ನವದೆಹಲಿ: ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ (ಕೃಪಾಂಕ) ಪಡೆದಿರುವ 1,563 ಅಭ್ಯರ್ಥಿಗಳಿಗೆ ಜೂನ್ 23ರಂದು ಮರು ಪರೀಕ್ಷೆ ನಡೆಸುವುದಾಗಿ ಕೇಂದ್ರ ಸರ್ಕಾರ ಮತ್ತು ಎನ್ಟಿಎ (National Testing Agency) ಗುರುವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ನೀಟ್-ಯುಜಿ ಪರೀಕ್ಷೆಗೆ ಹಾಜರಾಗುವಾಗ ಅನುಭವಿಸಿದ ಸಮಯದ ನಷ್ಟವನ್ನು ಸರಿದೂಗಿಸಲು ‘ಗ್ರೇಸ್ ಅಂಕ’ ಪಡೆದ 1,563 ಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್ಗಳ ಪ್ರವೇಶಕ್ಕಾಗಿ ನೀಟ್-ಯುಜಿ, 2024 ಪರೀಕ್ಷೆಗೆ ಸಂಬಂಧಿಸಿದ ವಿವಾದಕ್ಕೆ ಕುರಿತ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಪೀಠಕ್ಕೆ ಕೇಂದ್ರ ಸರ್ಕಾರ ಹಾಗೂ ಎನ್ಟಿಎ ಮಾಹಿತಿ ನೀಡಿದೆ.
ಗ್ರೇಸ್ ಅಂಕಗಳನ್ನು ನೀಡಿದ 1,563 ನೀಟ್-ಯುಜಿ 2024 ಅಭ್ಯರ್ಥಿಗಳ ಸ್ಕೋರ್ ಕಾರ್ಡ್ಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಸಮಿತಿ ತೆಗೆದುಕೊಂಡಿದೆ. ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ತೆಗೆದುಕೊಳ್ಳುವ ಆಯ್ಕೆಯನ್ನು ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ಗೆ ಏಜೆನ್ಸಿ ತಿಳಿಸಿದೆ. ಪರೀಕ್ಷೆಗಳನ್ನು ಜೂನ್ 23 ರಂದು ನಡೆಸಲಾಗುವುದು ಮತ್ತು ಜೂನ್ 30 ರೊಳಗೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಎನ್ಟಿಎ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಜುಲೈ 6ರಿಂದ ಕೌನ್ಸೆಲಿಂಗ್
ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್ಗಳ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ಜುಲೈ 6 ರಿಂದ ಪ್ರಾರಂಭವಾಗಲಿದೆ ಎಂದು ಎನ್ಟಿಎ ತಿಳಿಸಿದೆ. ಮರುಪರೀಕ್ಷೆಗೆ ಸಂಬಂಧಿಸಿದಂತೆ ಎನ್ಟಿಎ ಕೊಟ್ಟಿರುವ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ. ಇವೆಲ್ಲದರ ನಡುವೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಡೆ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಕೌನ್ಸೆಲಿಂಗ್ ಮುಂದುವರಿಯುತ್ತದೆ ಮತ್ತು ನಾವು ಅದನ್ನು ನಿಲ್ಲಿಸುವುದಿಲ್ಲ. ಪರೀಕ್ಷೆ ನಡೆದ ಬಳಿಕ ಎಲ್ಲವೂ ಒಟ್ಟಾಗಿ ನಡೆಯುತ್ತದೆ. ಆದ್ದರಿಂದ ಭಯಪಡಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಯ ನೀಡಿದೆ.
ಬಹು ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಅಕ್ರಮಗಳ ನಡುವೆ ಮೇ 5 ರಂದು ಪರೀಕ್ಷೆಯನ್ನು ನಡೆಸಲಾಯಿತು ಎಂದು ಎನ್ಟಿಎ ವಿರುದ್ಧ ಸುಪ್ರೀಂ ಕೋರ್ಟ್ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರಶ್ನೆ ಪತ್ರಿಕೆ ಸೋರಿಕೆಯು ಸಂವಿಧಾನದ 14 ನೇ ವಿಧಿಯ (ಸಮಾನತೆಯ ಹಕ್ಕು) ಉಲ್ಲಂಘನೆಯಾಗಿದೆ. ಏಕೆಂದರೆ ಇದು ನ್ಯಾಯಯುತ ರೀತಿಯಲ್ಲಿ ಪರೀಕ್ಷೆ ಬರೆದ ಇತರ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತೆ. ಅಲ್ಲದೆ ಅಕ್ರಮವಾಗಿ ಬರೆದ ಅಭ್ಯರ್ಥಿಗಳಿಗೆ ಅನಗತ್ಯ ಪ್ರಯೋಜನವನ್ನು ನೀಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ನೀಟ್ ಪರೀಕ್ಷೆಯಲ್ಲಿ ಅಕ್ರಮ
ಕೆಲವೊಂದು ಸಮಸ್ಯೆಗಳಿಂದಾಗಿ 1,563 ಅಭ್ಯರ್ಥಿಗಳಿಗೆ ಸಮಯ ನಷ್ಟವಾಗಿದೆ ಎಂದು ಕೃಪಾಂಕವನ್ನು ನೀಡಲಾಗಿತ್ತು. ಅಲ್ಲದೆ ಈ ಅಂಕಗಳನ್ನು ಪಡೆದ ಅಭ್ಯರ್ಥಿಗಳ ಗರಿಷ್ಠ ರ್ಯಾಂಕ್ಗಳನ್ನು ಪಡೆದಿದ್ದರು. ಇದು ಅನುಮಾನಕ್ಕೆ ಕಾರಣವಾಯಿತು. ಪೂರ್ವಯೋಜಿತ ಕೃತ್ಯ ಹಾಗೂ ಪ್ರಶ್ನಾ ಪತ್ರಿಕೆಯ ಸೋರಿಕೆ ಎಂಬುದಾಗಿ ಗದ್ದಲವೆದ್ದಿತು. ದೇಶಾದ್ಯಂತ ಪರೀಕ್ಷೆ ಬರೆದ ಅಭ್ಯರ್ಥಿಗಳು ಮೋಸ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಈ ಅಕ್ರಮಗಳನ್ನು ಎತ್ತಿ ತೋರಿಸಿದ್ದವು. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಎಸ್ಐಟಿ ತನಿಖೆ ನಡೆಸಬೇಕೆಂದು ಎಎಪಿ ಒತ್ತಾಯಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, “ಲಕ್ಷಾಂತರ ಮಕ್ಕಳು ನೀಟ್ ನಂತಹ ಪರೀಕ್ಷೆಗಳಿಗೆ ಕಠಿಣ ತಯಾರಿ ನಡೆಸುತ್ತಾರೆ/ ಅದಕ್ಕಾಗಿ ತಯಾರಿ ನಡೆಸಲು ತಮ್ಮ ಜೀವನದ ಅತ್ಯಂತ ಅಮೂಲ್ಯ ಕ್ಷಣಗಳನ್ನು ಕಳೆಯುತ್ತಾರೆ. ಇಡೀ ಕುಟುಂಬವು ಅವರ ಬೆನ್ನಿಗೆ ನಿಲ್ಲುತ್ತದೆ. ಆದರೆ ವರ್ಷದಿಂದ ವರ್ಷಕ್ಕೆ ಈ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಫಲಿತಾಂಶಗಳಿಗೆ ಸಂಬಂಧಿಸಿದ ಅಕ್ರಮಗಳು ವರದಿಯಾಗುತ್ತಿವೆ ಎಂದು ಹೇಳಿದ್ದರು.