Site icon Vistara News

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

IPL 2024

ಮಲ್ಲಾನ್​ಪುರ: ಅಶುತೋಷ್​ ಶರ್ಮಾ (61 ರನ್​, 28 ಎಸೆತ, 2 ಫೋರ್​, 7 ಸಿಕ್ಸರ್​), ಶಶಾಂಕ್ ಸಿಂಗ್​ (25 ಎಸೆತ, 41 ರನ್​, 2 ಫೋರ್​, 3 ಸಿಕ್ಸರ್​ ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿದ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟರ್​ಗಳ ತೀವ್ರ ವೈಫಲ್ಯದ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್​ ತಂಡ ಐಪಿಎಲ್​ 2024ನೇ (IPL 2024) ಆವೃತ್ತಿಯಲ್ಲಿ ಮತ್ತೊಂದು ಸೋಲಿಗೆ ಒಳಗಾಗಿದೆ. ಮುಂಬಯಿ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 9 ರನ್​ಗಳ ವಿರೋಚಿತ ಸೋಲಿಗೆ ಒಳಗಾಗಿದೆ. ಪಂಜಾಬ್ ತಂಡಕ್ಕೆ ಇದು ಐದನೇ ಸೋಲಾಗಿದೆ. ಇದೇ ವೇಳೆ ಮುಂಬಯಿ ತಂಡ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಆಡಿರುವ ಏಳು ಪಂದ್ಯಗಳಲ್ಲಿ ಮುಂಬಯಿಗೆ ದೊರೆತ ಮೂರನೇ ಗೆಲುವು ಇದು.

ಇಲ್ಲಿನ ಮಹಾರಾಜಾ ಯಾದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

ಮೊದಲು ಬ್ಯಾಟ್ ಮಾಡಿದ ಮುಂಬಯಿ ಪರ ಸೂರ್ಯಕುಮಾರ್​ ಅರ್ಧ ಶತಕ (78 ರನ್​) ಬಾರಿಸಿದರು. ಆದರೆ ಅವರ ಸ್ಕೋರ್ ಹೆಚ್ಚು ವೇಗವಾಗಿರಲಿಲ್ಲ. ರೋಹಿತ್ ಶರ್ಮಾ 36 ರನ್ ಬಾರಿಸಿದರೆ ತಿಲಕ್ ವರ್ಮಾ 34 ರನ್​ ಗಳಿಸಿದರು. ಹಾರ್ದಿಕ್ ಪಾಂಡ್ಯ 10 ರನ್ ಗೆ ಸೀಮಿತಗೊಂಡರೆ ಟಿಮ್ ಡೇವಿಡ್​ 14 ರನ್ ಬಾರಿಸಿದರು. ಆರಂಭಿಕ ಆಟಗಾರ ಇಶಾನ್ ಕಿಶನ್​ 8 ರನ್ ಬಾರಿಸಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು.

ಅಶುತೋಷ್​ ಮಿಂಚಿನ ಬ್ಯಾಟಿಂಗ್

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ತಂಡ ಆರಂಭ ಹೀನಾಯವಾಗಿತ್ತು. 14 ರನ್​ಗಳಿಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಕರ್ರನ್​ 6 ರನ್ ಬಾರಿಸಿದರೆ, ಪ್ರಭ್​ಸಿಮ್ರಾನ್ ಸಿಂಗ್ ಶೂನ್ಯಕ್ಕೆ ಔಟಾದರು. ರೀಲಿ ರೊಸ್ಸೊ ಹಾಗೂ ಲಿಯಾಮ್ ಲಿವಿಂಗ್​ಸ್ಟನ್​ ತಲಾ ಒಂದು ರನ್ ಬಾರಿಸಿ ಔಟಾದರು. ಹರ್ಪ್ರೀತ್ ಸಿಂಗ್​ 13 ರನ್​ಗೆ ಸೀಮಿತಗೊಂಡರು. ಈ ವೇಳೆ ಶಶಾಂಕ್ ಸಿಂಗ್ ವಿಕೆಟ್​ ಪತನವಾಗುವುದನ್ನು ತಪ್ಪಿಸಿ 41 ರನ್ ಬಾರಿಸಿದರು. ಆದರೆ ಸ್ಫೋಟಕ ಬ್ಯಾಟರ್​ ಜಿತೇಶ್ ಶರ್ಮಾ 9 ರನ್​ಗೆ ಸೀಮಿತಗೊಂಡರು.

77 ರನ್​ಗೆ 6 ವಿಕೆಟ್​ಕಳೆದುಕೊಂಡ ಪಂಜಾಬ್​ 100 ರನ್ ಒಳಗೆ ಆಲ್​ಔಟ್ ಆಗುವುದಾಗಿ ಭಾವಿಸಲಾಗಿತ್ತು. ಆದರೆ ಅಶುತೋಷ್​ ಸ್ಟೈಲಿಶ್​ ಬೌಂಡರಿ ಹಾಗೂ ಸಿಕ್ಸರ್​ಗಳ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಿದರು. ಪಂಜಾಬ್ ಗೆಲ್ಲುತ್ತದೆ ಎಂಬ ಹಂತಕ್ಕೆ ಹೋಯಿತು. ಈ ವೇಳೆ ಅಶುತೋಷ್​ ಔಟಾದರು. ಜತೆಗೆ ಹರ್ಪ್ರೀತ್ ಬ್ರಾರ್ ಕೂಡ ಔಟಾದರು. ಕೊನೆಯಲ್ಲಿ ರಬಾಡ ಗೆಲ್ಲಿಸುವರೆಂಬ ಆಶಾಭಾವ ಉಂಟಾಗಿತ್ತು. ಆದರೆ ಅವರು ರನ್ಔಟ್ ಆದರು.

ಮುಂಬಯಿ ಪರ ಬುಮ್ರಾ ಹಾಗೂ ಕೋಜಿ ತಲಾ 3 ವಿಕೆಟ್​ ಉರುಳಿಸಿದರು.

Exit mobile version