Site icon Vistara News

NEET 2024: ನೀಟ್‌ ಅಕ್ರಮ; 1,500 ವಿದ್ಯಾರ್ಥಿಗಳ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಸಮಿತಿ ರಚಿಸಿದ ಕೇಂದ್ರ!

Joint CSIR UGC NET

NTA Postpones Joint CSIR-UGC-NET Examination

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET 2024) ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು (Central Government) ಗ್ರೇಸ್‌ ಮಾರ್ಕ್ಸ್‌ (NEET Grace Marks) ಪಡೆದ 1,500 ವಿದ್ಯಾರ್ಥಿಗಳ ಫಲಿತಾಂಶವನ್ನು ಮರು ಮೌಲ್ಯಮಾಪನ ಮಾಡಲು ಸಮಿತಿಯೊಂದನ್ನು ರಚಿಸಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶನಿವಾರ ಮಾಹಿತಿ ನೀಡಿದೆ.

“ನೀಟ್‌ ಬರೆದ ಅಭ್ಯರ್ಥಿಗಳಿಗೆ ರ‍್ಯಾಂಕ್‌ ನೀಡುವ ಮಾನದಂಡಕ್ಕೆ ಗ್ರೇಸ್‌ ಮಾರ್ಕ್ಸ್‌ ನೀಡಿರುವುದರಿಂದ ಯಾವುದೇ ಪರಿಣಾಮ ಉಂಟಾಗಿಲ್ಲ. ಆದರೂ, ಗ್ರೇಸ್‌ ಮಾರ್ಕ್ಸ್‌ ಪಡೆದವರ ಉತ್ತರ ಪತ್ರಿಕೆಗಳನ್ನು ಮತ್ತೆ ಮೌಲ್ಯಮಾಪನ ಮಾಡಲಾಗುತ್ತದೆ. ಕೇಂದ್ರ ಶಿಕ್ಷಣ ಸಚಿವಾಲಯವು ಈ ಕುರಿತು ಸಮಿತಿಯೊಂದನ್ನು ರಚಿಸಿದೆ. ಮರು ಮೌಲ್ಯಮಾಪನದಿಂದ ವಿದ್ಯಾರ್ಥಿಗಳು ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು ಯಾವುದೇ ಪರಿಣಾಮ ಉಂಟಾಗುವುದಿಲ್ಲ” ಎಂಬುದಾಗಿ ಎನ್‌ಟಿಎ ಮಹಾ ನಿರ್ದೇಶಕ ಸುಬೋಧ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. ಹಾಗೆಯೇ, ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ, ಪ್ರಶ್ನೆಪತ್ರಿಕೆಗಳ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ಪ್ರಕರಣ?

ನೀಟ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌ ಮಾರ್ಕ್ಸ್‌ ಆಧಾರದ ಮೇಲೆ ಟಾಪರ್‌ಗಳಾಗಿದ್ದಾರೆ. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ನೀಟ್‌ ಅಕ್ರಮದ ಕುರಿತು ತನಿಖೆಗೆ ಆಗ್ರಹಿಸಿದ್ದರು.

ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

ಇದನ್ನೂ ಓದಿ: NEET UG 2024: ನೀಟ್‌ನಲ್ಲಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು? ಈ ಟಾಪರ್‌ ಹೇಳೋದು ಕೇಳಿ

Exit mobile version