ನವದೆಹಲಿ: ನೀಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿರು ಜತೆಗೆ ದೇಶಾದ್ಯಂತ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮುಖ್ಯಸ್ಥ ಸುಬೋಧ್ ಕುಮಾರ್ ಸಿಂಗ್ ಅವರನ್ನು ಕೇಂದ್ರ ಸರ್ಕಾರ ವಜಾಗೊಳಿಸಿದೆ. ನೀಟ್, ಯುಜಿಸಿ-ನೆಟ್, ಸಿಯುಇಟಿ ಮತ್ತು ಜೆಇಇ (ಮುಖ್ಯ) ನಡೆಸುವ ಪರೀಕ್ಷಾ ಸಂಸ್ಥೆಯ ಹೊಸ ಮಹಾನಿರ್ದೇಶಕರಾಗಿ ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಿಸಲಾಗಿದೆ.
1985ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಸುಬೋಧ್ ಕುಮಾರ್ ಸಿಂಗ್ ಅವರು ಪ್ರಧಾನಿ ಕಚೇರಿಯ ಸಲಹೆಗಾರ ಅಮಿತ್ ಖರೆ ಅವರಿಗೆ ಚಿರಪರಿಚಿತರು. ಖರೋಲಾ ಈ ಹಿಂದೆ ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.
ಪರೀಕ್ಷೆಯ ಮುನ್ನಾದಿನದಂದೇ ಕೆಲವು ರಾಜ್ಯಗಳಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಬೆಳಕಿಗೆ ಬಂದ ನಂತರ ದೇಶಾದ್ಯಂತ ಭಾರಿ ಪ್ರತಿಭಟನೆಗಳ ಮಧ್ಯೆ ವಜಾ ಪ್ರಕ್ರಿಯೆ ನಡೆದಿದೆ. ಪರೀಕ್ಷೆ ಬರೆದವರಲ್ಲಿ 67 ಅಭ್ಯರ್ಥಿಗಳು 720ಕ್ಕೆ 720 ಪರಿಪೂರ್ಣ ಅಂಕಗಳನ್ನು ಪಡೆದ ನಂತರ ನೀಟ್ ಫಲಿತಾಂಶಗಳು ಅನುಮಾನಕ್ಕ ಎಡೆ ಮಾಡಿಕೊಟ್ಟವು,
1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಿದ ಬಳಿಕ ವಿವಾದವು ಉದ್ಭವಿಸಿದ್ದವು. ಇದು ವ್ಯಾಪಕ ಪ್ರತಿಭಟನೆಗಳು ನಡೆದವು ಹಾಗೂ ಕೋರ್ಟ್ನಲ್ಲಿ ಅರ್ಜಿಗಳು ಸಲ್ಲಿಕೆಯಾದವು. ಪರೀಕ್ಷೆಯನ್ನು ಎನ್ಟಿಎ ನಿರ್ವಹಿಸಿದ ರೀತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿತ್ತು.
ಇದನ್ನೂ ಓದಿ: NEET UG Row : ರಾಷ್ಟ್ರೀಯ ಪರೀಕ್ಷಾ ಪ್ರಕ್ರಿಯೆ ಸುಧಾರಣೆಗೆ ಇಸ್ರೋ ಮಾಜಿ ಮುಖ್ಯಸ್ಥರು ಸೇರಿದಂತೆ 7 ಮಂದಿಯ ಸಮಿತಿ ರಚನೆ
ಎನ್ಟಿಎ ಈ ವಾರದ ಆರಂಭದಲ್ಲಿ ಯುಜಿಸಿ-ನೆಟ್ ಪರೀಕ್ಷೆ ರದ್ದುಗೊಳಿಸಿತು. ಪ್ರಶ್ನೆ ಪತ್ರಿಕೆ ಡಾರ್ಕ್ ನೆಟ್ ನಲ್ಲಿ ಸೋರಿಕೆಯಾಗಿರುವುದು ಕಂಡುಬಂದ ಬಳಿಕ ಈ ತೀರ್ಪು ಪ್ರಕಟಗೊಂಡಿತು.
ಶಿಕ್ಷಣ ಸಚಿವರು ಗರಂ
ಪ್ರಶ್ನೆ ಪತ್ರಿಕೆಗಳ ಸೋರಿಕೆಯು ಎನ್ಟಿಎ ಕಡೆಯಿಂದ ಸಾಂಸ್ಥಿಕ ವೈಫಲ್ಯ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಎನ್ಟಿಎ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ಶನಿವಾರ ಪ್ರಕಟಿಸಿದೆ.
ಪರೀಕ್ಷಾ ಪ್ರಕ್ರಿಯೆಯ ಕಾರ್ಯವಿಧಾನದಲ್ಲಿ ಸುಧಾರಣೆಗಳು, ಡೇಟಾ ಭದ್ರತಾ ಪ್ರೋಟೋಕಾಲ್ಗಳ ಸುಧಾರಣೆ ಮತ್ತು ಪರೀಕ್ಷಾ ಏಜೆನ್ಸಿಯ ರಚನೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಶಿಫಾರಸುಗಳನ್ನು ಮಾಡುವ ಕೆಲಸವನ್ನು ಏಳು ಸದಸ್ಯರ ಸಮಿತಿಗೆ ವಹಿಸಲಾಗಿದೆ. ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ನಿರ್ದೇಶಿಸಲಾಗಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.