ನವದೆಹಲಿ: 2024ರ ಲೋಕಸಭೆ ಚುನಾವಣೆಗಾಗಿ (2024 Lok Sabha Election) ಬೆಂಗಳೂರಲ್ಲಿ ಪ್ರತಿಪಕ್ಷಗಳು ಸಭೆಯನ್ನು (Opposition Meet) ಆಯೋಜಿಸುತ್ತಿದ್ದರೆ, ಅತ್ತ ದಿಲ್ಲಿಯಲ್ಲಿ ಜುಲೈ 18, ಮಂಗಳವಾರ ಬಿಜೆಪಿ ಕೂಡ ತನ್ನ ಮಿತ್ರ ಪಕ್ಷಗಳ ಜತೆಗೆ ಎನ್ಡಿಎ ಸಭೆ (NDA Meet) ನಡೆಸಲಿದೆ. ಈ ವಿಷಯವನ್ನು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ (BJP President JP Nadda) ಅವರು ಖಚಿತಪಡಿಸಿದ್ದು, ಈ ಸಭೆಯಲ್ಲಿ 38 ಪಕ್ಷಗಳು ಭಾಗಿಯಾಗಲಿವೆ ಎಂದು ತಿಳಿಸಿದ್ದಾರೆ. ಬೆಂಗಳೂರಲ್ಲಿ ಆಯೋಜಿಸಲಾಗಿರುವ ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್, ಜೆಡಿಯು ಸೇರಿದಂತೆ 20ಕ್ಕೂ ಅಧಿಕ ಪಕ್ಷಗಳು ಪಾಲ್ಗೊಂಡಿವೆ. ಬೆಂಗಳೂರಲ್ಲಿ ಎರಡು ದಿನಗಳ ಕಾಲ ಸಭೆ ನಡೆಯಲಿದೆ.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟ(NDA) ಅಧಿಕಾರದ ಆಸೆಗಾಗಿ ಒಂದಾಗಿದ್ದಲ್ಲ. ಈ ಕೂಟವು ಸೇವೆ ಹಾಗೂ ಭಾರತವನ್ನು ಬಲಪಡಿಸಲು ಒಂದಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ನೀತಿಗಳು, ಕಾರ್ಯಕ್ರಮಗಳ ಜಾರಿಯಿಂದಾಗಿ ಭಾರತವು ವೇಗದಲ್ಲಿ ಪ್ರಗತಿಯನ್ನು ಕಾಣುತ್ತಿದೆ ಎಂದು ಜೆ ಪಿ ನಡ್ಡಾ ಅವರು ತಿಳಿಸಿದ್ದಾರೆ. ಯುಪಿಎ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ, ಆ ಉದ್ದೇಶವೂ ಯುಪಿಎಗೆ ಇಲ್ಲ. ಯುಪಿಎ ಪೂರ್ತಿ ಭ್ರಷ್ಟಾಚಾರ ಮತ್ತು ಹಗರಣಗಳಿಂದ ತುಂಬಿದೆ ಎಂದು ಅವರು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ: 30 vs 24: ಈಗ ಅಸಲಿ ಆಟ ಶುರು! ಕಾಂಗ್ರೆಸ್ ಕೂಟದಲ್ಲಿ 24 ಪಕ್ಷಗಳಿದ್ದರೆ, ಬಿಜೆಪಿಯ ಎನ್ಡಿಎದಲ್ಲಿ 30 ಪಾರ್ಟಿ!
ಯುಪಿಎ ಎಂಬುದು ಕುಟುಂಬವೇ ಆಗಿದೆ. ಅದಕ್ಕೆ ಯಾರ ನಾಯಕತ್ವವೂ ಇಲ್ಲ. ಯಾವುದೇ ಉದ್ದೇಶವೂ ಇಲ್ಲ, ಯಾವುದೇ ನೀತಿಯೂ ಇಲ್ಲ. ನಿರ್ಧಾರ ಕೈಗೊಳ್ಳುವ ತಾಖತ್ತೂ ಇಲ್ಲ. ಯುಪಿಎ ಭ್ರಷ್ಟಾಚಾರಿಗಳು ಮತ್ತು ಹಗರಣಗಳ ತಂಡ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಹೇಳಿದ್ದಾರೆ.
ಮುಂಬರುವ ಲೋಕಸಭೆಯಲ್ಲಿ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಶತಸಿದ್ಧ ಎಂದ ಹೇಳಿದ ಜೆ ಪಿ ನಡ್ಡಾ ಅವರು, 2024ರಲ್ಲಿ ಬಿಜೆಪಿಗೆ ಮತ ನೀಡಲು ದೇಶವು ಈಗಾಗಲೇ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೇತೃತ್ವದಲ್ಲಿ ಎನ್ ಡಿ ಎ ಸರ್ಕಾರವು ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ. ನಮ್ಮ ಒಗ್ಗಟ್ಟು ದೇಶದ ಹಿತಾಸಕ್ತಿಯಿಂದಾಗಿದೆ. ಹಾಗಾಗಿ, ಈ ಒಗ್ಗಟ್ಟನ್ನು ಮುರಿಯಲು ಸಾಧ್ಯವಿಲ್ಲ. ಅದು ಗಟ್ಟಿಯಾಗಿದೆ ಎಂದು ಹೇಳಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.