Site icon Vistara News

Neeraj Chopra : ನೀರಜ್​ ಚೋಪ್ರಾಗೆ ರಜತ ಪದಕ; ಪಾಕಿಸ್ತಾನದ ನದೀಮ್​ಗೆ ಒಲಿಂಪಿಕ್​ ದಾಖಲೆಯ ಬಂಗಾರ

Neeraj Chopra

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನ ಭಾರತದ ಸ್ಟಾರ್​ ಜಾವೆಲಿನ್​ ಎಸೆತದಲ್ಲಿ ನೀರಜ್​ ಚೋಪ್ರಾಗೆ (Neeraj Chopra) ತಮ್ಮ ಬಂಗಾರದ ಪದಕವನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಅವರ ಪ್ರತಿಸ್ಪರ್ಧಿ ಹಾಗೂ ನೆರೆಯ ಪಾಕಿಸ್ತಾನದ ಅರ್ಷದ್ ನದೀಮ್ (Arshad Nadeem) ಒಲಿಂಪಿಕ್ಸ್ ದಾಖಲೆಯ 92.97 ಮೀಟರ್ ಎಸೆಯುವ ಮೂಲಕ ಬಂಗಾರ ಗೆದ್ದರು. ಹೀಗಾಗಿ ನೀರಜ್ ಚೋಪ್ರಾ ಅವರಿಗೆ ಬೆಳ್ಳಿಯ ಪದಕ ಲಭಿಸಿತು. ಅವರು 89.45 ದೂರ ಎಸೆಯುವ ಮೂಲಕ ಭಾರತಕ್ಕೊಂದು ಪದಕವನ್ನು ತಂದುಕೊಟ್ಟರು. ಇದು ಭಾರತದ ಪಾಲಿಗೆ ಹಾಲಿ ಆವೃತ್ತಿಯ ಒಲಿಂಪಿಕ್ಸ್​ನಲ್ಲಿ ಐದನೇ ಪದಕ. ನೀರಜ್ ತಂದ ಬೆಳ್ಳಿಯೇ ಅದರಲ್ಲಿ ಗರಿಷ್ಠ ಪದಕವಾಗಿದೆ. ಆದಾಗ್ಯೂ ನೀರಜ್ ಚಿನ್ನ ಗೆಲ್ಲುತ್ತಾರೆಂಬ ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

ನೀರಜ್​ ಚೋಪ್ರಾ ಅವರ ಮೊದಲ ಎಸೆತವೇ ಪೌಲ್​. ಹೀಗಾಗಿ ನಿರಾಸೆಯ ಆರಂಭವಾಯಿತು. ನಂತರದ ಎಸೆತದಲ್ಲಿ 89.45 ಮೀಟರ್ ದೂರ ಎಸೆದರು. ಅಲ್ಲದೆ ಆ ಬಳಿಕದ ನಾಲ್ಕು ಎಸೆತಗಳು ಪೌಲ್​ ಆದವು. ತಮ್ಮ ಎಸೆತಗಳು ನಿರೀಕ್ಷೆಯಷ್ಟು ದೂರ ಹೋಗದ ಕಾರಣ ನಂತರದ ಮೂರು ಬಾರಿ ಅವರು ಅಂತಿಮ ಲೈನ್ ಮೆಟ್ಟಿ ಸ್ವತಃ ಪೌಲ್ ಮಾಡಿದರು. ಅರ್ಷದ್​ 92. ಮೀಟರ್​ಗಿಂತಲೂ ದೂರ ಎಸೆದ ತಕ್ಷಣವೇ ಒತ್ತಡಕ್ಕೆ ಬಿದ್ದ ನೀರಜ್​ಗೆ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ಅರ್ಷದ್​ ತಮ್ಮ ಕೊನೇ ಎಸೆತವನ್ನೂ 91. 79 ಮೀಟರ್ ದೂರ ಎಸೆದರು. ಅಂದ ಹಾಗೆ ಪಾಕಿಸ್ತಾನಕ್ಕೆ 32 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಪದಕವೊಂದು ದೊರಕಿತು. ಅದೂ ಚಿನ್ನ!

ಭಾರತದ ಸೂಪರ್ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಗುರುವಾರ ಮಧ್ಯರಾತ್ರಿ (ಭಾರತೀಯ ಕಾಲಮಾ) ಫೈನಲ್​ಗೇರಿದ್ದ 12 ಸ್ಪರ್ಧಿಗಳ ಜತೆ ಹೋರಾಡಿ ರಜತ ಪದಕ ಗೆದ್ದರು. ಭಾರತದ ಉಳಿದ ಅಥ್ಲೆಟಿಕ್ಸ್ ಗಳ ನಿರಾಶಾದಾಯಕ ಅಭಿಯಾನದ ವೇಳೆ ನೀರಜ್ ಏಕೈಕ ಭರವಸೆಯಾಗಿ ಉಳಿದಿದ್ದರು. ಅವರು ಚಿನ್ನ ಗೆಲ್ಲುವರೆಂಬ ನಿರೀಕ್ಷೆ ಎಲ್ಲ ಭಾರತೀಯರಿಗೆ ಇತ್ತು. ಆದರೆ, ಪಾಕಿಸ್ತಾನದ ಅರ್ಷದ್ ತಮ್ಮೆಲ್ಲ ಶಕ್ತಿಯನ್ನು ಬಳಸಿ ದಾಖಲೆಯ ಎಸೆತವನ್ನು ಎಸೆದು ಚಿನ್ನ ಗೆದ್ದರು.

2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಗೆದ್ದ ಚಿನ್ನದ ಪದಕ ಉಳಿಸಿಕೊಳ್ಳುವುಕ್ಕೆ 26 ವರ್ಷದ ನೀರಜ್​ಗೆ ಸಾಧ್ಯವಾಗಲಿಲ್ಲ. ಒಲಿಂಪಿಕ್ಸ್​ನಲ್ಲಿ ಮತ್ತೊಂದು ಚಿನ್ನ ಗೆಲ್ಲುವ ಅವಕಾಶ ಅವರಿಗೆ ತಪ್ಪಿತು. ಮಂಗಳವಾರ ನಡೆದ ಅರ್ಹತಾ ಸ್ಪರ್ಧೆಯಲ್ಲಿ ನೀರಜ್ 89.34 ಮೀಟರ್ ಎಸೆಯುವ ಮೂಲಕ ನೇರವಾಗಿ ಅರ್ಹತೆ ಪಡೆದಿದ್ದರು. ಆಗಸ್ಟ್ 7, 2021ರಂದು, ನೀರಜ್ ಚೋಪ್ರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಫೈನಲ್​ನಲ್ಲಿ ಅವರ ಎರಡನೇ ಎಸೆತವು 87.58 ಮೀಟರ್ ದೂರ ಹೋಗಿತ್ತು. ಅದರ ಮೂಲಕ ಅವರು ಚಿನ್ನ ಗೆದ್ದಿದ್ದರು.

ಹಲವಾರು ಸಾಧನೆಗಳು

ಹಂಗೇರಿಯ ಬುಡಾಪೆಸ್ಟ್​​ನಲ್ಲಿ ನಡೆದ 2023 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​​ನಲ್ಲಿ ನೀರಜ್ ಚೋಪ್ರಾ 88.17 ಮೀಟರ್ ಎಸೆಯುವ ಮೂಲಕ ಚಿನ್ನ ಗೆದ್ದರು. ಎರಡು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದಂತೆಯೇ, ನೀರಜ್ ಮತ್ತೊಮ್ಮೆ ರಾತ್ರಿಯ ಎರಡನೇ ಎಸೆತದೊಂದಿಗೆ ಅಗ್ರ ಪ್ರಶಸ್ತಿ ಗೆದ್ದರು. ವಿಶ್ವ ಅಥ್ಲೆಟಿಕ್ಸ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೀರಜ್ ಈಗಾಗಲೇ ತಮ್ಮ ವೃತ್ತಿಜೀವನದಲ್ಲಿ ಎರಡು ಬಾರಿ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಜಕಾರ್ತಾದಲ್ಲಿ ನಡೆದ 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಅವರು 88.06 ಮೀಟರ್ ದೂರ ಜಾವೆಲಿನ್ ಅನ್ನು ಮೂರನೇ ಎಸೆತದೊಂದಿಗೆ ಪ್ರಾರಂಭಿಸಿದರು.

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಹ್ಯಾಂಗ್ಝೌನಲ್ಲಿ ನಡೆದ 2023 ರ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ತಮ್ಮ ಜಾವೆಲಿನ್ ಥ್ರೋ ಪ್ರಶಸ್ತಿ ಉಳಿಸಿಕೊಂಡರು. ಆ ಬಾರಿ ನೀರಜ್ 88.88 ಮೀಟರ್ ಎಸೆದು ಸಹ ಆಟಗಾರ ಕಿಶೋರ್ ಜೆನಾ ಅವರನ್ನು ಸೋಲಿಸಿ ಚಿನ್ನ ಗೆದ್ದರು.

ಗೋಲ್ಡ್​ ಕೋಸ್ಟ್​ ಕಾಮನ್ವೆಲ್ತ್​

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ನಡೆದ 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 86.47 ಮೀಟರ್ ಎಸೆಯುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಆದರು. ಆದಾಗ್ಯೂ, ಗಾಯದಿಂದಾಗಿ ಬರ್ಮಿಂಗ್​​ಹ್ಯಾಮ್​ನಲ್ಲಿ ನಡೆದ 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಸ್ಪರ್ಧಿಸಲಿಲ್ಲ.

ಹರಿಯಾಣದ ಅಥ್ಲೀಟ್ ಭುವನೇಶ್ವರದಲ್ಲಿ ನಡೆದ 2017 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕವನ್ನು ಗೆದ್ದರು ಮತ್ತು ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟ 2016 ರಲ್ಲಿ ಪೋಡಿಯಂನಲ್ಲಿ ಅಗ್ರಸ್ಥಾನ ಪಡೆದರು.

ಇದನ್ನೂ ಓದಿ: Paris Olympics 2024: ಕಂಚು ಗೆದ್ದ ಹಾಕಿ ತಂಡದ ಪಂಜಾಬ್​​ನ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ ಘೋಷಿಸಿದ ಪಂಜಾಬ್ ಸರ್ಕಾರ 

2016ರಲ್ಲಿ ಪೋಲೆಂಡ್​ನಲ್ಲಿ ನಡೆದ ಐಎಎಎಫ್ ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ನೀರಜ್ ಚೋಪ್ರಾ ತಮ್ಮ ಪ್ರದರ್ಶನದಿಂದ ಗಮನ ಸೆಳೆದರು. ಫೈನಲ್​ನಲ್ಲಿ 86.48 ಮೀಟರ್ ದೂರ ಎಸೆದು ಹೊಸ ಅಂಡರ್-20 ವಿಶ್ವ ದಾಖಲೆ ನಿರ್ಮಿಸಿದ್ದರು. ಆ ಸಮಯದಲ್ಲಿ ಕೇವಲ 18 ವರ್ಷ ವಯಸ್ಸಿನ ಅವರು ವಿಶ್ವ ದಾಖಲೆಯನ್ನು ಸಾಧಿಸಿದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜ್ಯೂರಿಚ್​ನಲ್ಲಿ ನಡೆದ 2023 ರ ಫೈನಲ್​ನಲ್ಲಿ ನೀರಜ್ ಚೋಪ್ರಾ 88.44 ಮೀಟರ್ ಎಸೆಯುವ ಮೂಲಕ ಗೆದ್ದಿದ್ದರು.

ನೀರಜ್ ಚೋಪ್ರಾ ಚಿನ್ನದ ಪದಕಗಳು

ಸೌತ್ ಏಷ್ಯನ್ ಗೇಮ್ಸ್, ಗುವಾಹಟಿ, 2016, 82.23 ಮೀ
ವಿಶ್ವ ಅಂಡರ್ 20 ಚಾಂಪಿಯನ್​ಶಿಪ್​. ಬೈಡೋಗಸ್ಜ್ 2016. 86.48 ಮೀ ಪೋಲೆಂಡ್
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್, ಭುವನೇಶ್ವರ, 2017, 85.23 ಮೀ.
ಏಷ್ಯನ್ ಗೇಮ್ಸ್ ಜಕಾರ್ತಾ, 2018, 88.06 ಮೀ, ಇಂಡೋನೇಷ್ಯಾ
ಕಾಮನ್ವೆಲ್ತ್ ಗೇಮ್ಸ್ ಗೋಲ್ಡ್ ಕೋಸ್ಟ್, 2018. 86.47 ಮೀ, ಆಸ್ಟ್ರೇಲಿಯಾ
ಟೋಕಿಯೊ ಒಲಿಂಪಿಕ್ಸ್ 2020, 87.58 ಮೀ, ಜಪಾನ್
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ ಬುಡಾಪೆಸ್ಟ್, 2023, 88.17 ಮೀ ಹಂಗೇರಿ
ಏಷ್ಯನ್ ಗೇಮ್ಸ್ ಹ್ಯಾಂಗ್ಝೌ. 2023, 88.88 ಮೀ, ಚೀನಾ

Exit mobile version