ನವದೆಹಲಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಮಿತಿಯು (NCERT) 12ನೇ ತರಗತಿಯ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕದಲ್ಲಿ (NCERT Textbooks) ಕೆಲ ಬದಲಾವಣೆಗಳನ್ನು ಮಾಡಿದೆ. ಅದರಲ್ಲೂ, ರಾಜಕೀಯ ಶಾಸ್ತ್ರ ಪುಸ್ತಕದಿಂದ ಬಾಬ್ರಿ ಮಸೀದಿ, ಕರಸೇವೆ ಸೇರಿ ಹಲವು ಅಧ್ಯಾಯಗಳನ್ನು ತೆಗೆದುಹಾಕಿದೆ. ಇದು ಈಗ ಚರ್ಚೆಗೂ ಗ್ರಾಸವಾಗಿದೆ.
ಎನ್‌ಸಿಇಆರ್‌ಟಿ ಪಠ್ಯದಲ್ಲಿ ‘ಬಾಬ್ರಿ ಮಸೀದಿ’ ಎಂಬ ಪದವನ್ನು ತೆಗೆದುಹಾಕಲಾಗಿದೆ. ಬಾಬ್ರಿ ಮಸೀದಿಯನ್ನು ಮೂರು ಅಂತಸ್ತಿನ ಗೊಮ್ಮಟ ಎಂದು ಪ್ರಸ್ತಾಪಿಸಲಾಗಿದೆ. ಇನ್ನು ಅಯೋಧ್ಯೆಯ ಕುರಿತ ನಾಲ್ಕು ಪುಟಗಳ ಅಧ್ಯಾಯವನ್ನು ತೆಗೆದುಹಾಕಿದೆ. ಸೋಮನಾಥ ದೇವಾಲಯದಿಂದ ಅಯೋಧ್ಯೆವರೆಗೆ ಎಲ್.ಕೆ.ಅಡ್ವಾಣಿ ಅವರು ಕೈಗೊಂಡ ರಥಯಾತ್ರೆ, ಕರಸೇವೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನೆಲಸಮಗೊಳಿಸಿದ್ದಕ್ಕೆ ಬಿಜೆಪಿ ನಾಯಕರ ವಿಷಾದದ ಹೇಳಿಕೆಗಳನ್ನು ಪಠ್ಯದಿಂದ ಕೈಬಿಡಲಾಗಿದೆ.
ಬಾಬ್ರಿ ಮಸೀದಿ ಉಲ್ಲೇಖ ತೆಗೆದುಹಾಕಿದ ಕುರಿತು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಅವರು ಇಂಡಿಯಾ ಟುಡೇ ಟಿವಿಗೆ ಪ್ರತಿಕ್ರಿಯಿಸಿದ್ದಾರೆ. “ವಿದ್ಯಾರ್ಥಿಗಳು ಏಕೆ ಗಲಭೆ, ಹಿಂಸಾಚಾರ ಸೇರಿ ಹಲವು ನಕಾರಾತ್ಮಕ ಅಂಶಗಳ ಕುರಿತು ಕಲಿಯಬೇಕು. ಗುಜರಾತ್ ಹಿಂಸಾಚಾರ, ಬಾಬ್ರಿ ಮಸೀದಿ ನೆಲಸಮ ಸೇರಿ ಹಲವು ಅಂಶಗಳ ಕುರಿತು ಏಕೆ ಅಧ್ಯಯನ ಮಾಡಬೇಕು. ಅಷ್ಟಕ್ಕೂ, ನಾವು ಪಠ್ಯವನ್ನು ತಯಾರಿಸುವಾಗ ಯಾವುದೇ ಸಿದ್ಧಾಂತಗಳನ್ನು ಅನುಸರಿಸುವುದಿಲ್ಲ. ತಜ್ಞರ ಶಿಫಾರಸಿನಂತೆ ಬದಲಾವಣೆ ಮಾಡಲಾಗಿದೆ” ಎಂದು ತಿಳಿಸಿದರು.
ಬಾಬ್ರಿ ಮಸೀದಿ ಬದಲು ಮೂರು ಅಂತಸ್ತಿನ ಗುಮ್ಮಟ ಎಂದು ಪ್ರಸ್ತಾಪಿಸಿರುವುದು, ಗುಜರಾತ್ ಹಿಂಸಾಚಾರವನ್ನು ಕೈಬಿಟ್ಟಿರುವುದು ಸೇರಿ ಹಲವು ಅಂಶಗಳನ್ನು ಕೈಬಿಟ್ಟಿರುವ ಕುರಿತು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದ ಸಿದ್ಧಾಂತಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದಾಗ್ಯೂ, ಎನ್‌ಸಿಇಆರ್‌ಟಿಯು ಬಳಿಕ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: Textbook Revision: ಪಠ್ಯ ಪುಸ್ತಕ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ; ಯಾವ ಪಾಠಗಳಿಗೆ ಕೊಕ್?