Site icon Vistara News

Neeraj Chopra : ನಮಸ್ಕಾರ ಪ್ಯಾರಿಸ್​​; ಒಲಿಂಪಿಕ್ಸ್​ ಕ್ರೀಡಾಗ್ರಾಮ ತಲುಪಿದ ಚಿನ್ನದ ಹುಡುಗ ನೀರಜ್ ಚೋಪ್ರಾ

Neeraj Chopra

ಪ್ಯಾರಿಸ್: ಭಾರತದ ಜಾವೆಲಿನ್ ಥ್ರೋ ಸ್ಟಾರ್​ ಹಾಗೂ ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಮಂಗಳವಾರ ಪ್ಯಾರಿಸ್ ನ ಒಲಿಂಪಿಕ್ ನ ಗೇಮ್ಸ್ ವಿಲೇಜ್ ಗೆ ತಲುಪಿದ್ದಾರೆ. ಆಗಸ್ಟ್ 6ರಂದು ಫ್ರಾನ್ಸ್ನ ಸ್ಟೇಡ್ ಡಿ ಫ್ರಾನ್ಸ್​ನಲ್ಲಿ ನಡೆಯಲಿರುವ ಪುರುಷರ ಗ್ರೂಪ್ ಎ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ 26ರ ಹರೆಯದ ನೀರಜ್​ ಕಣಕ್ಕಿಳಿಯಲಿದ್ದಾರೆ. ವಿಶೇಷವೆಂದರೆ, ಟೋಕಿಯೊ 2020 ರ ಈವೆಂಟ್​​ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಹರಿಯಾಣ ಮೂಲದ ಅಥ್ಲೀಟ್ ಹಾಲಿ ಚಾಂಪಿಯನ್ ಆಗಿ ಸ್ಪರ್ಧೆಗೆ ಪ್ರವೇಶಿಸಿದ್ದಾರೆ.

ಕೂಟಕ್ಕೆ ಮುಂಚಿತವಾಗಿ, ಭಾರತದ ಚಿನ್ನದ ಹುಡುಗ ಪ್ಯಾರಿಸ್​​ನ ಒಲಿಂಪಿಕ್ ಗೇಮ್ಸ್ ವಿಲೇಜ್​ಗೆ ಆಗಮಿಸಿದ್ದು, ಟೋಕಿಯೊದಿಂದ ಅವರ ವೀರೋಚಿತ ಪ್ರದರ್ಶನವನ್ನು ಪುನರಾವರ್ತಿಸಲು ಉತ್ಸುಕರಾಗಿದ್ದಾರೆ. ಚೋಪ್ರಾ ಒಂದೆರಡು ಫೋಟೋಗಳಿಗೆ ಪೋಸ್ ನೀಡಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಕೊಟ್ಟಿದ್ದಾರೆ.

ಒಲಿಂಪಿಕ್ಸ್​​ನಲ್ಲಿ ಸತತವಾಗಿ ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಚೋಪ್ರಾ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಟೋಕಿಯೊದಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿ, 26 ವರ್ಷದ ನೀರಜ್​ 87.58 ಮೀಟರ್ ಎಸೆಯುವ ಮೂಲಕ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಚೋಪ್ರಾ ಹಲವಾರು ಗಾಯಗಳಿಂದಾಗಿ ಹೋರಾಡಿದ ನಂತರ ಪ್ಯಾರಿಸ್​​ಗೆ ಸುಗಮ ಪ್ರಯಾಣ ಹೊಂದಿರಲಿಲ್ಲ. ಇದರಿಂದಾಗಿ ಅವರು ಪಂದ್ಯಾವಳಿಗೆ ಮುಂಚಿತವಾಗಿ ಹಲವಾರು ಸ್ಪರ್ಧೆಗಳಿಂದ ಹಿಂದೆ ಸರಿದಿದ್ದರು. ಗಾಯಗಳ ಹೊರತಾಗಿಯೂ ಚಿನ್ನದ ಪದಕ ವಿಜೇತರು ಈವೆಂಟ್​ಗೆ ಮುಂಚಿತವಾಗಿ ಸಾಕಷ್ಟು ವಿಶ್ರಾಂತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: Paris Olympics 2024 : 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್​ ಫೆನ್ಸಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಪಂದ್ಯ ಗೆದ್ದ ಈಜಿಫ್ಟ್​​ನ ನಾದಾ ಹಫೀಜ್​

ಒಲಿಂಪಿಕ್ಸ್​​ನ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅವರು ಒಸ್ಟ್ರಾವಾ ಗೋಲ್ಡನ್ ಸ್ಪೈಕ್ 2024 ನಿಂದ ಹಿಂದೆ ಸರಿದಿದ್ದರು. 2024 ರ ಡೈಮಂಡ್ ಲೀಗ್ ಋತುವಿನ ದೋಹಾ ಲೆಗ್​ನಲ್ಲಿ 88.38 ಮೀಟರ್ ಎಸೆಯುವ ಮೂಲಕ ಅವರನ್ನು ಸೋಲಿಸಿದ ಜೆಕಿಯಾದ ಜಾಕುಬ್ ವಡ್ಲೆಜ್ಚ್ ಅವರಿಂದ ಭಾರತೀಯ ತಾರೆ ಮತ್ತೊಮ್ಮೆ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ.

ಒಲಿಂಪಿಕ್ಸ್​ಗೆ ಮುಂಚಿತವಾಗಿ, ಚೋಪ್ರಾ ತಮ್ಮ ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡದಲ್ಲಿದ್ದೇನೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದಾಗ್ಯೂ ಕ್ರೀಡಾ ವೈಭವದ ಭರವಸೆಯಲ್ಲಿದ್ದಾರೆ.

Exit mobile version