Site icon Vistara News

Musical Event : ಇಂದು ಬೆಂಗಳೂರಿನಲ್ಲಿ ಮ್ಯೂಸಿಕಲ್‌ ನೈಟ್‌; ವೈದೇಹಿ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮ

Vydehi foundation Shruti Raghavendran

ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ವೈದೇಹಿ ಮಹಿಳಾ ಮತ್ತು ಮಕ್ಕಳ ಪ್ರತಿಷ್ಠಾನವು (Vydehi Foundation) ಶನಿವಾರ (ಅಕ್ಟೋಬರ್‌ 28) ಸುರಭಿ ಸಿರಿ (Surabhi Siri) ಎಂಬ ಸಂಗೀತ ಕಾರ್ಯಕ್ರಮವನ್ನು (A Grand Musical Night) ಆಯೋಜಿಸಿದೆ. ಬೆಂಗಳೂರಿನ ಕುಮಾರಪಾರ್ಕ್‌ ಬಳಿ ಇರುವ ಗಾಂಧಿ ಭವನದಲ್ಲಿ (Gandhi Bhavan) ಶನಿವಾರ ಸಂಜೆ 3.30ರಿಂದ ರಾತ್ರಿ 8 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಎಚ್‌.ಐವಿ ಮತ್ತು ಕ್ಯಾನ್ಸರ್‌ ಪೀಡಿತರ ನೆರವಿಗಾಗಿ ಧನಸಂಗ್ರಹದ ಉದಾತ್ತ ಆಶಯವನ್ನು ಇಟ್ಟುಕೊಂಡು ಈ ಲೈವ್‌ ಮ್ಯೂಸಿಕಲ್‌ ಇವೆಂಟ್‌ ಆಯೋಜಿಸಲಾಗಿದೆ. ನಾಡಿನ ಖ್ಯಾತ ಸಂಗೀತಗಾರರು ಇಲ್ಲಿ ಕಾರ್ಯಕ್ರಮ (Musical Event) ನಡೆಸಿಕೊಡಲಿದ್ದಾರೆ. ವಿಸ್ತಾರ ನ್ಯೂಸ್‌ ಈ ಕಾರ್ಯಕ್ರಮಕ್ಕೆ ಮಾಧ್ಯಮ ಸಹಯೋಗವನ್ನು ನೀಡಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರು

ಖ್ಯಾತ ಗಾಯಕರಾದ ಶ್ರುತಿ ರಾಘವೇಂದ್ರನ್‌, ಶ್ವೇತಾ ಪ್ರಭು, ಡಾ. ವಾಣಿಶ್ರೀ ರವೀಶ್‌, ಶ್ರೀನಿವಾಸ ಮೂರ್ತಿ, ಕುಮಾರನ್‌ ಮುತ್ತುಮಾರನ್‌, ಮೋಹನ್‌ ಕಬ್ಬೂರ್‌ ಅವರ ಜತೆ ಸಂಗೀತ ವಾದ್ಯಗಳಲ್ಲಿ ಪುಣ್ಯೇಶ್‌, ಉಮಾಪ್ರಸಾದ್‌, ಮಾರುತಿ ಪ್ರಸಾದ್‌, ರವಿಚಂದ್ರ ಮತ್ತು ಕೇಶವ್‌ ಅವರು ಸಹಕರಿಸಲಿದ್ದಾರೆ. ಎಲ್‌. ಗುರುರಾಜ್‌ ಅವರು ಈ ಕಾರ್ಯಕ್ರಮದ ನಿರೂಪಕರಾಗಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳು ಇವರು

ಸಂಗೀತ ಕಾರ್ಯಕ್ರಮದ ನಡುವೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಎಂ. ಜೈನ್‌, ಕಿದ್ವಾಯಿ ಹಾಸ್ಪಿಟಲ್‌ನ ಡಾ. ವೀರೇಶ್‌, ನ್ಯಾಯವಾದಿಗಳಾದ ಹರೀಶ್‌ ಎಂ.ಟಿ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉಮಾ ಆರ್ಯ ಅವರ ಕನಸಿನ ಕೂಸು ವೈದೇಹಿ

ರಾಜ್ಯದ ಜನಪ್ರಿಯ ನ್ಯಾಯವಾದಿಗಳಾಗಿ ಗಮನ ಸೆಳೆದಿರುವ ಉಮಾ ಆರ್ಯ (Uma Arya) ಅವರು ವೈದೇಹಿ ಮಹಿಳಾ ಮತ್ತು ಮಕ್ಕಳ ಪ್ರತಿಷ್ಠಾನದ ಸಾರಥಿಯಾಗಿದ್ದಾರೆ. ಪ್ರತಿಯೊಂದು ಪ್ರಕರಣದ ಆಳವಾದ ಅಧ್ಯಯನ ಮತ್ತು ನಿಖರ ದಾಖಲೆ ಸಂಗ್ರಹ ಹಾಗೂ ಅದನ್ನು ಅತ್ಯದ್ಭುತವಾಗಿ ನ್ಯಾಯಾಧೀಶರ ಮುಂದೆ ಪ್ರಸ್ತುತಪಡಿಸುವ ಕಲೆಗಾರಿಕೆ ಹೊಂದಿರುವ ಉಮಾ ಅರ್ಯ ಅವರು ಸಾಮಾಜಿಕ ಕಳಕಳಿಯುಳ್ಳ ಹೆಣ್ಣು ಮಗಳು. ಹೀಗಾಗಿಯೇ ಅವರು ಉಮಾ ಆರ್ಯ ಅವರು ವೈದೇಹಿ ಎನ್ನುವ ಮಹಿಳಾ ಮತ್ತು ಮಕ್ಕಳ ಬಗ್ಗೆ ಕಳಕಳಿ ಹೊಂದಿರುವ ಸರಕಾರೇತರ ಸಂಘಟನೆಯನ್ನು 2022ರಲ್ಲಿ ಆರಂಭಿಸಿದ್ದರು.

ಸಂಕಷ್ಟಕ್ಕೆ ಒಳಗಾದ ಮಕ್ಕಳನ್ನು ಪ್ರಧಾನ ವಾಹಿನಿಗೆ ಕರೆತರುವುದು, ಮಹಿಳೆಯರನ್ನು ಹಲವು ಕೌಶಲಗಳ ಮೂಲಕ ಸಬಲೀಕರಣ ಮಾಡುವುದು ಈ ಸಂಘಟನೆಯ ಮುಖ್ಯ ಉದ್ದೇಶ. ಮಹಿಳೆಯರಿಗಾಗಿ ಸ್ವಸಹಾಯ ಸಂಘಟನೆಗಳು, ಪರಿಸರ ಜಾಗೃತಿ ಕ್ಯಾಂಪ್‌ಗಳನ್ನು ಆಯೋಜಿಸಿದ್ದಾರೆ.

ಇದನ್ನೂ ಓದಿ : World Music Day 2023: ಸಂಗೀತಕ್ಕೆ ಒಂದು ದಿನ, ಆಲಿಸುತ್ತಾ ಮನಸು ಹೂಬನ!

ಈಗ ಆಯೋಜಿಸಿರುವ ಸುರಭಿ ಸಿರಿ ಕಾರ್ಯಕ್ರಮದ ಮೂಲಕ ಸಂಗ್ರಹವಾಗುವ ಮೊತ್ತವನ್ನು ಎಚ್‌.ಐವಿ ಮತ್ತು ಕ್ಯಾನ್ಸರ್‌ ಪೀಡಿತರ ನೆರವಿಗಾಗಿ ಬಳಸುವ ಉದ್ದೇಶವನ್ನು ಹೊಂದಿದೆ. ಸಂಗೀತಾಸಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹಿಸಬೇಕು ಎಂದು ವೈದೇಹಿ ಸಂಘಟನೆ ಮನವಿ ಮಾಡಿದೆ.

Exit mobile version