ಬೆಂಗಳೂರು: ಇಂದು ಮುಂಜಾನೆ ಪೀಕ್ ಅವರ್‌ನಲ್ಲಿ ರಾಜಧಾನಿಯ ನಮ್ಮ ಮೆಟ್ರೋ ಸಾರಿಗೆಯ (Namma Metro) ನೇರಳೆ ಲೈನ್‌ನಲ್ಲಿ (purple line) ವಿಳಂಬ ಹಾಗೂ ಸಾಕಷ್ಟು ವ್ಯತ್ಯಯ ಉಂಟಾಗಿದೆ. ಶಾಲೆ, ಕಾಲೇಜು, ಕಚೇರಿಗಳಿಗೆ ಹೊರಟಿದ್ದ ಸಾವಿರಾರು ಜನ ಪ್ರಯಾಣಿಕರು ಇದರಿಂದ ತೊಂದರೆ ಅನುಭವಿಸಿದರು.
“ಬೈಯಪ್ಪನಹಳ್ಳಿ ಹಾಗೂ ಗರುಡಾಚಾರ್ ಪಾಳ್ಯದ ನಡುವೆ ತಾಂತ್ರಿಕ ಸಮಸ್ಯೆಯಿಂದಾಗಿ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಮೆಟ್ರೋ ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಾಸ ಮಾಡಲಾಗಿದೆ. ಸಮಸ್ಯೆಯನ್ನು ಪರಿಹರಿಸಲು ತಾಂತ್ರಿಕ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ತೊಂದರೆಗಾಗಿ ವಿಷಾದಿಸುತ್ತೇವೆʼʼ ಎಂದು ಮೆಟ್ರೋ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ಮೆಟ್ರೋ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಜನಸಾಗರವೇ ಸೇರಿದ್ದು, ಪ್ರಯಾಣ ಮುಂದುವರಿಸಲೂ ಆಗದೇ, ಹೊರಗೆ ಬರಲೂ ಆಗದೇ ಪೇಚಾಡುತ್ತಿದ್ದಾರೆ. 15 ನಿಮಿಷಕ್ಕೊಂದು, ಅರ್ಧ ಗಂಟೆಗೊಂದು ರೈಲುಗಳು ಬರುತ್ತಿವೆ. ಮುಂಜಾನೆ 8 ಗಂಟೆಗೇ ಬಂದವರು 9.30 ಆದರೂ ಇನ್ನೂ ನಿಲ್ದಾಣದಲ್ಲೆ ಇರುವುದು ಕಂಡುಬಂತು.
ನೇರಳೆ ಲೈನ್‌ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯ ಪರಿಣಾಮ ಗ್ರೀನ್ ಲೈನ್ ಮೇಲೂ ಉಂಟಾಗಿದೆ. ಅಲ್ಲೂ ಸಾಕಷ್ಟು ಸೇವೆಗಳ ವ್ಯತ್ಯಯ ಉಂಟಾಗಿದೆ.
ಮೆಜೆಸ್ಟಿಕ್‌ನಲ್ಲಿ 9 ಗಂಟೆಯ ಬಳಿಕ ʼಇನ್ನು ಎರಡು ಗಂಟೆಗಳ ಕಾಲ ಒಳಪ್ರವೇಶ ಇಲ್ಲʼ ಎಂಬ ಪ್ರಕಟಣೆಯನ್ನು ನೀಡಲಾಗಿದೆ. ಮೆಟ್ರೋ ಸೇವೆಯನ್ನೇ ಅವಲಂಬಿಸಿದವರು ಇಂದು ರಿಕ್ಷಾ ಅಥವಾ ಬಸ್ ಹುಡುಕುತ್ತ ತೆರಳಬೇಕಾಗಿ ಬಂತು. ಅನ್ಯ ನಿಲ್ದಾಣಗಳಿಗೆ ಹೋಗಬೇಕಾದವರು ಸಹ ವಿಳಂಬದಿಂದ ಬೇಸತ್ತು ಮೆಜೆಸ್ಟಿಕ್‌ನಲ್ಲಿ ಇಳಿದು ಬೇರೆ ಸಾರಿಗೆಗಾಗಿ ತೆರಳಿದರು. ಹೀಗಾಗಿ ಮೆಜೆಸ್ಟಿಕ್ ನಿಲ್ದಾಣದ ಹೊರಗೂ ಸಾಕಷ್ಟು ದಟ್ಟಣೆ ಉಂಟಾಯಿತು.
ಇದನ್ನೂ ಓದಿ: DK Shivakumar: ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ಮೆಟ್ರೋ ಸೇರಿ ವಿವಿಧ ಯೋಜನೆ: ಡಿಕೆಶಿ