Site icon Vistara News

Naxals in Karnataka : ಕುಕ್ಕೆ ಸುಬ್ರಹ್ಮಣ್ಯ ಸಮೀಪ ಮತ್ತೆ ಕಾಣಿಸಿಕೊಂಡ ನಕ್ಸಲರು

naxals in karnataka

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ (Kukke Subramanya) ಸಮೀಪ ನಕ್ಸಲ್​ ಚಟುವಟಿಕೆ (Naxals in Karnataka) ಹೆಚ್ಚಾಗಿದೆ ಎಂಬುದಾಗಿ ವರದಿಯಾಗಿದೆ. ದ.ಕ ಜಿಲ್ಲೆಯ ‌ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.

ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸಣ್ಣದಾಗಿ ಮಳೆಯಾಗುತ್ತಿದ್ದ ಸಂದರ್ಭ ನಕ್ಸಲರು ಭೇಟಿ ನೀದ್ದಾರೆ. ಮೂವರಿದ್ದ ತಂಡ ಐನೆಕಿದು ಗ್ರಾಮದ ಅಶೋಕ್ ಎಂಬವರ ಮನೆಗೆ ಭೇಟಿ ನೀಡಿದ್ದಾರೆ ಎಂಬುದಾಗಿ ವರದಿಯಾಗಿದೆ. ಮನೆಯವರ ಜತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿ ಅವರು ವಾಪಸ್​ ತೆರಳಿದ್ದಾರೆ ಎಂದು ಹೇಳುತ್ತಿದ್ದಾರೆ.

ಮಳೆ ಬರುತ್ತಿದ್ದ ವೇಳೆ ಅಶೋಕ್ ಅವರ ಮನೆಗೆ ಬಂದ ಶಂಕಿತ ನಕ್ಸಲರು ಮೊಬೈಲ್ ಚಾರ್ಜ್ ಮಾಡಿ ಅಲ್ಲಿಂದ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಂದ ಮೂವರ ಬಳಿಯೂ ಶಸ್ತ್ರಾಸ್ತ್ರಗಳಿದ್ದವು ಎಂದು ಹೇಳುತ್ತಿದ್ದಾರೆ.

ವಾರದ ಹಿಂದೆ ಕಾಣಿಸಿಕೊಂಡಿದ್ದರು

ವಾರದ ಹಿಂದೆ ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್‌ ಅಂಗಡಿಗೆ ಶಂಕಿತ ನಕ್ಸಲರು ಬಂದಿದ್ದರು. ಅವರೇ ಮತ್ತೆ ಅಶೋಕ್ ಅವರ ಮನೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಜಿಮಲೆ ಮತ್ತು ಐನೆಕಿದು ನಡುವೆ ಸುಮಾರು 25 ಕಿ.ಮೀ. ಅಂತರವಿದೆ. ಹೀಗಾಗಿ ಅವರು ಮಳೆ ಬಂದ ಕಾರಣ ಅಶೋಕ್​ ಅವರ ಮನೆಗೆ ಬಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Priyanka Jarkiholi : ಪ್ರಿಯಾಂಕ ಜಾರಕಿಹೊಳಿಗೆ ಬಂಡಾಯದ ಬೇಗೆ

ಸುಬ್ರಹ್ಮಣ್ಯ ಭಾಗದಲ್ಲಿ ನಕ್ಸಲ್‌ ನಿಗ್ರಹ ದಳ ನಿರಂತರ ಶೋಧ ಕಾರ್ಯ ನಡೆಸುತ್ತಿದೆ. ಅವರಿಗೆ ಇದುವರೆಗೆ ಯಾವುದೇ ಸುಳಿವು ಲಭಿಸಿಲ್ಲ. ನಕ್ಸಲರು ಭೇಟಿ ನೀಡಿದ ಪ್ರದೇಶ ಕುಮಾರಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿಗೆ ಹತ್ತಿರವಿದೆ. ಅಲ್ಲಿಂದ ಒಂದು ದಾರಿ ಸೋಮವಾರಪೇಟೆಗೆ ಹೋಗುತ್ತದೆ ಹಾಗೂ ಇನ್ನೊಂದು ದಾರಿ ಗಾಳಿಬೀಡು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅದೂ ಅಲ್ಲದೆ, ಸಂಪಾಜೆ ಮೂಲಕ ಕೇರಳದ ಅರಣ್ಯದೊಳಗೆ ಪ್ರವೇಶ ಮಾಡಲು ಅವರಿಗೆ ಅವಕಾಶವಿದೆ.

Exit mobile version