್ಜೆಯ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವ ಆಲೋಚನೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದರು. ಇದು ಒಂದು ಲಕ್ಷಕ್ಕೂ ಹೆಚ್ಚು ಆಸನ ಸಾಮರ್ಥ್ಯವನ್ನು ಹೊಂದಿರಲಿದೆ. ಇದು ದೇಶದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ಒಂದಾಗಲಿದೆ.
ಥಾಣೆ ಜಿಲ್ಲೆಯ ಅಮಾನೆ ಗ್ರಾಮದಲ್ಲಿ 50 ಎಕರೆ ಭೂಮಿಗಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್ಡಿಸಿಗೆ) ನೀಡುವ ಮುಕ್ತ ಟೆಂಡರ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಈಗಾಗಲೇ ಅರ್ಜಿ ಸಲ್ಲಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ. ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ನಂತರ ಔಪಚಾರಿಕ ಯೋಜನೆ ಸಿದ್ಧಗೊಳ್ಳಲಿದೆ.
ವಾಂಖೆಡೆಯಿಂದ 68 ಕಿ.ಮೀ ದೂರದ ಸ್ಟೇಡಿಯಮ್
ಥಾಣೆಯಿಂದ 26 ಕಿ.ಮೀ ಮತ್ತು ವಾಂಖೆಡೆ ಕ್ರೀಡಾಂಗಣದಿಂದ 68 ಕಿ.ಮೀ ದೂರದಲ್ಲಿರುವ ಅಮಾನೆಯಲ್ಲಿ ಸುಮಾರು 50 ಎಕರೆ ತೆರೆದ ಭೂಮಿಯಲ್ಲಿ ಹರಡಿರುವ 1 ಲಕ್ಷ ಸಾಮರ್ಥ್ಯದ ಬೃಹತ್ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಎಂಸಿಎ ನೋಡುತ್ತಿದೆ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್ಡಿಸಿ) ಕರೆದ ಮುಕ್ತ ಟೆಂಡರ್ ಅನ್ನು ಎಂಸಿಎ ಭರ್ತಿ ಮಾಡಿದೆ. ಸಂಘವು ಮಹಾರಾಷ್ಟ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ” ಎಂದು ವರದಿ ತಿಳಿಸಿದೆ.
ಅಮೋಲ್ ಕಾಳೆ ಕನಸಿನ ಯೋಜನೆ
ದಿವಂಗತ ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಅವರು ಫಡ್ನವೀಸ್ ಅವರ ಆಪ್ತ ಸ್ನೇಹಿತರಾಗಿದ್ದರು. ಹೊಸ ಕ್ರಿಕೆಟ್ ಅಖಾಡವನ್ನು ನಿರ್ಮಿಸುವುದು ಅವರ ಕನಸಿನ ಯೋಜನೆಯಾಗಿತ್ತು ಎಂದು ವರದಿಯಾಗಿದೆ. ವಿಶೇಷವೆಂದರೆ, ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಲ್ಲಿ ಭಾಗವಹಿಸಿದ ಸ್ವಲ್ಪ ಸಮಯದ ನಂತರ ಹೃದಾಯಘಾತದಿಂದ ನಿಧನ ಹೊಂದಿದ್ದರು.
ಇದನ್ನೂ ಓದಿ: Sourav Ganguly : ಸೌರವ್ ಗಂಗೂಲಿಗೆ 52ನೇ ಜನ್ಮದಿನ; ದಾದಾನ ಅಭೂತಪೂರ್ವ ವೃತ್ತಿ ಜೀವನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ
ಈ ಕ್ರೀಡಾಂಗಣವು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಅವರ ಕನಸಿನ ಯೋಜನೆಯಾಗಿತ್ತು. ಇದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಬಹುದಾದ ಎರಡು ಮೈದಾನಗಳು ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ” ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ, ಮುಂಬೈನ ವಾಂಖೆಡೆ ಕ್ರೀಡಾಂಗಣ ಮತ್ತು ನವೀ ಮುಂಬೈನ ಡಾ.ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಎಂಸಿಎ ಅಡಿಯಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿದ ಎರಡು ಸ್ಥಳಗಳಾಗಿವೆ. ಬಿಕೆಸಿ ಮೈದಾನ ಮತ್ತು ಡೆಕ್ಕನ್ ಜಿಮ್ಖಾನಾ ಮೈದಾನಗಳು ಸಹ ಅಂತರರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸಿವೆ. ಆದರೆ ಆಧುನಿಕ ಕ್ರಿಕೆಟ್ಗೆ ಪೂರಕವಾಗಿ ಸೌಲಭ್ಯಗಳು ಇಲ್ಲ.