ಬೆಂಗಳೂರು: ನೀಟ್ ಪಿಜಿ ಪರೀಕ್ಷೆಯ ಬಗ್ಗೆ ಚರ್ಚಿಸಲು ಗೃಹ ಸಚಿವಾಲಯದ ಐ 4 ಸಿ ವಿಭಾಗದಲ್ಲಿ ಸೈಬರ್ ಸೆಲ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆದಿದ್ದು, ಪರೀಕ್ಷಾ ಮೋಸ ತಪ್ಪಿಸಲು ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವ ನಿರ್ಧಾರಕ್ಕೆ ಬರಲಾಗಿದೆ. ವಿವಿಧ ಸರ್ಕಾರಿ ಸಂಸ್ಥೆಗಳು ಸಂಭಾವ್ಯ ಲೋಪದೋಷಗಳನ್ನು ಮೌಲ್ಯಮಾಪನ ಮಾಡಲಾಗುತ್ತಿದ್ದು ಆಗಿರುವ ಅಕ್ರಮಗಳ ಕುರಿತ ತನಿಖೆ ಬಹುತೇಕ ಪೂರ್ಣಗೊಂಡಿದೆ. ಸಭೆಯ ಮೂಲಗಳ ಪ್ರಕಾರ ಪರೀಕ್ಷೆ ಒಂದು ತಿಂಗಳೊಳಗೆ ನಡೆಸುವ ಸಾಧ್ಯತೆಯಿದೆ.
ನೀಟ್ ಪಿಜಿ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಈ ವಾರದ ಅಂತ್ಯದ ವೇಳೆಗೆ ಘೋಷಿಸುವ ನಿರೀಕ್ಷೆಯಿದೆ, ಪರೀಕ್ಷೆಗಳನ್ನು ಆಗಸ್ಟ್ನಲ್ಲಿ ನಡೆಸುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಇಸ್ರೋದ ಮಾಜಿ ಅಧಿಕಾರಿ ಡಾ.ರಾಧಾಕೃಷ್ಣನ್ ನೇತೃತ್ವದ ತಜ್ಞರ ಸಮಿತಿಗೆ ಪರೀಕ್ಷೆ ನಡೆಸುವ ಹೊಣೆಗಾರಿಕೆ ವಹಿಸಲಾಗಿದೆ. ನೀಟ್ ಪಿಜಿ ನಡೆಸುವ ಜವಾಬ್ದಾರಿಯನ್ನು ಹೊಂದಿರುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ಟಿಎ ) ಪ್ರಸ್ತುತ ಹೊಸ ದಿನಾಂಕಗಳನ್ನು ಅಂತಿಮಗೊಳಿಸುವ ಮೊದಲು ಈ ಪರಿಶೀಲನಾ ಸಮಿತಿಯ ಅನುಮೋದನೆಗಾಗಿ ಕಾಯುತ್ತಿದೆ.
ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಪರೀಕ್ಷೆಯ ಸಮಗ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಜೂನ್ 23 ರಂದು ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ನೀಟ್ ಪಿಜಿ ಪರೀಕ್ಷೆ 2024 ರ ಹೊಸ ಮಾಹಿತಿಗಳೇನು?
ಗೃಹ ಸಚಿವಾಲಯದ ಐ 4 ಸಿ ವಿಭಾಗದಲ್ಲಿ ಮಹತ್ವದ ಸಭೆ ನಡೆದಿದೆ ಸೈಬರ್ ಸೆಲ್ನ ಅಧಿಕಾರಿಗಳನ್ನು ಒಳಗೊಂಡಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಭದ್ರತೆ ಖಚಿತಪಡಿಸಿಕೊಳ್ಳಲು ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಅಂತಿಮಗೊಳಿಸಲಾಗುವುದು ಮೊದಲ ನಿರ್ಧಾರವಾಗಿದೆ.
ಇದನ್ನೂ ಓದಿ: Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್
ಯಾವುದೇ ಸಂಭಾವ್ಯ ಲೋಪದೋಷಗಳು ಅಥವಾ ನ್ಯೂನತೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸರ್ಕಾರ ವಿವಿಧ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದೆ. ಗೃಹ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯವು ಇಡೀ ಪ್ರಕ್ರಿಯೆಯ ಸಮಗ್ರ ಮೌಲ್ಯಮಾಪನ ನಡೆಸಲಿದೆ.
ಹಿಂದಿನ ಅಕ್ರಮಗಳ ಕುರಿತ ತನಿಖೆ ಅಂತಿಮ ಹಂತದಲ್ಲಿದೆ, ಅದರ ವರದಿ ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ.